ಸವಣೂರು: ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ತಾಲ್ಲೂಕಿನಲ್ಲಿ ಹರಿದಿರುವ ವರದೆ ಮೈದುಂಬಿ ಹರಿಯುತ್ತಿದೆ. ನದಿ ತೀರದ ತಾಲ್ಲೂಕಿನ ಕೆಲ ಗ್ರಾಮಸ್ಥರು ಹಾಗೂ ರೈತರು ಆತಂಕಕಕ್ಕೆ ಒಳಗಾಗಿದ್ದಾರೆ.
ವರದಾ ನದಿ ತನ್ನ ಒಡಲನ್ನು ತುಂಬಿಕೊಂಡು ಹರಿಯುತ್ತಿರುವದರಿಂದ ಸವಣೂರು ತಾಲ್ಲೂಕು ಕೇಂದ್ರದಿಂದ ದೇವಗಿರಿ ಮೂಲಕ ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುವ ರಸ್ತೆಯಲ್ಲಿರುವ ಹಳೆಯ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿದೆ.
ನಿರಂತರ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನಲ್ಲಿ ರೈತರು ಬಿತ್ತಿದ ಬೆಳೆ ತೇವಾಂಶದ ಹೆಚ್ಚಳದಿಂದ ಜವಳು ಹಿಡಿದು ಭೂಮಿಯಲ್ಲಿಯೆ ನಿಟ್ಟುಸಿರು ಬಿಡುತ್ತಿರುವದು ಒಂದೆಡೆಯಾದರೆ, ನದಿ ದಡದಲ್ಲಿರುವ ಹೊಲಗಳಲ್ಲಿನ ಬೆಳೆ ಸಂಪೂರ್ಣ ನಾಶವಾಗುವ ಹಂತಕ್ಕೆ ತಲುಪಿದೆ. ರೈತರು ಆತಂತಕ್ಕೆ ಒಳಗಾಗಿದ್ದಾರೆ.
ತಾಲ್ಲೂಕಿನ ಹಳೇಹಲಸೂರ ಗ್ರಾಮದಿಂದ ಪ್ರವೇಶ ಪಡೆಯುವ ವರದಾ ನದಿ ತವರಮೆಳ್ಳಿಹಳ್ಳಿ, ಕುಣಿಮೆಳ್ಳಿಹಳ್ಳಿ, ಕಲಕೋಟಿ, ಮನ್ನಂಗಿ, ಮಂಟಗಣಿ, ಕಳಸೂರ, ಹಿರೇಮೂಗದೂರ, ನದಿನೀರಲಗಿ, ಚಿಕ್ಕಮೂಗದೂರ ಸೇರಿದಂತೆ ವಿವಿಧ ಗ್ರಾಮಗಳ ಮೂಲಕ ಹರಿದಿದೆ.
ನದಿ ಹರಿವು ಅಪಾಯಮಟ್ಟ ತಲುಪದಿದ್ದರೂ ಕೆಲ ಗ್ರಾಮಸ್ಥರು ಆಂತಕ ಎದುರಿಸುವಂತಾಗಿದೆ. ಹಲವಾರು ದಶಕಗಳಿಂದ ಪ್ರತಿ ವರ್ಷ ಮಳೆಗಾಲದಲ್ಲಿ ನದಿ ಹರಿವು ಹೆಚ್ಚಳಗೊಂಡ ಸಂದರ್ಭದಲ್ಲಿ ತಾಲ್ಲೂಕಿನ ಕುಣಿಮೆಳ್ಳಿಹಳ್ಳಿ, ಮನ್ನಂಗಿ, ಮೆಳ್ಳಾಗಟ್ಟಿ, ಬರದೂರ ಗ್ರಾಮಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ್ಯಗೊಳ್ಳುವದು ಸಾಮಾನ್ಯವಾಗಿದೆ.
ಬರದೂರ ಹಾಗೂ ಕುಣಿಮೆಳ್ಳಿಹಳ್ಳಿ ಗ್ರಾಮಗಳ ಈ ಸಮಸ್ಯಗೆ ಸರ್ಕಾರ ಹಾಗೂ ತಾಲ್ಲೂಕು ಆಡಳಿತ ಈ ಹಿಂದೇ ಸ್ಫಂದಿಸಿ ಗ್ರಾಮಸ್ಥರಲ್ಲಿ ಕೆಲವರಿಗೆ ಪ್ಲಾಟ್ ಹಾಗೂ ನಿವೇಶನ ಮಂಜೂರುಗೊಳಿಸಿದ್ದರು. ಆದರೆ, ಸಾರ್ವಜನಿಕರು ಹಳೆಯ ಮನೆ ಹಾಗೂ ಆಸ್ತಿ ಬಿಟ್ಟು ತೆರಳದ ಹಿನ್ನಲೆಯಲ್ಲಿ ನದಿ ಹೆಚ್ಚಳಗೊಂಡ ಸಂದರ್ಭದಲ್ಲಿ ಪರದಾಟಕ್ಕೆ ಒಳಗಾಗುತ್ತಾರೆ. ಬರದೂರ ಗ್ರಾಮ ಸ್ಥಳಾಂತರಕ್ಕೆ ಈಗಾಗಲೇ ನಿವೇಶನ ಗುರುತಿಸಿದ್ದು ಮುಂದಿನ ಹಂತದ ಕಾಮಗಾರಿಯೊಂದಿಗೆ ಕಾರ್ಯ ಕೈಗೊಳ್ಳಬೇಕಿದೆ.
