ADVERTISEMENT

ಸರ್ಕಾರದ ವಿರುದ್ದ ಗ್ರಾಮಸ್ಥರ ಪ್ರತಿಭಟನೆ: ಮರಳು ಗಣಿಗಾರಿಗಾರಿಕೆ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 15:27 IST
Last Updated 13 ಜನವರಿ 2024, 15:27 IST
ಹಾವನೂರ ಗ್ರಾಮದ ತುಂಗಭದ್ರ ನದಿಯ ದಡದಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ಗ್ರಾಮಸ್ಥರು
ಹಾವನೂರ ಗ್ರಾಮದ ತುಂಗಭದ್ರ ನದಿಯ ದಡದಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ಗ್ರಾಮಸ್ಥರು   

ಗುತ್ತಲ: ಸಮೀಪದ ಹಾವನೂರ ಗ್ರಾಮದ ಕುರಬಗೇರಿ ತುಂಗಭದ್ರ ನದಿ ದಡದಲ್ಲಿ ಸರ್ಕಾರ ಶಿವಮೊಗ್ಗ ಮೂಲದ ವ್ಯಕ್ತಿಗೆ ಮರಳು ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಿದೆ. ಗುತ್ತಿಗೆ ನೀಡಿರುವುದನ್ನು ಕೂಡಲೇ ಸರ್ಕಾರ ರದ್ದು ಪಡಿಸುವಂತೆ ಆಗ್ರಹಿಸಿ ಹಾವನೂರ ಗ್ರಾಮಸ್ಥರು ಶನಿವಾರ ಸರ್ಕಾರದ ವಿರುದ್ಧ  ಪ್ರತಿಭಟನೆ ನಡೆಸಿದರು.

ಕುರಬಗೇರಿ ತುಂಗಭದ್ರ ನದಿಯ ದಡ ವಿಶಾಲವಾಗಿರುವದರಿಂದ ಪ್ರತಿ ವರ್ಷ ನಡೆಯುವ ಹಾವನೂರ ಗ್ರಾಮ ದೇವತೆಯ ಜಾತ್ರೆಗೆ ಬರುವ 50 ಸಾವಿರಕ್ಕೂ ಹೆಚ್ಚು ಜನರು ತುಂಗಭದ್ರ ನದಿಯಲ್ಲಿ ತಂಗುತ್ತಾರೆ. ಹರಕೆ ತೀರಿಸಿ ಹೊಗುತ್ತಾರೆ. ಗ್ರಾಮದ ಜನ, ಜಾನುವಾರು ಮತ್ತು ಕುರಿಗಳಿಗೆ ನೀರು ಕುಡಿಸಲು, ಬಟ್ಟೆ ತೊಳೆಯಲು, ಸಾರ್ವಜನಿಕರು ಪ್ರತಿದಿನ ಸ್ನಾನ ಮಾಡುವ ಸ್ಥಳ ಇದಾಗಿದ್ದು, ಕೂಡಲೇ ಸರ್ಕಾರ ಮರಳು ಗಣಿಗಾರಿಕೆ ನಡಸುವುದನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಮಾತಿನ ಚಕಮಕಿ: ಗ್ರಾಮ ಪಂಚಾಯಿತಿ, ಗ್ರಾಮದೇವತಾ ಟೆಂಪಲ್ ಕಮಿಟಿ ಮತ್ತು ಗ್ರಾಮಸ್ಥರು ಗುತ್ತಿಗೆ ರದ್ದು ಪಡಿಸುವಂತೆ ಮನವಿ ನೀಡಲಾಗಿತ್ತು. ಮನವಿ ಧಿಕ್ಕರಿಸಿದ ಅಧಿಕಾರಿಗಳು ಮರಳು ಗಣಿಗಾರಿಕೆ ನಡೆಸಲು ಶನಿವಾರ ಮುಂದಾದರು. ಮಹಿಳೆಯರು,ಮಕ್ಕಳು, ಸೇರಿದಂತೆ ಸಾವಿರಾರು ಜನ ನದಿಯ ದಡಕ್ಕೆ ಬಂದಾಗ ತಹಶೀಲ್ದಾರ್‌ ಮತ್ತು ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ADVERTISEMENT

