ADVERTISEMENT

ಎಲ್ಲ ಸಮುದಾಯಕ್ಕೂ ನ್ಯಾಯ ಒದಗಿಸುತ್ತೇವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

2ಎ ಮೀಸಲಾತಿ ಕಲ್ಪಿಸಲು ಸ್ವಾಮೀಜಿಗಳ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 16:48 IST
Last Updated 19 ಡಿಸೆಂಬರ್ 2021, 16:48 IST
ಶಿಗ್ಗಾವಿ ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಲೋಕಾರ್ಪಣೆ ಹಾಗೂ ಪಂಚಮಸಾಲಿ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾಗವಹಿಸಿದ್ದರು 
ಶಿಗ್ಗಾವಿ ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಲೋಕಾರ್ಪಣೆ ಹಾಗೂ ಪಂಚಮಸಾಲಿ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾಗವಹಿಸಿದ್ದರು    

ಹಾವೇರಿ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಿದರೆ ಸೂರ್ಯ ಚಂದ್ರ ಇರುವವರೆಗೆ ಬಸವರಾಜ ಬೊಮ್ಮಾಯಿ ಅವರ ಹೆಸರು ಅಜರಾಮರವಾಗಿರುತ್ತದೆ. ಸಮಾಜ ಸದಾ ಋಣಿಯಾಗಿರುತ್ತದೆ’ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಶಿಗ್ಗಾವಿ ಪಟ್ಟಣದಲ್ಲಿ ಭಾನುವಾರ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಲೋಕಾರ್ಪಣೆ ಹಾಗೂ ಪಂಚಮಸಾಲಿ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಾಗ ಅಂದು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ನಮಗೆ ಎಲ್ಲಿಯೂ ತೊಂದರೆಯಾಗದಂತೆ ನಮ್ಮ ಹೋರಾಟಕ್ಕೆ ಸಕಾರಾತ್ಮಕ ಸ್ಪಂದಿಸಿದರು. ಹೀಗಾಗಿ ಬೊಮ್ಮಾಯಿ ಅವರು 2ಎ ಮೀಸಲಾತಿ ಕಲ್ಪಿಸುತ್ತಾರೆ ಎಂಬ ಬಗ್ಗೆ ಪೂರ್ಣ ವಿಶ್ವಾಸವಿದೆ’ ಎಂದರು.

ADVERTISEMENT

‘ಮಹಿಳಾ ಸೇನಾ ಪಡೆಗೆ ‘ಕಿತ್ತೂರು ಚನ್ಮಮ್ಮ’ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು’ ಎಂದು ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ‘ಮೀಸಲಾತಿಯಿಂದ ಯಾವ ಮುಖ್ಯಮಂತ್ರಿಗೂ ಬಿಡುಗಡೆ ಎಂಬುದಿಲ್ಲ. ಮೀಸಲಾತಿ ವಿಚಾರದಲ್ಲಿ ಸರ್ಕಾರ ತರಾತುರಿ ಮಾಡಬಾರದು. ವೈಜ್ಞಾನಿಕವಾಗಿ ಮೀಸಲಾತಿ ಕೊಡದಿದ್ದರೆ, ಸುಪ್ರೀಂ ಕೋರ್ಟ್‌ನಲ್ಲಿ ಅದು ನಿಲ್ಲುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆಯೆಂದರೆ, ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ಶೇ 16 ಮೀಸಲಾತಿ ಕೊಟ್ಟರೂ, ಸುಪ್ರೀಂಕೊರ್ಟ್‌ನಲ್ಲಿ ಮಾನ್ಯತೆ ಸಿಗಲಿಲ್ಲ’ ಎಂದು ಹೇಳಿದರು.

ಸ್ವಾಮೀಜಿಗಳ ಹಕ್ಕೊತ್ತಾಯಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಹಿಂದುಳಿದ ವರ್ಗಗಳ ಆಯೋಗಕ್ಕೆ ಎಲ್ಲರೂ ಸಂಪೂರ್ಣ ಸಹಕಾರಿ ನೀಡಿದರೆ, ಒಳ್ಳೆಯ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಧ್ವನಿ ಇಲ್ಲದವರಿಗೆ, ತುಳಿತಕ್ಕೆ ಒಳಗಾದವರಿಗೆ ಧ್ವನಿ ನೀಡಲು ನಾವು ಬದ್ಧವಾಗಿದ್ದೇವೆ. ಎಲ್ಲ ಸಮುದಾಯಗಳಿಗೂ ಪ್ರಾಶಸ್ತ್ಯ ನೀಡಿ, ಅಭಿವೃದ್ಧಿಗೆ ನೆರವು ನೀಡುತ್ತೇವೆ. ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸಕ್ಕೆ ಬದ್ಧವಾಗಿದ್ದೇವೆ. 2ಎ ಮೀಸಲಾತಿ ಬಗ್ಗೆ ಕೂಡಲಸಂಗಮದ ಶ್ರೀಗಳ ಜೊತೆ ಈಗಾಗಲೇ ಮಾತನಾಡಿದ್ದೇನೆ’ ಎಂದು ಹೇಳಿದರು.

ಸ್ವಾಮೀಜಿಗಳ ಮುನಿಸು: ಭಕ್ತರ ಗುಸುಗುಸು
ಪಂಚಮಸಾಲಿ ಸಮುದಾಯದ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪೀಠದ ವಚನಾನಂದ ಸ್ವಾಮೀಜಿಸಮಾರಂಭದಲ್ಲಿ 3 ಗಂಟೆಗೂ ಹೆಚ್ಚು ಕಾಲ ಅಕ್ಕಪಕ್ಕವೇ ಕುಳಿತಿದ್ದರೂ, ಪರಸ್ಪರ ಮುಖ ನೋಡದೆ, ಒಮ್ಮೆಯೂ ಮಾತನಾಡದೇ ಇದ್ದುದ್ದನ್ನು ಗಮನಿಸಿದ ಭಕ್ತರು ತಮ್ಮ ತಮ್ಮಲ್ಲೇ ಗುಸುಗುಸು ಮಾತನಾಡಿಕೊಂಡರು.

ವಚನಾನಂದ ಸ್ವಾಮೀಜಿ ತಮ್ಮ ಭಾಷಣದಲ್ಲಿ, ‘ನಾಯಕರಾದವರು, ಗುರುಗಳಾದವರು ಸಮುದಾಯದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಪ್ರೇಮ, ಸಹಬಾಳ್ವೆ ಬಿತ್ತಬೇಕು. ಹರ ಒಲಿದರೆ ಅಧಿಕಾರ, ಸಂಪತ್ತು ತಾನಾಗಿಯೇ ಸಿಗುತ್ತದೆ. ಹರನನ್ನು ಮರೆತರೆ, ತುಂಬಿದ ಕೊಡಕ್ಕೆ ಕಲ್ಲು ತಾಕಿದಂತೆ ಆಗುತ್ತದೆ ಎಂದು ಹೇಳಿದ ಮಾರ್ಮಿಕ ನುಡಿಗಳು ಎರಡೂ ಪೀಠಗಳ ನಡುವೆ ಇರುವ ವೈಮನಸ್ಯಕ್ಕೆ ಸಾಕ್ಷಿ ಎಂದು ಭಕ್ತರೊಬ್ಬರು ವಿಶ್ಲೇಷಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಇಬ್ಬರೂ ಸ್ವಾಮೀಜಿಗಳು ಜ.14ರಂದು ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಿದ್ದೀರಿ. ಸಮಯ ಹೊಂದಾಣಿಕೆ ಮಾಡಿಕೊಂಡು ಎರಡೂ ಕಡೆ ಬರುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.