
ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ-ಮುನವಳ್ಳಿ ಗ್ರಾಮದ ಗಡಿಯಲ್ಲಿರುವ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಸಮಿತಿ ವತಿಯಿಂದ ಸೋಮವಾರ ನಡೆದ ರಾಜ್ಯ ಮಟ್ಟದ ಜಂಗೀ ಬೈಲು ಕುಸ್ತಿ ಕೊನೆ ಪಂದ್ಯದಲ್ಲಿ ವಿಜೇತರಾದ ವಿಜಯಪುರದ ರಾಮಚಂದ್ರ ಅವರಿಗೆ ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ₹ 16 ಸಾವಿರ ನಗದು, ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.
ರಾಮಚಂದ್ರ ಅವರೊಂದಿಗೆ ಸೆಣಸಾಟ ನಡೆಸಿ ಸೋತಿರುವ ಮಹಾರಾಷ್ಟ್ರದ ಪುಣೆ ವಿಶಾಲ ಶಿಳಕೆ ಅವರಿಗೆ ₹ 12ಸಾವಿರ ನಗದು ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕುಸ್ತಿ ಸ್ಪರ್ಧೆಗಳನ್ನು ನೋಡಲು ಕಣದಲ್ಲಿ ನೆರೆದಿದ್ದ ಜನ ಮೈದಾನದ ಸುತ್ತಲು ಚಕ್ಕಡಿಬಂಡಿ, ಟ್ರ್ಯಾಕ್ಟರ್, ಕಾರು, ಬೈಕ್ ನಿಲ್ಲಿಸಿ ಅವುಗಳ ಮೇಲೆ ಹತ್ತಿ ನಿಂತು ನೋಡುತ್ತಿದ್ದರು. ವಿಜೇತ ಪಟುಗಳಿಗೆ ಪ್ರೇಕ್ಷಕರು ಕರೆದು ದೇಣಿಗೆ ನೀಡುತ್ತಿದ್ದರು. ವಿಜೇತ ಕುಸ್ತಿ ಪಟುವನ್ನು ಹೆಗಲ ಮೇಲೆ ಕುಡ್ರಿಸಿಕೊಂಡು ವಾದ್ಯವೃಂದದೊಂದಿಗೆ ಮೈದಾನವನ್ನು ಸುತ್ತು ಹಾಕಿ ಅಭಿಮಾನ ವ್ಯಕ್ತಪಡಿಸಿದರು.
ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ , ಸದಾಶಿಪೇಟೆ ದಾಸೋಹಮಠದ ಶಿವದೇವ ಶರಣರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಯಾಸೀರ್ ಅಮಹಮ್ದಖಾನ್ ಪಠಾಣ ಚಾಲನೆ ನೀಡಿದರು. ವಕೀಲ ಬಸವರಾಜ ಕೂಲಿ ನೇತೃತ್ವ ವಹಿಸಿದ್ದರು.
ಮುಖಂಡರಾದ ಪ್ರತಾಪಸಿಂಗ್ ಶಿವಪ್ಪನವರ, ಸೋಮನಗೌಡ್ರ ಪಾಟೀಲ, ಉಮೇಶ ಅಂಗಡಿ, ಬಾಪುಗೌಡ್ರ ಪಾಟೀಲ, ನಿಂಗನಗೌಡ್ರ ಪಾಟೀಲ, ಹನುಮೇಶ ಹಳವಳ್ಳಿ, ಪ್ರಕಾಶ ಹಂಡೆ, ಎಫ್.ಸಿ.ಕಾಡಪ್ಪಗೌಡ್ರ, ಗದಿಗಯ್ಯ ಹಿರೇಮಠ, ಗಂಗಾಧರ ಪೂಜಾರ, ನಾಗರಾಜ ಕೋಣನಕೇರಿ, ಬಂಕಯ್ಯ ಹಿರೇಮಠ, ದೇವಸ್ಥಾನದ ಅರ್ಚಕ ಸೋಮಂತ ಪೂಜಾರ, ಲಕ್ಷ್ಮಣ ಪೂಜಾರ, ಪಿ.ಎಸ್.ಐಗಳಾದ ಪರಶುರಾಮ ಕಟ್ಟಿಮನಿ ಸೇರಿದಂತೆ ಶ್ರೀಶೈಲ ಕೆಂಚನವರ ಮುನವಳ್ಳಿ, ಬಂಕಾಪುರ ವಿವಿಧ ಜಿಲ್ಲೆ ಹೊರ ರಾಜ್ಯಗಳ ಕುಸ್ತಿ ಪಟುಗಳು, ಪ್ರೇಕ್ಷಕರು, ಸೇರಿದಂತೆ ಸುತ್ತಲಿನ ಗ್ರಾಮಗಳ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.