ADVERTISEMENT

ಬದಲಾಗಲಿದೆ ಜಕ್ಕೂರು ಕೆರೆಯ ಚಿತ್ರಣ

₹65 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎರಡು ಖಾಸಗಿ ಸಂಸ್ಥೆಗಳ ಸಹಭಾಗಿತ್ವ

ಮನೋಹರ್ ಎಂ.
Published 23 ನವೆಂಬರ್ 2019, 5:23 IST
Last Updated 23 ನವೆಂಬರ್ 2019, 5:23 IST
ಜಕ್ಕೂರು ಕೆರೆಯ ನೋಟ
ಜಕ್ಕೂರು ಕೆರೆಯ ನೋಟ   

ಬೆಂಗಳೂರು: ಸುತ್ತಮುತ್ತ ಪ್ರವಾಸಿತಾಣವೆಂದೇ ಗುರುತಿಸಿಕೊಂಡಿರುವ ಜಕ್ಕೂರು ಕೆರೆ ಸ್ವಚ್ಛತೆ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ನಗರದ ಇತರ ಕೆರೆಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಈಗ ಇದನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಇದರ ಚಿತ್ರಣ ಬದಲಾಗಲಿದೆ.

ಕೆರೆ ಅಭಿವೃದ್ಧಿಗಾಗಿ ಎರಡು ಖಾಸಗಿ ಸಂಸ್ಥೆಗಳು ಮುಂದೆ ಬಂದಿದ್ದು, ಒಂದು ಸಂಸ್ಥೆ ಬಂಡವಾಳ ಹೂಡಲಿದ್ದು, ಮತ್ತೊಂದು ಸಂಸ್ಥೆ ವಿವಿಧ ಕಾಮಗಾರಿಗಳ ಅನುಷ್ಠಾನದ ಹೊಣೆ ಹೊರಲಿದೆ. ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಆರ್‌ಎಸ್) ಎಲ್‌ ಆ್ಯಂಡ್‌ ಟಿ ಸಂಸ್ಥೆ ₹65 ಲಕ್ಷ ದೇಣಿಗೆ ನೀಡಿದ್ದು, ‘ಜಲ ಪೋಷಣ್’ ಸಂಸ್ಥೆಗೆ ಅಭಿವೃದ್ಧಿಯ ಜವಾಬ್ದಾರಿ ವಹಿಸಲಾಗಿದೆ.

160 ಎಕರೆ ವಿಸ್ತೀರ್ಣದ ಈ ಕೆರೆಯ ಸುತ್ತಳತೆ 5 ಕಿ.ಮೀ.ಗಳಷ್ಟಿದೆ. ಇದಕ್ಕೆ ಎರಡು ಪ್ರವೇಶ ದ್ವಾರಗಳಿವೆ. ಬೆಳಿಗ್ಗೆ 5ರಿಂದ 9 ಗಂಟೆ ಹಾಗೂ ಸಂಜೆ 4ರಿಂದ 7ಗಂಟೆಯವರೆಗೆ ಸಾರ್ವಜನಿಕರು ಕೆರೆಯ ಸುತ್ತ ವಿಹರಿಸಬಹುದಾಗಿದೆ. ವಾರಾಂತ್ಯದಲ್ಲಿ ನಾಗರಿಕರು ಮಕ್ಕಳು ಕುಟುಂಬದೊಂದಿಗೆ ಬಂದುಕೆರೆ ಬಳಿ ಸಮಯ ಕಳೆಯುತ್ತಾರೆ.

ADVERTISEMENT

ಕಳೆದ ವರ್ಷ 300ಕ್ಕೂ ಅಧಿಕ ಅಪರೂಪದ ಔಷಧಿ ಸಸ್ಯಗಳನ್ನು ಇಲ್ಲಿ ನೆಟ್ಟು ಬೆಳೆಸಿದ ಕಾರಣ, ಬಗೆಬಗೆಯ ಚಿಟ್ಟೆಗಳು ಬೀಡುಬಿಟ್ಟಿವೆ.

