ADVERTISEMENT

ಹಿಂದುಳಿದ ಪ್ರದೇಶವಲ್ಲ: ಕಲ್ಯಾಣ ಕರ್ನಾಟಕ

ಗುರುವಂದನಾ ಕಾರ್ಯಕ್ರಮದಲ್ಲಿ ಬಸವರಾಜ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 9:07 IST
Last Updated 16 ಏಪ್ರಿಲ್ 2018, 9:07 IST

ಸೇಡಂ: ‘ಹೈದರಾಬಾದ್ ಕರ್ನಾಟಕ ಭಾಗ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಜನರಲ್ಲಿ ಅಚ್ಚಾಗಿ ಕುಳಿತಿದೆ. ಅದನ್ನು ಕಿತ್ತೊಗೆದು ನಾವು ಕಲ್ಯಾಣ ಕರ್ನಾಟಕ ನಾಡಿನ ಮೇರು ವ್ಯಕ್ತಿದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕಾಗಿದೆ. ಕಲ್ಯಾಣ ಕರ್ನಾಟಕ ಇಡಿ ಜಗತ್ತಿಗೆ ಸಂದೇಶ ನೀಡಿದ ಮಹತ್ವದ ನಾಡು’ ಎಂದು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಬಸವರಾಜ ಪಾಟೀಲ ಸೇಡಂ ಹೇಳಿದರು.

ಪಟ್ಟಣದ ಮಾತೃಛಾಯ ಕಾಲೇಜಿನಲ್ಲಿ ಭಾನುವಾರ ಕೊತ್ತಲ ಬಸವೇಶ್ವರ ಸಂಸ್ಥೆಯಲ್ಲಿ ಕಲಿತ 1990-91ರ ಹಳೆಯ ವಿದ್ಯಾರ್ಥಿಗಳ ಬಳಗ ಆಯೋಜಿಸಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಾಲೆ ಸಾಮಾಜಿಕ ಪರಿವರ್ತನಾ ಕೇಂದ್ರವಾಗಬೇಕು ಎನ್ನುವ ಸದುದ್ದೇಶದಿಂದ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯನ್ನು ಸ್ಥಾಪಿಸಲಾಗಿದೆ. 1974ರಲ್ಲಿ ಸ್ಥಾಪನೆಯಾದ ಸಂಸ್ಥೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ಅಲ್ಲದೆ ಕೊತ್ತಲ ಬಸವೇಶ್ವರ ದೇವಾಲಯ ಮತ್ತು ಸೇಡಂ ತಾಲ್ಲೂಕು ಇಡೀ ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ 2025 ರಲ್ಲಿ ಸಂಸ್ಥೆಯ ವತಿಯಿಂದ ‘ಸ್ವರ್ಣ ಮಹೋತ್ಸವ’ ಎಂಬ ಬೃಹತ್ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಜಗತ್ತಿನ ವಿವಿಧ ದೇಶಗಳಿಂದ ಸುಮಾರು 20 ಲಕ್ಷ ಜನ ಸೇರುವ ಸಾಧ್ಯತೆ ಇದ್ದು, ಅಂದಾಜು ₹100 ಕೋಟಿ ಖರ್ಚಾಗಲಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದರು.

ADVERTISEMENT

ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಆಡಳಿತಾಧಿಕಾರಿ ಶಿವಯ್ಯ ಮಠಪತಿ ಮಾತನಾಡಿ, ‘ಆಧುನಿಕ ಜಗತ್ತಿನಲ್ಲಿ ಶಿಕ್ಷಣದ ಪರಿಕಲ್ಪನೆ ಮತ್ತು ಧೋರಣೆಗಳೇ ಬದಲಾಗುತ್ತಿವೆ. ಎಲ್ಲರೂ ಇಂಗ್ಲಿಷದದ ಶಿಕ್ಷಣದತ್ತ ವಾಲುತ್ತಿದ್ದಾರೆ. ಆದರೆ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ನೀವು, ಹಿಂದಿನ ವಿದ್ಯಾರ್ಥಿ ಜೀವನದ ಜೊತೆಗಿನ ನೆನಪುಗಳನ್ನು ಸ್ಮರಿಸಿಕೊಂಡು, ಇಂದಿನ ಪಾಲಕರಾಗಿ ತಮ್ಮ ಮಕ್ಕಳಿಗೆ ಸಂಸ್ಕಾರ ಮತ್ತು ಮುಕ್ತ ಮನಸ್ಸಿನ ಶಿಕ್ಷಣ ಕೊಡಿಸಬೇಕು’ ಎಂದು ತಿಳಿಸಿದರು.

ವಿಕಾಸ ಆಕಾಡೆಮಿಯ ಪಿ. ಭೀಮರೆಡ್ಡಿ ಮಾತನಾಡಿದರು. ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ದೇವರು ಸಾನ್ನಿಧ್ಯ ವಹಿಸಿದ್ದರು. ಬಸವರಾಜ ರೇವಗೊಂಡ ಸ್ವಾಗತಿಸಿದರು. ಸೂರ್ಯಕಾಂತ ನಿರೂಪಿಸಿದರು.

**

ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಬೇಕಾದರೆ ಗಟ್ಟಿಯಾದ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಯಬೇಕಾಗಿದೆ. ಕಲಿಕೆಯ ಜೊತೆಗೆ ವ್ಯಕ್ತಿತ್ವ ವಿಕಸನ ಅಗತ್ಯ –  ಶಿವಯ್ಯ ಮಠಪತಿ, ಆಡಳಿತಾಧಿಕಾರಿ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.