ನದಿ ನೀರಿನ ಮಟ್ಟ 12 ಮೀವರೆಗೂ ಅಪಾಯ ಎದುರಾಗುವದಿಲ್ಲ. ಇಂದಿಗೆ ಸುಮಾರು 5.5 ಮೀ.ಗಿಂತ ಹೆಚ್ಚು ನದಿ ನೀರಿನ ಮಟ್ಟ ಇರುವ ಹಿನ್ನಲೆಯಲ್ಲಿ ಅಪಾಯದ ಮಟ್ಟ ದೂರದಲ್ಲಿದ್ದರು ಸಹ ಮುನ್ನೆಚ್ಚರಿಕೆ ಕ್ರಮ ವಹಿಸುವದು ಅವಶ್ಯವಾಗಿದೆ.
ತಾಲ್ಲೂಕಿನ ಒಟ್ಟು 44 ಸಾವಿರ ಹೆಕ್ಟರ್ ಕೃಷಿ ಭೂಮಿಯಲ್ಲಿ ಶೇ 30ರಷ್ಟು ಕೃಷಿಭೂಮಿ ವರದಾ ನದಿ ದಡದಲ್ಲಿರುವ ಹಿನ್ನಲೆಯಲ್ಲಿ ಶೀಥ(ಜವಳ)ದಿಂದ ಇಳುವರಿ ಕುಂಟಿತ ಹಾಗೂ ರೈತರಿಗೆ ಆತಂಕ ಸಹಜವಾಗಿದೆ. ಸವಣೂರು ತಾಲ್ಲೂಕು ಎರಡು ಹೋಬಳಿ ಹೊಂದಿದ್ದು, ಸವಣೂರು ಹೋಬಳಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಹಾಗೂ ಹತ್ತಿಮತ್ತೂರ ಹೋಬಳಿ ಹಾವೇರಿ ಮೀಸಲು ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತವೆ.
‘ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ’
ವರದಾ ನದಿ ನಿರೀನಮಟ್ಟ ಅಪಾಯದ ರೀತಿಯಲ್ಲಿ ಹರಿಯುತ್ತಿಲ್ಲ. ಅಪಾಯ ಎದುರಿಸುವ ಮನ್ನಂಗಿ, ಬರದೂರ, ಕುಣಿಮೆಳ್ಳಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೆಟ್ಟಿ ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತಿ ಮೂಡಿಸಲಾಗಿದೆ. ಕುಣ್ಣಿಮೆಳ್ಳಿಹಳ್ಳಿ ಸ್ಥಳಾಂತರ (ಸಿಪ್ಪಟಿಂಗ್) ಕಾರ್ಯ ಕೈಗೊಳ್ಳಲಾಗಿದೆ. ಮನ್ನಂಗಿ, ಮೆಳ್ಳಾಗಟ್ಟಿ ಹಾಗೂ ಬರದೂರ ಗ್ರಾಮಗಳ ಸ್ಥಳಾಂತರಕ್ಕೆ ಯೋಜನೆಯೊಂದಿಗೆ ಕಾರ್ಯ ಆರಂಬಿಸಲಾಗುತ್ತಿದೆ.ಭರತಕುಮಾರ ಕೆ.ಎನ್ ತಹಶೀಲ್ದಾರ್
ವರದಾ ತೀರದ ತಾಲ್ಲೂಕಿನ ಗ್ರಾಮಗಳ ಸಾರ್ವಜನಿಕರು ಹಾಗೂ ರೈತರ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು. ತಪ್ಪಿದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರ ಹಾಗೂ ಅಧಿಕಾರಿಗಳು ನೇರ ಹೊಣೆಗಾರರು. ಬೇಳೆ ಹಾನಿಯಾದರೆ ಪರಿಹಾರ ನೀಡುತ್ತಾರೆ. ಪ್ರಾಣ ಹಾನಿಗೆ ಯಾರು ಹೊಣೆ?ಚಂದ್ರಶೇಖರ ಅಕ್ಕಿ, ಕುಣಿಮೆಳ್ಳಿಹಳ್ಳಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.