ADVERTISEMENT

ಸವಣೂರ: ನವಾಬರ ನೆಚ್ಚಿನ ತಾಣ ‘ಯಲವಿಗಿ’!

ಗಣೇಶಗೌಡ ಎಂ.ಪಾಟೀಲ
Published 25 ಜನವರಿ 2020, 19:30 IST
Last Updated 25 ಜನವರಿ 2020, 19:30 IST
ಯಲವಿಗಿ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನ
ಯಲವಿಗಿ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನ   

ಸವಣೂರ: 19ನೇ ಶತಮಾನದಲ್ಲಿ ದಟ್ಟವಾದ ಅರಣ್ಯ ಪ್ರದೇಶವಾಗಿದ್ದ ‘ಯಲುವಿಗಿ’ ಗ್ರಾಮವೇ ಇಂದಿನ ‘ಯಲವಿಗಿ’ಯಾಗಿದೆ. ಈ ಗ್ರಾಮವು ಬ್ರಿಟಿಷರ ಕಾಲದಲ್ಲಿ ‘ಚೋಟಾ ಮುಂಬೈ’ ಎಂತಲೂಹೆಸರು ವಾಸಿಯಾಗಿತ್ತು.

ಬೃಹದಾಕಾರ ಅರಣ್ಯ ಪ್ರದೇಶವನ್ನು ಒಳಗೊಂಡಿದ್ದ ಈ ಗ್ರಾಮದಲ್ಲಿ ಅಂದು ಹುಲಿಗಳನ್ನು ಹೆಚ್ಚಾಗಿ ಕಾಣಬಹುದಾಗಿತ್ತು. ಅವುಗಳನ್ನು ಬೇಟೆಯಾಡಲು 1825ರಲ್ಲಿ ಅಂದಿನ ಧಾರವಾಡ ಜಿಲ್ಲಾ ಹಿರಿಯ ಸಹಾಯಕನಾದ ವಾಲ್ಟರ್ ಎಲಿಯಟ್ ಮತ್ತು ಸವಣೂರ ನವಾಬರು ಅರಣ್ಯಕ್ಕೆ ಬರುತ್ತಿದ್ದರು ಎಂದು ‘ಸವಣೂರ ಸಂಸ್ಥಾನ ಪುಸ್ತಕ’ದಿಂದ ತಿಳಿದು ಬರುತ್ತದೆ.

ತಾಲ್ಲೂಕು ಕೇಂದ್ರದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಈ ಗ್ರಾಮ ಸುಮಾರು 1396.55 ಹೆಕ್ಟೇರ್ ಭೌಗೋಳಿಕ ಕ್ಷೇತ್ರವನ್ನು ಹೊಂದಿದೆ. ಕೃಷಿ ಹಾಗೂ ಹಲವಾರು ವ್ಯಾಪಾರವನ್ನು ಅವಲಂಬಿಸಿದ್ದಾರೆ. ಡೊಳ್ಳು, ಭಜನೆ, ನಾಟಕಕಾರರು ಸೇರಿದಂತೆ ಹಲವಾರು ಜನಪದ ಕಲಾವಿದರನ್ನು ಕಾಣಬಹುದಾಗಿದೆ ಎಂಬುದನ್ನು ಅಬ್ದುಲ್ ಖಾನ್ ಸಂಶಿ ಅವರು ಬರೆದ ನಮ್ಮ ಸವಣೂರ ಪುಸ್ತಕದಿಂದ ತಿಳಿದು ಬರುತ್ತದೆ.

ADVERTISEMENT

ಈ ಗ್ರಾಮದ ಸೆಟ್ಟೇವ್ವನ ತೋಟದಲ್ಲಿರುವ ಏಕೈಕ ಶಾಸನ ದೊರಕಿದೆ. ಆದರೆ, ಇದು ಯಾವ ಕಾಲದ ಶಾಸನ ಎಂಬುದು ಖಚಿತತೆ ಇಲ್ಲವಾಗಿದೆ. ಆದರೂ ಸಹ ಈ ಗ್ರಾಮದ ಹೆಸರು ಹಾಗೂ ಕೆರೆಯ ಜೀರ್ಣೋದ್ಧಾರಕ್ಕಾಗಿ ಖಂಡೇರಾಯನಿಗೆ ದಾನ ಮಾಡಿದ ಸಾಮಾಜಿಕ ಕಳಕಳಿಯ ವಿಷಯ ಈ ಶಾಸನದಿಂದ ತಿಳಿದುಬರುತ್ತದೆ.