ಜಿಲ್ಲಾಧಿಕಾರಿ ಆದೇಶದಂತೆ ನಾವು ಈ ಸ್ಥಳದಲ್ಲಿ ಗಣಿಗಾರಿಕೆ ನಡೆಸಬೇಕಾಗಿದೆ ಎಂದು ತಹಶೀಲ್ದಾರ್‌ ಶಂಕರ್.ಜಿ.ಎಸ್ ಹೇಳಿದರು. ತಹಶೀಲ್ದಾರ್‌ ಮಾತಿಗೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಈ ಸ್ಥಳವನ್ನು ಬಿಟ್ಟು ಬೇರೆ ಕಡೆಗೆ ಮಾಡಿಕೊಳ್ಳಿ ಎಂದು ಪಟ್ಟು ಹಿಡಿದು ಕುಳಿತರು.

ಮಹಿಳೆಯರು ಜೆಸಿಬಿ ಮತ್ತು ಟ್ರ್ಯಾಕ್ಟರ್ ಗಾಲಿಗಳ ಮೇಲೆ ಕುಳಿತ ಬಳಿಕ ಗಣಿಗಾರಿಕೆ ಬಂದ್‌ ಮಾಡಲಾಯಿತು.

ಜಿಲ್ಲಾಧಿಕಾರಿ ಜೊತೆಗೆ ಮಾತನಾಡಿ ಗ್ರಾಮಸ್ಥರ ಸಮಕ್ಷಮ ಸಭೆ ಕರೆದು, ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಹಶೀಲ್ದಾರ್‌ ಹೇಳಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಶಾಂತಪ್ಪ ಗೋಣ್ಣಿ,ಗ್ರಾಮ ಪಂಚಾಯತಿ ಸದಸ್ಯರಾದ ಗೋಪಾಲ ಗೋಣ್ಣಿ, ಮಾಲತೇಶ ಉದಗಟ್ಟಿ, ಗಣೇಶ ಕೆಂಗನಿಂಗಪ್ಪನವರ, ಕವಿತಾ ಕೆಂಗನಿಂಗಪ್ಪನವರ, ಪರಶುರಾಮ ಮಲಿಯಣ್ಣನವರ, ಲಕ್ಕಮ್ಮ ಗೊಣ್ಣಿ, ಹೊನ್ನಮ್ಮ ಬುಳಬುಳ್ಳಿ, ಚೌಡಮ್ಮ ಬನ್ನಿಮಟ್ಟಿ, ನಿಂಗಪ್ಪ ಕೆಂಗನಿಂಗಪ್ಪನವರ, ಮುಂತಾದವರು ಇದ್ದರು.

ಗುತ್ತಲ ಪಿಎಸ್‌ಐ ಶಂಕರಗೌಡ ಪಾಟೀಲ್, ಉಪತಹಶೀಲ್ದಾರ್‌ ಎಂ.ಡಿ.ಕಿಚಡಿ, ಕಂದಾಯ ನೀರಿಕ್ಷಕ ಆರ್.ಎನ್.ಮಲ್ಲಾಡದ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಷಣ್ಮಖ ದೊಡ್ಡಮನಿ, ಮುಂತಾದವರು ಇದ್ದರು.

ತಹಶೀಲ್ದಾರ್‌ ಮತ್ತು ಮಹಿಳೆ ಮಧ್ಯೆ ಮಾತಿನ ಚಕಮಕಿ ನಡೆಯಿತು
ಗ್ರಾಮಸ್ಥರ ಮನವಿಗೆ ಕಿವಿಗೊಡದೆ ಮರಳು ಗಣಿಗಾರಿಕೆಗೆ ಮುಂದಾದ ಅಧಿಕಾರಿಗಳು ತುಂಗಭದ್ರ ನದಿ ದಡದಲ್ಲಿ ಸೇರಿದ್ದ ಸಾವಿರಾರು ಜನ ಜೆಸಿಬಿ, ಟ್ರ್ಯಾಕ್ಟರ್ ಗಾಲಿಗಳ ಮೇಲೆ ಕುಳಿತ ಮಹಿಳೆಯರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.