ADVERTISEMENT

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಕಿರಿಯ ವೈದ್ಯರ ಮೇಲಿನ ಹಲ್ಲೆಗೆ ಐಎಂಎ ಖಂಡನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 10:44 IST
Last Updated 7 ನವೆಂಬರ್ 2019, 10:44 IST

ಹುಬ್ಬಳ್ಳಿ: ಬೆಂಗಳೂರಿನ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಹುಬ್ಬಳ್ಳಿಯಲ್ಲಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಪದಾಧಿಕಾರಿಗಳು ಗುರುವಾರ ಮಿನಿ ವಿಧಾನಸೌಧದ ಬಳಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.

ಸ್ನಾತಕೋತ್ತರ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ, ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಂಘದ ಹುಬ್ಬಳ್ಳಿ ಘಟಕದ ಅಧ್ಯಕ್ಷ ಡಾ. ಕ್ರಾಂತಿಕಿರಣ್, ‘ವೈದ್ಯರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದ್ದರೂ, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕ್ರಮಕ್ಕೆ ಕಠಿಣ ಕಾನೂನು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಂಘದ ಕೇಂದ್ರ ಸಮಿತಿಯ ಸದಸ್ಯ ಡಾ.ಜಿ.ಬಿ. ಸತ್ತೂರ ಮಾತನಾಡಿ, ‘ವೈದ್ಯರ ಮೇಲಿನ ಹಲ್ಲೆಗೆ ಕನಿಷ್ಠ 10 ಹತ್ತು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ಅ. 2ರೊಳಗೆ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಇದಾದ ಬಳಿಕ, ಕನಿಷ್ಠ 20 ಹಲ್ಲೆ ಪ್ರಕರಣಗಳು ನಡೆದಿವೆ’ ಎಂದು ಹೇಳಿದರು.

‘ಸರ್ಕಾರ ಈಗಲಾದರೂ, ಕಾನೂನು ಜಾರಿಗೆ ಮುಂದಾಗಬೇಕು. ಇಲ್ಲದಿದ್ದರೆ, ತುರ್ತು ಸಂದರ್ಭದಲ್ಲಿ ವೈದ್ಯರು ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಾರೆ. ಇದರಿಂದ ರೋಗಿಗಳು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದರು.

ವೈದ್ಯರ ಶ್ರೀನಿವಾಸ ಜೋಶಿ, ‘ಮಿಂಟೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದವರಲ್ಲಿ ಕಂಡುಬಂದ ಸೋಂಕಿಗೆ ವೈದ್ಯರು ಹೊಣೆಗಾರರಲ್ಲ. ಅಲ್ಲಿದ್ದ ಔಷಧವನ್ನೇ ವೈದ್ಯರು ನೀಡಿದ್ದಾರೆ. ಔಷಧದಲ್ಲಿ ಸಮಸ್ಯೆ ಇರುವುದರಿಂದ, ಅದನ್ನು ಪೂರೈಕೆ ಮಾಡಿದ ಟೆಂಡರ್‌ದಾರರನ್ನು ಕೇಳಬೇಕು. ಅದು ಬಿಟ್ಟು, ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.

ಬಳಿಕ ತಹಶೀಲ್ದಾರ್ ಶಶಿಧರ ಮಾಡ್ಯಾಳ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಕಾರ್ಯದರ್ಶಿ ಡಾ. ಮಂಜುನಾಥ್ ನೇಕಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಎಂ.ಸಿ. ಸಿಂಧೂರ, ಡಾ.ಜಿ.ಬಿ. ರೇವಣಕರ ಮುಂತಾದವರು ಇದ್ದರು.

ಬೇಡಿಕೆ ಈಡೇರಿಸದಿದ್ದರೆ ಒಪಿಡಿ ಬಂದ್

ಬೆಂಗಳೂರಿನಲ್ಲಿ ಪ್ರತಿಭಟಿಸುತ್ತಿರುವ ಕಿರಿಯ ವೈದ್ಯರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ, ನ. 8ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ರಾಜ್ಯದಾದ್ಯಂತ ಹೊರ ರೋಗಿ ವಿಭಾಗದ ಸೇವೆಯನ್ನು (ತುರ್ತು ಸೇವೆ ಹೊರತುಪಡಿಸಿ) ಸ್ಥಗಿತಗೊಳಿಸಲಾಗುವುದು ಎಂದು ವೈದ್ಯರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.