ADVERTISEMENT

ಕಲಬುರಗಿ ಉದ್ಯೋಗ ಮೇಳದಲ್ಲಿ 2,240 ಜನರಿಗೆ ಕೆಲಸ: ಸಚಿವ ಅಶ್ವತ್ಥ ನಾರಾಯಣ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 11:51 IST
Last Updated 27 ಫೆಬ್ರುವರಿ 2022, 11:51 IST
   

ಬೆಂಗಳೂರು: ‘ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಕಲಬುರಗಿಯಲ್ಲಿ ಫೆ. 12ರಂದು ನಡೆದ ಉದ್ಯೋಗ ಮೇಳದಲ್ಲಿ ಒಟ್ಟು 2,240 ಜನರಿಗೆ ಉದ್ಯೋಗ ಸಿಕ್ಕಿದೆ’ ಎಂದು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಒಂದು ದಿನದ ಈ ಮೇಳದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಬಿ.ಇ, ಬಿ.ಟೆಕ್, ಎಂ.ಟೆಕ್ ವಿದ್ಯಾರ್ಹತೆ ಹೊಂದಿರುವ ಒಟ್ಟು 8,670 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.

‘ಒಟ್ಟು 83 ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿದ್ದವು. ಉದ್ಯೋಗ ದೊರಕಿಸಿಕೊಂಡಿರುವ ಅಭ್ಯರ್ಥಿಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯುಳ್ಳ 382, ಪಿಯುಸಿ ಮಟ್ಟದ 342, ಐಟಿಐ ವಿದ್ಯಾರ್ಹತೆಯುಳ್ಳ 520, ಡಿಪ್ಲೊಮಾ ಓದಿರುವ 343, ಪದವಿ ಓದಿರುವ 425, ಸ್ನಾತಕೋತ್ತರ ಶಿಕ್ಷಣ ಹೊಂದಿರುವ 72, ಬಿ.ಇ., ಬಿ.ಟೆಕ್ ಓದಿರುವ 133 ಮತ್ತು ಎಂ.ಟೆಕ್ ವಿದ್ಯಾಭ್ಯಾಸವುಳ್ಳ 23 ಮಂದಿ ಇದ್ದಾರೆ‘ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

‘ಸಂದರ್ಶನ ಎದುರಿಸಿದವರಲ್ಲಿ 298 ಮಂದಿಯನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಅವರಿಗೆ ಕೌಶಲ ತರಬೇತಿ ನೀಡಿ, ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಲಾಗುವುದು. ಇದಕ್ಕೆ ಅಭ್ಯರ್ಥಿಗಳು ಯಾವುದೇ ಶುಲ್ಕ ಭರಿಸಬೇಕಾಗಿಲ್ಲ’ ಎಂದು ವಿವರಿಸಿದ್ದಾರೆ.

ಸಿಂಪ್ಲಿಫೈ3ಎಕ್ಸ್, ಬಾಶ್, ಟೊಯೊಟಾ ಕಿರ್ಲೋಸ್ಕರ್, ಬೈಜೂಸ್, ಅನ್‌ಟಿಟಿಎಫ್., ಗ್ರೀಟ್ ಟೆಕ್ನಾಲಜೀಸ್, ಟೆಕ್ ವೈಸ್ ಐಟಿ ಸಲ್ಯೂಶನ್ಸ್, ಸಿನಾಪ್ಟೆಕ್ಸ್, ಗ್ರಾಮ ವಿಕಾಸ ಸೊಸೈಟಿ, ಸಾಯಿ ಫಾರ್ಮಿಕಲ್ಚರ್, ಹಿಮಾಲಯ ವೆಲ್ನೆಸ್ ಕಂಪನಿ, ಪ್ರಾಣ ಹೆಲ್ತ್ ಕೇರ್, ಯೂನಿಬಿಕ್, ಅಜೀಂ ಪ್ರೇಂಜಿ ಫೌಂಡೇಶನ್, ಯೋನೆಕ್ಸ್ ಮುಂತಾದ ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು.

ಮಲ್ಲೇಶ್ವರ ಉದ್ಯೋಗ ಮೇಳ: ಬೆಂಗಳೂರಿನ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರಿಯಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಫೆ. 26) ನಡೆದ ಉದ್ಯೋಗ ಮೇಳದಲ್ಲಿ 115 ಮಂದಿಗೆ ಉದ್ಯೋಗ ಸಿಕ್ಕಿದೆ. ಈ ಮೇಳದಲ್ಲಿ 44 ಕಂಪನಿಗಳು ಭಾಗವಹಿಸಿದ್ದು, ಒಟ್ಟು 1,085 ಉದ್ಯೋಗಾಕಾಂಕ್ಷಿಗಳು ಹೆಸರು ನೋಂದಾಯಿಸಿಕೊಂಡಿದ್ದರು ಎಂದೂ ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.