ಬಸವಣ್ಣ ದೇವಾಲಯದ ಪ್ರಾಂಗಣದಲ್ಲಿರುವ ಯಜ್ಞೋಪವೀತ ಧರಿಸಿದ ಸೂರ್ಯನ ಬಿಡಿಶಿಲ್ಪ, ಭೈರವ, ಭಗ್ನಗೊಂಡ ನಂದಿ ಮತ್ತು ನಾಗಶಿಲ್ಪಗಳನ್ನು ಕಾಣಬಹುದಾಗಿದೆ. ದೇವಾಲಯದ ಹಿಂಭಾಗದಲ್ಲಿ ಶಾಸನವನ್ನು ಹೂಳಲಾಗಿದ್ದು, ಅದು ಅಪ್ರಕಟಿತವಾಗಿದೆ.

ಗ್ರಾಮದ ಮಾಯವ್ವನ ದೇವಸ್ಥಾನದಲ್ಲಿ ವಿಷ್ಣುಶಿಲ್ಪ ಹಾಗೂ ಯತಿಯ ಬಿಡಿ ಶಿಲ್ಪಗಳಿವೆ. ಈ ಗುಡಿಯ ಪಕ್ಕದಲ್ಲಿರುವ ಮೈಲಾರಲಿಂಗೇಶ್ವರ ಗುಡಿಯಲ್ಲಿ ಭೈರವಿಯ ಬಿಡಿ ಶಿಲ್ಪವಿದೆ. ಈಶ್ವರ ದೇವಾಲಯದಲ್ಲಿ ಜಟಾಮುಕೂಟ ಶಿವ ಶಿಲ್ಪ ಹಾಗೂ ಅಪರೂಪದ ಸರಸ್ವತಿ ವಿಗ್ರಹಗಳು ಪ್ರೇಕ್ಷಣೀಯವಾಗಿವೆ ಎನ್ನುತ್ತಾರೆಕುರುವತ್ತೆಪ್ಪ ಮುಗದೂರ.

ಯಲವಿಗಿ ಗ್ರಾಮ ಒಂದು ಮುಖ್ಯ ಮಾರುಕಟ್ಟೆಯಾಗಿತ್ತು. ರೈಲ್ವೆ ಮೂಲಕ ಹೊರ ರಾಜ್ಯದಿಂದ ಪೆಟ್ರೋಲ್, ಡಿಸೇಲ್, ಸೀಮೆಎಣ್ಣೆ ಸೇರಿದಂತೆ ಹಲವಾರು ಸರಕುಗಳು ಬಂದು ಶೇಖರಣಾ ಘಟಕಕ್ಕೆ ಬರುತ್ತಿದ್ದವು. ಅವುಗಳನ್ನು ಸುತ್ತಮುತ್ತಲಿನ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ರವಾನೆಯಾಗುತ್ತಿದ್ದವುಎಂದು ಗ್ರಾಮದ ಹಿರಿಯರಾದ ಫಕ್ಕಿರವ್ವಾ ಬಿದರಳ್ಳಿ ತಿಳಿಸಿದರು.

ಅಲ್ಲದೆ, ಕಾಳುಗಳು, ಹತ್ತಿ ಸೇರಿದಂತೆ ಹಲವಾರು ಸರಕುಗಳನ್ನು ಮಾರಾಟ ಮಾಡುವುದಕ್ಕೆಗದಗ, ಹಾವೇರಿ, ಧಾರವಾಡ ಜಿಲ್ಲೆಯ ಹಲವು ಸ್ಥಳಗಳಿಂದ ಸರಕುಗಳು ಆಗಮಿಸುತ್ತಿದ್ದವು ಎಂದು ಅವರು ವಿವರಿಸಿದರು.

ಈಗ ಮಾರುಕಟ್ಟೆ ಲಕ್ಷ್ಮೇಶ್ವರ ಪಟ್ಟಣಕ್ಕೆ ಸ್ಥಳಾಂತರಗೊಂಡ ನಂತರ ಪ್ರಸಿದ್ಧಮಾರುಕಟ್ಟೆಯಾಗಿದ್ದ ಯಲವಿಗಿ ಗ್ರಾಮದ ಸ್ಥಳ ಖಾಲಿಜಾಗವಾಗಿ ಉಳಿದುಕೊಂಡಿದೆ ಎನ್ನುತ್ತಾರೆ ಮಲ್ಲಪ್ಪ ಬಿದರಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.