ADVERTISEMENT

ಗುತ್ತಲ | ನೀರಿನ ಸಮಸ್ಯೆ: ಒಣಗುತ್ತಿರುವ ಬೆಳೆ

ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರಿಗೆ ಆತಂಕ

ದುರಗಪ್ಪ ಪಿ.ಕೆಂಗನಿಂಗಪ್ಪನವರ
Published 4 ಫೆಬ್ರುವರಿ 2024, 4:56 IST
Last Updated 4 ಫೆಬ್ರುವರಿ 2024, 4:56 IST
 ಬರಿದಾದ ತುಂಗಭದ್ರಾ ನದಿಯಲ್ಲಿ ವರ್ತಿ ನೀರು ತೆಗೆಯುತ್ತಿರುವ ಗ್ರಾಮಸ್ಥರು
 ಬರಿದಾದ ತುಂಗಭದ್ರಾ ನದಿಯಲ್ಲಿ ವರ್ತಿ ನೀರು ತೆಗೆಯುತ್ತಿರುವ ಗ್ರಾಮಸ್ಥರು   

ಗುತ್ತಲ: ಬೆಳೆ ಬಾರದೆ ಬರದಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ರೈತರಿಗೆ ಮತ್ತೆ ಬರೆ ಹಾಕಿದಂತಾಗಿದೆ. ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ಈ ಬಾರಿ ಮುಂಗಾರಿನ ಬೆಳೆ ನಂಪೂರ್ಣ ಹಾಳಾಗಿದೆ.

ತುಂಗಭದ್ರ ನದಿಯನ್ನು ನಂಬಿಕೊಂಡು ಹಾವೇರಿ ಜಿಲ್ಲೆಯ ಪೂರ್ವಭಾಗದ 50ಕ್ಕೂ ಹೆಚ್ಚು ಗ್ರಾಮಗಳ ರೈತರು ಭತ್ತ, ಕಬ್ಬು, ಗೋವಿನಜೋಳ ಮತ್ತು ಹೈಬ್ರಿಡ್ ಜೋಳವನ್ನು ಬಿತ್ತನೆ ಮಾಡಿದ್ದರು. ಆದರೆ, ತುಂಗಭದ್ರಾ ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋದ ಹಿನ್ನೆಲೆಯಲ್ಲಿ ಎಲ್ಲ ಬೆಳೆಗಳು ಒಣಗಿ ಹೊಗುತ್ತಿವೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರ ಕನಸು ನುಚ್ಚುನೂರಾಗುತ್ತಿದೆ.

ತುಂಗಭದ್ರ ನದಿಯ ದಡದಲ್ಲಿರುವ 50ಕ್ಕೂ ಹೆಚ್ಚು ಗ್ರಾಮಗಳು ಕುಡಿಯಲಿಕ್ಕೆ ತಂಗಭದ್ರಾ ನದಿಯ ನೀರನ್ನೆ ಉಪಯೋಗಿಸುತ್ತಾರೆ. ಆದರೆ, ತುಂಗಭದ್ರ ನದಿ ಸಂಪೂರ್ಣ ಬತ್ತಿ ಹೋದ ಹಿನ್ನೆಲೆಯಲ್ಲಿ ನದಿಯ ಮಧ್ಯ ಬಾಗದಲ್ಲಿ ಗ್ರಾಮದ ಜನರು ವರ್ತಿ ತೆಗೆದು ನೀರಿನ ದಾಹ ತೀರಿಸಿಕೊಳ್ಳುತ್ತಿದ್ದಾರೆ.

