ADVERTISEMENT

ಹಾವೇರಿ: ತರಕಾರಿ ದುಬಾರಿ, ಗ್ರಾಹಕರ ಜೇಬಿಗೆ ಕತ್ತರಿ

ಮಳೆಯ ಕೊರತೆಯಿಂದ ಮಾರುಕಟ್ಟೆಗೆ ಆವಕ ಇಳಿಕೆ; 200ರ ಗಡಿಯತ್ತ ಬೀನ್ಸ್‌, ಬಟಾಣಿ ದರ

ಸಿದ್ದು ಆರ್.ಜಿ.ಹಳ್ಳಿ
Published 18 ಜೂನ್ 2023, 6:03 IST
Last Updated 18 ಜೂನ್ 2023, 6:03 IST
ಹಾವೇರಿ ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ತರಕಾರಿ ವ್ಯಾಪಾರದ ದೃಶ್ಯ   – ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
ಹಾವೇರಿ ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ತರಕಾರಿ ವ್ಯಾಪಾರದ ದೃಶ್ಯ   – ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಹಾವೇರಿ: ಮಳೆ ಕೊರತೆಯಿಂದ ತರಕಾರಿ ಇಳುವರಿ ಕುಂಠಿತಗೊಂಡಿದೆ. ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಕಾಯಿ ಪಲ್ಲೆ ಪೂರೈಕೆಯಾಗದ ಕಾರಣ, ತರಕಾರಿಗಳ ದರಗಳು ದುಬಾರಿಯಾಗಿ ಗ್ರಾಹಕರಿಗೆ ಹೊರೆಯಾಗಿವೆ. 

ಕಳೆದ ವಾರಕ್ಕೆ ಹೋಲಿಸಿದರೆ ಬಹುತೇಕ ತರಕಾರಿ ದರಗಳು ದ್ವಿಗುಣಗೊಂಡಿವೆ. ಸೊಪ್ಪುಗಳ ದರವೂ ಏರಿಕೆಯಾಗಿ ಗ್ರಾಹಕರ ಕೈ ಸುಡುತ್ತಿವೆ. ಕಳೆದ ವಾರ ಕೆ.ಜಿ.ಗೆ ₹120 ಇದ್ದ ಬೀನ್ಸ್‌ ಮತ್ತು ಬಟಾಣಿ ₹180ರಿಂದ 200ಕ್ಕೆ ಏರಿಕೆಯಾಗಿದೆ. ಟೊಮೆಟೊ, ಬದನೆಕಾಯಿ, ಬೀಟ್‌ರೂಟ್‌, ಹೀರೆಕಾಯಿ ಕೆ.ಜಿ.ಗೆ ₹40ರಿಂದ ₹60ಕ್ಕೆ ದರ ಹೆಚ್ಚಳವಾಗಿದೆ. 

ಸೊಪ್ಪುಗಳ ದರ ದುಪ್ಪಟ್ಟು: ಕೊತ್ತಂಬರಿ, ಮೆಂತ್ಯ, ಪಾಲಕ್‌, ದಂಟು, ರಾಜಗಿರಿ, ಸಬ್ಬಸಿಗೆ ಸೊಪ್ಪುಗಳ ಕಂತೆ ಕಳೆದ ವಾರ ₹5 ಇದ್ದದ್ದು, ಈ ವಾರ ₹10ಕ್ಕೆ ಏರಿಕೆಯಾಗಿದೆ. ಈರುಳ್ಳಿ ಕೆ.ಜಿ.ಗೆ ₹20ರಿಂದ ₹30ಕ್ಕೆ, ಬೆಳ್ಳುಳ್ಳಿ ಕೆ.ಜಿ.ಗೆ ₹80ರಿಂದ ಬರೋಬ್ಬರಿ ₹160ಕ್ಕೆ ದರ ದ್ವಿಗುಣಗೊಂಡಿದೆ. 

ADVERTISEMENT

ಜಿಲ್ಲೆಯಲ್ಲಿ ವಾರ್ಷಿಕ 800 ಮಿ.ಮೀ ವಾಡಿಕೆ ಮಳೆಯಾಗಬೇಕು. 2023ರ ಜನವರಿಯಿಂದ ಜೂನ್‌ 10ರ ವರೆಗೆ 160 ಮಿ.ಮೀ. ವಾಡಿಕೆ ಮಳೆಗೆ ಕೇವಲ 95.3 ಮಿ.ಮೀ (ಶೇ 59) ಮಳೆಯಾಗಿದ್ದು, ಶೇ 41ರಷ್ಟು ಮಳೆ ಕೊರತೆಯಾಗಿದೆ.

ಬಾಡುತ್ತಿರುವ ಬೆಳೆ: ಮಳೆ ಬಾರದ ಕಾರಣ ಬಿಸಿಲಿನ ತಾಪ ಜಾಸ್ತಿಯಾಗಿ ತರಕಾರಿ, ಸೊಪ್ಪುಗಳು ಬಾಡಿ ಹೋಗುತ್ತಿವೆ. ಅಂತರ್ಜಲ ಮಟ್ಟ ಇಳಿಕೆಯಾಗಿ ಕೊಳವೆಬಾವಿಗಳು ಒಣಗುತ್ತಿವೆ. ಹೀಗಾಗಿ ತರಕಾರಿ ಬೆಳೆಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಬೇಸಿಗೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತರಕಾರಿ ಬೆಳೆಯನ್ನು ಉಳಿಸಿಕೊಳ್ಳುವುದೇ ಸವಾಲಿನ ಕೆಲಸ ಎನ್ನುತ್ತಾರೆ ರೈತರು. 

