
ಹಾವೇರಿ: ‘ಜಾಗತಿಕ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ. ಎಲ್ಲ ಶರಣರು ನುಡಿದಂತೆ ನಡೆದಿದ್ದಾರೆ. ಅದಕ್ಕಾಗಿಯೇ ಅವರ ವಚನಗಳಿಗೆ ಇಂದಿಗೂ ಪ್ರಾಧ್ಯಾನ್ಯತೆಯಿದೆ. ಶರಣರ ವಚನಗಳ ತತ್ವಗಳನ್ನು ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು’ ಎಂದು ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
ಇಲ್ಲಿಯ ವಿನಾಯಕನಗರದ ಬಿ–ಬ್ಲಾಕ್‌ನಲ್ಲಿರುವ ಗಂಗಾಧರ ನಂದಿ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ‘ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ–2026 ಹಾಗೂ ವಚನ ಗ್ರಂಥ ಮಹಾ ರಥೋತ್ಸವ’ ಅಂಗವಾಗಿ ಭಾನುವಾರ ಜರುಗಿದ ‘ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಿಜಶರಣ ಅಂಬಿಗರ ಚೌಡಯ್ಯ ಅವರ ವಚಗಳು ಶ್ರೇಷ್ಠತೆಯಿಂದ ಕೂಡಿವೆ. ಮಕ್ಕಳಿಗೆ ವಚನಗಳ ಮಹತ್ವ ತಿಳಿಸುವ ಹಾಗೂ ವಚನಗಳ ಮೂಲಕ ಅವರ ಬಾಳು ಬೆಳಗುವ ಉದ್ದೇಶದಿಂದ ಪ್ರತಿ ವರ್ಷವೂ ವಚನಗಳ ಕಂಠಪಾಠ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಇದು ಮೂರನೇ ವರ್ಷದ ಸ್ಪರ್ಧೆಯಾಗಿದೆ’ ಎಂದರು.
‘ಮಕ್ಕಳು ವಚನಗಳನ್ನು ಕೇವಲ ಕಂಠಪಾಠ ಮಾಡುವುದಷ್ಟೇ ಅಲ್ಲದೇ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿಯಬೇಕು. ಅವಾಗಲೇ ಶರಣರ ಆಶಯ ಈಡೇರುತ್ತದೆ. ಮನುಷ್ಯನನ್ನು ಸಂಸ್ಕಾರವಂತರನ್ನಾಗಿ ಮಾಡುವ ಶಕ್ತಿ ವಚನಗಳಿಗಿದೆ’ ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ, ವೈ.ಬಿ. ಆಲದಕಟ್ಟಿ, ಎಚ್.ಎಂ. ದಂಡಿನ, ನಾಗಪ್ಪ ಶೇಷಗಿರಿ, ಶಂಕರ ಸುತಾರ, ಪರಶುರಾಮ ಸೊನ್ನದ, ಬಸವರಾಜ ಕಳಸೂರ, ಮಹಾಂತೇಶ ನಿಟ್ಟೂರು, ಅರ್ಚನಾ ಜೇಡರ, ಕಾಂತೇಶ ಅಂಬಿಗೇರ, ನಿರ್ಣಾಯಕರಾದ ಹೊನ್ನಪ್ಪ ಹೊನ್ನಪ್ಪನವರ, ಕಾಂತೇಶರೆಡ್ಡಿ ಗೋಡಿಹಾಳ, ಲಕ್ಷ್ಮಣ ಶೇಷಪ್ಪ ದೊಂಡೆ, ಶ್ರೀಧರ ಅಗಸಿಬಾಗಿಲ ಹಾಗೂ ಇತರರು ಇದ್ದರು.
ಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಹಾವೇರಿ, ವಿಜಯಪುರ, ಬೀದರ, ಬೆಳಗಾವಿ, ಗದಗ, ಶಿವಮೊಗ್ಗ, ದಾವಣಗೆರೆ, ಧಾರವಾಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ತಾವು ಕಂಠಪಾಠ ಮಾಡಿದ ವಚನಗಳನ್ನು ಪ್ರಸ್ತುತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.