ADVERTISEMENT

ಈ ಭಾಗದ ಜೀವನಾಡಿಯಾಗಿರುವ ತುಂಗಭದ್ರ ನದಿಯನ್ನು ನಂಬಿಕೊಂಡು ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಭತ್ತ, ಕಬ್ಬು, ಗೋವಿನಜೋಳ, ಅಲಸಂದಿ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಬೆಳೆಗೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಖರ್ಚು ಮಾಡಿದ್ದಾರೆ. ಆದರೆ, ನದಿಯಲ್ಲಿ ನೀರಿಲ್ಲದ ಕಾರಣ ಬೆಳೆ ಒಣಗಿ ಹೊಗುತ್ತಿವೆ. ಕೂಡಲೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದ್ದಾರೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುದ್ದಕುಡಿಯುವ ನೀರಿನ ಘಟಕಗಳು  ಎರಡು ಮಾತ್ರ ಇವೆ. ಹಲವು ಬಾರಿ ಎರಡೂ ಘಟಕಗಳು ಕೆಟ್ಟು ನಿಂತಿರುತ್ತವೆ. ಈ ಕಾರಣದಿಂದ ಕುಡಿಯುವ ನೀರಿಗಾಗಿ ಜನರು ಪರಿತಪಿಸುತ್ತಿದ್ದಾರೆ. ಶುದ್ದ ಕುಡಿಯುವ ನೀರನ್ನು ಕುಡಿಯದೆ ಇರುವ ಹಲವು ಕುಟುಂಬಗಳು ನದಿಯ ನೀರಿನ ನಿರೀಕ್ಷೆಯಲ್ಲಿದ್ದಾರೆ.

ಅಂತರ್ಜಲ ಕುಸಿತ: ರೈತರ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿರುವುದರಿಂದ ಬೆಳೆಗಳನ್ನು ನೀರಿನಿಂದ ರಕ್ಷಣೆ ಮಾಡುವುದು ಕಷ್ಟಕರವಾಗುತ್ತಿದೆ. ಭೂಮಿಯಲ್ಲಿ ಅಂತರ್ಜಲ ಕಡಿಮೆಯಾಗುತ್ತಿದೆ ಎಂದು ರೈತರು ಹೇಳುತ್ತಾರೆ.

ಕೂಡಲೆ ಸರ್ಕಾರ ತುಂಗಭದ್ರ ನದಿಗೆ ನೀರು ಬಿಡಬೇಕೆಂದು ಈ ಭಾಗದ ಗ್ರಾಮಗಳ ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಫೆ.20, 21 ರಂದು ಹಾವನೂರ ಗ್ರಾಮದೇವಿ ಜಾತ್ರೆ. ಫೆ.26 ಮೈಲಾರ ಜಾತ್ರೆ ಮತ್ತು ಕುರವತ್ತಿ ಬಸವೇಶ್ವರ ಜಾತ್ರೆಗಳಿಗೆ ಅಪಾರ ಭಕ್ತರು ಸೇರುತ್ತಾರೆ. ಜಾತ್ರೆಗಳಿಗಾಗಿ ಸರ್ಕಾರ ಕೂಡಲೆ ನದಿಗೆ ನೀರು ಬಿಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಫೆ.5 ರಂದು ತುಂಗಭದ್ರಾ ನದಿಗೆ ಭದ್ರಾ ಜಲಾಶಯದಿಂದ ನೀರು ಬಿಡಲಾಗುವುದೆಂದು ಭದ್ರಾ ಜಲಾಶಯದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

 ನೀರಿಲ್ಲದೆ ಒಣಗುತ್ತಿರುವ ಭತ್ತದ ಬೆಳೆ
ತುಂಗಭದ್ರಾ ನದಿ ಬತ್ತಿದ ಕಾರಣ ಹಾಳಾಗಿರುವ ಕೊಳವೆ ಬಾವಿಗಳನ್ನು ಪುನಚ್ಚೇತನಗೊಳಿಸಬೇಕು. ಖಾಸಗಿ ಕೊಳವೆ ಬಾವಿಗಳನ್ನು ಬಳಕೆ ಮಾಡಿಕೊಳ್ಳಬೇಕು. ಅವಶ್ಯಕತೆ ಇದ್ದಲ್ಲಿ ಕೊಳವೆ ಬಾವಿ ಕೊರೆಸಬೇಕು ಎಂದು ಎಂದು ಗ್ರಾಮ ಪಂಚಾಯಿತಿಗೆ ಆದೇಶ ಮಾಡಲಾಗಿದೆ
-ಅಕ್ಷಯ ಶ್ರೀಧರ ಜಿ.ಪಂ. ಸಿಇಒ ಹಾವೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.