ಪೂರೈಕೆ ಇಳಿಕೆ: ಮಾರುಕಟ್ಟೆಗೆ ಉತ್ತಮ ಇಳುವರಿಯ ಕಾಯಿ ಪಲ್ಲೆಗಳು ಬರುತ್ತಿಲ್ಲ. ನೀರಸೌತೆ, ಅವರೆಕಾಯಿ, ಮೆಂತ್ಯ, ಕೊತ್ತಂಬರಿ, ಟೊಮೆಟೊ, ಬೀನ್ಸ್‌ ಪೂರೈಕೆ ತೀವ್ರ ಕುಸಿದಿದೆ. ಗುಣಮಟ್ಟವಿ‌ಲ್ಲದ ಉತ್ಪನ್ನಗಳಿಗೂ ದುಬಾರಿ ಬೆಲೆ ಇದೆ. ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವ ಕಾರಣ ಸಹಜವಾಗಿಯೇ ದರ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿ ಶಂಕರಗೌಡ ಹಳೇಮನಿ. 

ಹಾವೇರಿ ಎಪಿಎಂಸಿಗೆ ಬೆಳಗಾವಿ, ಹುಬ್ಬಳ್ಳಿ ಕಡೆಯಿಂದ ಹೆಚ್ಚಿನ ತರಕಾರಿ ಪೂರೈಕೆಯಾಗುತ್ತದೆ. ಆಂಧ್ರ, ತಮಿಳುನಾಡು, ಬೆಳಗಾವಿ ಕಡೆಯಿಂದ ಮೆಣಸಿನಕಾಯಿ, ಕೋಲಾರದಿಂದ ಟೊಮೆಟೊ, ಹುಬ್ಬಳ್ಳಿಯಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗುತ್ತದೆ. ಬೆಂಡಿಕಾಯಿ, ಹೀರೇಕಾಯಿ, ಚವಳಿ ಕಾಯಿ, ಸೊಪ್ಪು ಇತರ ತರಕಾರಿಗಳು ಸ್ಥಳೀಯ ರೈತರಿಂದಲೂ ಹಾವೇರಿ ಮಾರುಕಟ್ಟೆಗೆ ಬರುತ್ತವೆ. 

ತರಕಾರಿ ದರಗಳು ಹೆಚ್ಚಳಗೊಂಡಿರುವ ಕಾರಣ ಗ್ರಾಹಕರು ವಿರಳವಾಗಿದ್ದುದು ಹಾವೇರಿ ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ಶುಕ್ರವಾರ ಕಂಡು ಬಂದಿತು. ‘ನಮ್ಮ ಬಜೆಟ್‌ನಲ್ಲಿ ಎಷ್ಟು ತರಕಾರಿ ಬರುತ್ತವೋ ಅಷ್ಟನ್ನು ಕೊಳ್ಳುತ್ತೇವೆ. ದರ ಕಡಿಮೆಯಿದ್ದಾಗ ಜಾಸ್ತಿ ಕೊಳ್ಳೋದು, ದರ ಹೆಚ್ಚಾದಾಗ ಕಡಿಮೆ ಖರೀದಿ ಮಾಡುತ್ತೇವೆ’ ಎಂದು ಗ್ರಾಹಕರಾದ ಸುನಂದಾ, ಶುಭಾ ತಮ್ಮ ಲೆಕ್ಕಾಚಾರ ಮುಂದಿಟ್ಟರು.

ನಿತ್ಯ 30 ಕೆ.ಜಿ. ಬೀನ್ಸ್‌ ಮಾರುತ್ತಿದ್ದ ನಾನು ಈಗ 10 ಕೆ.ಜಿ. ಮಾರುತ್ತಿದ್ದೇನೆ. ನಿತ್ಯ 10 ಬಾಕ್ಸ್‌ ಟೊಮೆಟೊ ಸೇಲ್‌ ಆಗುತ್ತಿತ್ತು. ಈಗ 3 ಬಾಕ್ಸ್‌ ಅಷ್ಟೆ.
– ಅಕ್ಬರ್‌ ಅಲಿ ಮಂಟೂರು ತರಕಾರಿ ವ್ಯಾಪಾರಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆ ಹಾವೇರಿ
ಮಳೆ ಕೊರತೆಯಿಂದ ತರಕಾರಿ ದರ ಹೆಚ್ಚಳವಾಗಿದೆ. ಒಂದು ವಾರದೊಳಗಡೆ ಮಳೆ ಬಾರದಿದ್ದರೆ ತರಕಾರಿ ದರ ಮತ್ತಷ್ಟು ಏರಿಕೆಯಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತದೆ
– ಪ್ರಕಾಶ್‌ ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.