ADVERTISEMENT

ಹಾವೇರಿ: ವನ್ಯಜೀವಿಗಳ ಗಣತಿ ಕಾರ್ಯ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 0:30 IST
Last Updated 10 ಫೆಬ್ರುವರಿ 2022, 0:30 IST
ವನ್ಯಜೀವಿಗಳ ಗಣತಿ ಕಾರ್ಯದ ಸಿದ್ಧತೆಗಳನ್ನು ಪರಿಶೀಲಿಸುತ್ತಿರುವ ಹಾವೇರಿ ಆರ್‌ಎಫ್‌ಒ ರಾಮಪ್ಪ ಪೂಜಾರ್‌ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ 
ವನ್ಯಜೀವಿಗಳ ಗಣತಿ ಕಾರ್ಯದ ಸಿದ್ಧತೆಗಳನ್ನು ಪರಿಶೀಲಿಸುತ್ತಿರುವ ಹಾವೇರಿ ಆರ್‌ಎಫ್‌ಒ ರಾಮಪ್ಪ ಪೂಜಾರ್‌ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ    

ಹಾವೇರಿ: ಅಖಿಲ ಭಾರತ ಹುಲಿ ಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ, ಹಾವೇರಿ ಜಿಲ್ಲೆಯಲ್ಲಿ ವನ್ಯಜೀವಿಗಳ ಗಣತಿ ಕಾರ್ಯ ಫೆ.10ರಿಂದ ಫೆ.28ರವರೆಗೆ ನಡೆಯಲಿದ್ದು, ಅರಣ್ಯ ಇಲಾಖೆ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ.

ಹಾವೇರಿ ಅರಣ್ಯ ವಿಭಾಗದಲ್ಲಿ ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಹಿರೇಕೆರೂರು, ಹಾನಗಲ್‌, ದುಂಡಶಿ ಹಾಗೂ ವನ್ಯಜೀವಿ ರಾಣೆಬೆನ್ನೂರು ಸೇರಿದಂತೆ ಒಟ್ಟು ಏಳು ವಲಯಗಳಿವೆ. ಇವುಗಳ ವ್ಯಾಪ್ತಿಯಲ್ಲಿ 61 ಅರಣ್ಯ ಬೀಟ್‌ ಏರಿಯಾಗಳನ್ನು ಗುರುತಿಸಲಾಗಿದ್ದು, ಇಲ್ಲಿ ಗಣತಿ ಕಾರ್ಯ ನಡೆಯಲಿದೆ.

ಹುಲಿ ಸಂರಕ್ಷಿತ ಪ್ರದೇಶವಲ್ಲದ ಹಾವೇರಿ ಅರಣ್ಯ ವಿಭಾಗದಲ್ಲಿಗಣತಿ ಕಾರ್ಯ ನಡೆಸುವ ಸಿಬ್ಬಂದಿಗೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ಕಾರ್ಯಾಗಾರದ ಮೂಲಕ ತರಬೇತಿ ನೀಡಲಾಗಿದೆ. ಸೈನ್‌ ಸಮೀಕ್ಷೆ ಮತ್ತು ಲೈನ್‌ ಟ್ರಾನ್ಸೆಕ್ಟ್‌ ಎಂಬ ಎರಡು ವಿಧಾನಗಳಲ್ಲಿ ಗಣತಿ ಕಾರ್ಯ ನಡೆಯಲಿದೆ. ಪ್ರತಿ ಬೀಟ್‌ಗೆ 3 ಸದಸ್ಯರ ತಂಡವನ್ನು ರಚಿಸಲಾಗಿದೆ. ಡಿಸಿಎಫ್‌ ಮಾರ್ಗದರ್ಶನದಲ್ಲಿ ಎಸಿಎಫ್‌, ಆರ್‌ಎಫ್‌ಒ, ಡಿಆರ್‌ಎಫ್‌ಒ, ಫಾರೆಸ್ಟ್‌ ಗಾರ್ಡ್‌ ಮತ್ತು ವಾಚರ್‌ಗಳು ಒಳಗೊಂಡಂತೆ ಸುಮಾರು 200 ಮಂದಿ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

‘ನಾಲ್ಕು ವರ್ಷಗಳಿಗೊಮ್ಮೆ ದೇಶದಾದ್ಯಂತ ಹುಲಿ ಗಣತಿ ನಡೆಯುತ್ತದೆ. ನಮ್ಮ ವಿಭಾಗದಲ್ಲಿ ಹುಲಿಗಳು ಇದುವರೆಗೆ ಕಂಡು ಬಂದಿಲ್ಲ. ನಮ್ಮಲ್ಲಿ ಚಿರತೆ, ಕರಡಿ, ಆನೆ, ಕೃಷ್ಣಮೃಗ, ಜಿಂಕೆ ಮುಂತಾದ ವನ್ಯಜೀವಿಗಳು ಕಾಣಿಸಿಕೊಂಡಿವೆ.ಮೊಬೈಲ್‌ನಲ್ಲಿರುವ ಎಕಾಲಜಿಕಲ್‌ ಅಪ್ಲಿಕೇಶನ್‌ ಮೂಲಕ ಗಣತಿಯ ಅಂಕಿಅಂಶವನ್ನು ದಾಖಲಿಸಿ, ಸಮೀಕ್ಷೆ ಪೂರ್ಣಗೊಂಡ ನಂತರ ಬೆಂಗಳೂರಿನ ಕೇಂದ್ರ ಕಚೇರಿಗೆ ಡೇಟಾ ಕಳುಹಿಸಲಾಗುತ್ತದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ ಎಸ್‌. ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಣತಿಯಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚಳ ಮತ್ತು ಇಳಿಕೆಯ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಕೆಲವೊಮ್ಮೆ ಅಪರೂಪದ ಮತ್ತು ಅಳಿವಿನಂಚಿನ ಪ್ರಾಣಿಗಳು ಕಂಡುಬರುತ್ತವೆ. ಕಾಡುಪ್ರಾಣಿಗಳ ಆವಾಸಸ್ಥಾನದಲ್ಲಿ ಆದ ಬದಲಾವಣೆ, ನಾಡಿನತ್ತ ಕಾಡುಪ್ರಾಣಿಗಳು ಬರುವುದಕ್ಕೆ ಕಾರಣ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟತೆ ಸಿಗುತ್ತದೆ’ ಎಂದು ಬಾಲಕೃಷ್ಣ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.