ADVERTISEMENT

ಸಂಘರ್ಷಕ್ಕಿಂತ ಸಂಧಾನಮಾರ್ಗ ಉತ್ತಮ: ಸಮ್ಮೇಳನಾಧ್ಯಕ್ಷ ಸುಳ್ಳದ

ಆಳಂದದಲ್ಲಿ ಸಂಭ್ರಮದ 9ನೇ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 8:31 IST
Last Updated 14 ಜನವರಿ 2018, 8:31 IST
ಆಳಂದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಕನ್ನಡ ಅಭಿಮಾನಿಗಳು
ಆಳಂದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಕನ್ನಡ ಅಭಿಮಾನಿಗಳು   

ಆಳಂದ: ‘ಸಮಾಜದಲ್ಲಿ ಬೇರೂರಿದ ಜಾತಿಪದ್ಧತಿ, ಮೌಢ್ಯತೆ, ಅಸಮಾನತೆಗಳನ್ನು ಹೋಗಲಾಡಿಸಲು ಪರಸ್ಪರ ಸಮುದಾಯದ ಜನರು ಸಂಘರ್ಷ ಬಿಟ್ಟು, ವೈಚಾರಿಕ ಮತ್ತು ವೈಜ್ಞಾನಿಕವಾದ ಸಂಧಾನ ಮಾರ್ಗ ಬೆಳೆಸಿಕೊಳ್ಳುವುದು ಉತ್ತಮ’ ಎಂದು ಆಳಂದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎಸ್.ಪಿ.ಸುಳ್ಳದ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಭವನದ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಆಯೋಜಿಸಿದ ‘9ನೇ ಆಳಂದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ’ ಸರ್ವಾಧ್ಯಕ್ಷರಾಗಿ ಭಾಷಣ ಮಾಡಿದರು.

ವಿಚಾರಪರವಾದ ಗೋಷ್ಠಿ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಆದರೆ, ಪ್ರಸ್ತುತ ದಿನಗಳಲ್ಲೂ ಸಮಾಜಗಳು ಒಡೆಯುತ್ತಿವೆ. ವ್ಯಕ್ತಿ ಬಲಿಷ್ಠನಾದರೂ ವ್ಯಕ್ತಿತ್ವ ಮಾತ್ರ ಕನಿಷ್ಠವಾಗುತ್ತಿದೆ. ಅದಕ್ಕೆ ನಡೆ–ನುಡಿ, ಬರಹ–ಭಾಷಣದ ಜೊತೆಗೆ ಬದುಕಿನಲ್ಲಿ ಮೌಲ್ಯಗಳು ರೂಪುಗೊಳ್ಳಬೇಕು ಎಂದರು.

ADVERTISEMENT

‘ಆಳಂದ ತಾಲ್ಲೂಕಿನ ಜನರು ರಾಜ್ಯದ ಎಲ್ಲೆಡೆ ಗುರುತಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಹೋರಾಟ, ಪ್ರಗತಿಪರ ಆಲೋಚನೆ ಮತ್ತು ಸಂಘಟನೆಯಲ್ಲಿ ಇಲ್ಲಿ ಕ್ರಿಯಾಶೀಲತೆ ಇದೆ. ಇದು ಮುಂದುವರಿಯಬೇಕು. ತಾಲ್ಲೂಕಿನ ರೈತರ ಪ್ರಗತಿಗೆ ನೀರಾವರಿ ಯೋಜನೆ, ಯುವಕರಿಗೆ ಉತ್ತಮ ಶಿಕ್ಷಣ ಅವಶ್ಯಕ’ ಎಂದರು.

ಸಮ್ಮೇಳನವನ್ನು ಉದ್ಘಾಟಿಸಿದ ಡಾ.ಡಿ.ಜಿ.ಸಾಗರ ಮಾತನಾಡಿ, ‘ದೇಶದ ಜಾತ್ಯತೀತ, ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ತತ್ವಗಳಿಗೆ ಅಡ್ಡಿಯನ್ನುಂಟು ಮಾಡುವ ಹುನ್ನಾರ ನಡೆದಿದೆ. ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ವೈಚಾರಿಕ ಹೋರಾಟ ನಿರಂತರವಾಗಿ ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು.

ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ‘ಜಗತ್ತಿನ ಅನೇಕ ಕ್ರಾಂತಿ, ಹೋರಾಟಗಳಿಗೆ ಸಾಹಿತ್ಯವು ಸ್ಫೂರ್ತಿ ನೀಡಿದೆ. ಪ್ರಸ್ತುತ ದೇಶದಲ್ಲಿ ಶೋಷಣೆವಾದ ಮತ್ತು ಶೋಷಣೆ ಮುಕ್ತವಾದಗಳ ನಡುವೆ ಸಂಘರ್ಷ ಸಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಾಹಿತ್ಯವು ಸಮಾಜದ ಹಿತ ಕಾಯುವ ಕೆಲಸ ಮಾಡಬೇಕು’ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಡಾ.ನೀಲಾಂಬಿಕಾ ಪಾಟೀಲ ಮಾತನಾಡಿದರು. ಮಹಾರಾಷ್ಟ ರಾಜ್ಯ ಕಸಾಪ ಅಧ್ಯಕ್ಷ ಬಸವರಾಜ ಮಸೂತಿ, ಜಿ.ಪಂ ಸದಸ್ಯ ಸಿದ್ದರಾಮ ಪ್ಯಾಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ, ಪುರಸಭೆ ಉಪಾಧ್ಯಕ್ಷ ಅಜಗರಲಿ ಹವಾಲ್ದಾರ್, ನಾಗೇಶ ಕೊಳ್ಳಿ, ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಭಕರೆ, ವಲಯ ಅಧ್ಯಕ್ಷ ನರಸಪ್ಪ ಬಿರಾದಾರ, ಭರತರಾಜ ಸಾವಳಗಿ, ಡಾ.ಸೂರ್ಯಕಾಂತ ಪಾಟೀಲ, ಡಿ.ಎಂ.ನದಾಫ್, ಸಿ.ಎಸ್.ಮಾಲಿಪಾಟೀಲ, ದೌಲತರಾವ ಪಾಟೀಲ ಇದ್ದರು.

ಬೆಳಮಗಿಯ ಅರ್ಚನಾ ಸೂರಪ್ಪಗೋಳ ಅವರು ರಚಿಸಿದ ‘ಉತ್ತರವಿಲ್ಲದ ಪ್ರಶ್ನೆ’ ಪುಸ್ತಕವನ್ನು ಶಾಸಕ ಪಾಟೀಲ ಹಾಗೂ ಕಸಾಪ ಹೊರತಂದ ‘ಅಮರ್ಜಾ ಸ್ಮರಣ ಸಂಚಿಕೆ’ಯನ್ನು ವೀರಭದ್ರ ಸಿಂಪಿ ಬಿಡುಗಡೆಗೊಳಿಸಿದರು. ಕಾರ್ಯದರ್ಶಿ ಸಂಜಯ ಪಾಟೀಲ ನಿರೂಪಿಸಿದರು. ಅಧ್ಯಕ್ಷ ವಿಶ್ವನಾಥ ಭಕರೆ ಸ್ವಾಗತಿಸಿದರು. ರಮೇಶ ಮಾಡಿಯಾಳಕರ ವಂದಿಸಿದರು. ಕಲಾವಿದ ಶಂಕರ ಹೂಗಾರ, ಶಿವಶರಣಪ್ಪ ಪೂಜಾರಿ, ಬಸವರಾಜ ಆಳಂದ, ಗೌರಮ್ಮ ಮಾನೆ ನೇತೃತ್ವದಲ್ಲಿ ವಿವಿಧ ನಾಡಗೀತೆಗಳ ಗಾಯನ ನಡೆಯಿತು.

ಬೆಳಗ್ಗೆ ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ ರಾಷ್ಟ್ರಧ್ವಜ ನೆರವೇರಿಸಿದರು. ಉಪಾಧ್ಯಕ್ಷ ಅಜಗರಲಿ ಹವಾಲ್ದಾರ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಂತರ ಪಟ್ಟಣದ ಲಾಡ್ಲೆ ಮಶಾಕ ದರ್ಗಾದಿಂದ ಸಮ್ಮೇಳನಾಧ್ಯಕ್ಷ ಎಸ್‌.ಪಿ.ಸುಳ್ಳದ ಅವರನ್ನು ಸಾರೋಟದಲ್ಲಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯತು. ಪಟ್ಟಣದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಾದನ ಹಿಪ್ಪರಗಾ, ಕೆರೂರು, ಆಳಂದ, ಮೈಂದರ್ಗಿ ಕಲಾತಂಡಗಳ ಭಾಜಾ ಭಜಂತ್ರಿ, ಹಲಗೆ, ಸಿಂಗ, ಡೋಳ್ಳು ಕುಣಿತದ ವೈಭವವು ಗಮನ ಸೆಳೆಯಿತು. ಕನ್ನಡ ಧ್ವಜಗಳು, ಕನ್ನಡಪರ ಘೋಷಣೆಗಳ ನಾಮಫಲಕ ಹಿಡಿದು ಕನ್ನಡಾಸಕ್ತರು ಸಮ್ಮೇಳನದ ಮೆರಗು ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.