‘2015ರಲ್ಲಿ ಜಲಪೋಷಣ್ ಸಂಸ್ಥೆ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡು ಕೆರೆಯ ನಿರ್ವಹಣೆ ಮಾಡುತ್ತಿದೆ. ಕೆರೆಯ ಸಮೀಪ ಬಯಲು ರಂಗಮಂದಿರ, ಮಕ್ಕಳ ಆಟದ ಮೈದಾನ, ಚಿಟ್ಟೆ ಉದ್ಯಾನ ನಿರ್ಮಿಸಲಾಗುತ್ತದೆ. ಇಲ್ಲಿರುವ ಸಸ್ಯಗಳಿಗೆ ಜಿಪಿಎಸ್ ಅಳವಡಿಕೆ, 50 ಸೌರವಿದ್ಯುತ್‌ ಕಂಬ ಅಳವಡಿಸಲಾಗುವುದು. ವನ ಮಹೋತ್ಸವ ಯೋಜನೆಯಡಿ 3 ಸಾವಿರ ಸಸಿಗಳನ್ನು ನೆಡಲು ಉದ್ದೇಶಿಸ
ಲಾಗಿದೆ’ ಎಂದು ಜಲ ಪೋಷಣ್ ಸಂಸ್ಥೆಯ ಸ್ಥಾಪಕ ಟ್ರಸ್ಟಿ ಅನ್ನಪೂರ್ಣಾ ಎಸ್.ಕಾಮತ್ ಅವರು
‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆಯ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ಜಾಗ ಇರಲಿಲ್ಲ. ಅಂದವಾದ ಬಯಲು ರಂಗಮಂದಿರ ನಿರ್ಮಾಣವಾಗ
ಲಿದೆ. ಅಷ್ಟೇ ಅಲ್ಲ ಪುಟ್ಟ ಮಕ್ಕಳು ಆಟ ವಾಡಲು ಮರುಬಳಕೆ ವಸ್ತುಗಳಿಂದ ಪುಟ್ಟ ಉದ್ಯಾನ ನಿರ್ಮಾಣವಾಗಲಿದೆ. ಆ್ಯಂಟ್‌ಹಿಲ್‌ ಎಂಬ ವಿನ್ಯಾಸ ಸಂಸ್ಥೆಗೆ ಇದರ ಉಸ್ತುವಾರಿ ನೀಡಿದ್ದೇವೆ. ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಈ ಎಲ್ಲಾ ಕಾಮಗಾರಿಗಳು ಪೂರ್ಣ
ಗೊಳ್ಳಲಿವೆ’ ಎಂದು ಅವರು ಮಾಹಿತಿ ನೀಡಿದರು.

ಡಿ.8ರವರೆಗೆ ‘ಜಕ್ಕೂರು ಕೆರೆ ಉತ್ಸವ’

ಕೆರೆ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಡಿಸೆಂಬರ್‌ 8ರವರೆಗೆ‘ಜಕ್ಕೂರು ಕೆರೆ ಉತ್ಸವ’ ನಡೆಯಲಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಶ್ರಮದಾನ, ಯೋಗ, ದೀಪೋತ್ಸವ ಇರಲಿದ್ದು, ಸಂಪನ್ಮೂಲ ವ್ಯಕ್ತಿಗಳು ಜೀವ ವೈವಿಧ್ಯ ಬಗ್ಗೆ ಕಿರು ಪರಿಚಯ ನೀಡಲಿದ್ದಾರೆ.

ರಾಷ್ಟ್ರ ಪ್ರಶಸ್ತಿ ಗರಿ

ಜಕ್ಕೂರು ಕೆರೆ ಸಂರಕ್ಷಣೆ ಗಾಗಿಜಲಪೋಷಣ್ ಟ್ರಸ್ಟ್‌ಗೆ 2019ನೇ ಸಾಲಿನ ‘ನ್ಯಾಷನಲ್ ವಾಟರ್ ಮಿಷನ್ ಅವಾರ್ಡ್’ ದೊರೆತಿದೆ.

ರಾಷ್ಟ್ರೀಯ ವಾಟರ್ ಮಿಷನ್, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ಹಾಗೂ ಜಲಶಕ್ತಿ ಸಚಿವಾಲಯವು ಈ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಶಸ್ತಿಯು ₹1.5 ಲಕ್ಷ ನಗದನ್ನು ಒಳಗೊಂಡಿದೆ. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರಶಸ್ತಿ ಪ್ರದಾನ ಮಾಡಿದರು.

ನಗರದಲ್ಲಿ ಸ್ವಚ್ಛವಾಗಿರುವ ಕೆರೆಯಲ್ಲಿ ಇದೂ ಒಂದು. ಕಾಮಗಾರಿ ಪೂರ್ಣಗೊಂಡ ಬಳಿಕ ಇದು ಮಾದರಿ ಕೆರೆಯಾಗಲಿದೆ.

-ಅನ್ನಪೂರ್ಣಾ ಎಸ್.ಕಾಮತ್,ಜಲ ಪೋಷಣ್ ಸಂಸ್ಥೆಯ ಸ್ಥಾಪಕ ಟ್ರಸ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.