ADVERTISEMENT

ಕಲಬುರಗಿ: 650 ಬಸ್‌ಗಳ ಖರೀದಿಗೆ ಅಸ್ತು: ತೇಲ್ಕೂರ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 15:56 IST
Last Updated 13 ಆಗಸ್ಟ್ 2022, 15:56 IST
ರಾಜಕುಮಾರ ಪಾಟೀಲ
ರಾಜಕುಮಾರ ಪಾಟೀಲ   

ಕಲಬುರಗಿ: ‘ಬಹು ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ಕ್ಕೆ 650 ಬಸ್ ಖರೀದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆ ಅಸ್ತು ನೀಡಿದೆ. ಇದು ಬೊಮ್ಮಾಯಿ ಅವರು ಕಲ್ಯಾಣ ಕರ್ನಾಟಕ ಭಾಗದ ಮೇಲೆ ಹೊಂದಿರುವ ಅಭಿವೃದ್ಧಿ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ’ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ತೇಲ್ಕೂರ, ‘ಸರ್ಕಾರದ ನಿರ್ಧಾರ ಸಂಸ್ಥೆಯ ಬಲವರ್ಧನೆಗೆ ಪೂರಕವಾಗಲಿದೆ. ಕೋವಿಡ್‌ನ ತೀವ್ರ ನಷ್ಟದಿಂದ ಹೊರ ಬರಲು ಸಂಸ್ಥೆ ಹತ್ತಾರು ನಿಟ್ಟಿನಲ್ಲಿ ಹೊಸ ಕಾರ್ಯಕ್ಕೆ ಮುಂದಾಗಿದ್ದು, ಅದರಲ್ಲಿ ಹೊಸ ಬಸ್‌ಗಳ ಖರೀದಿ ಪ್ರಮುಖವಾಗಿದೆ. ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬಸ್‌ಗಳನ್ನು ₹ 199.40 ಕೋಟಿ ವೆಚ್ಚದಲ್ಲಿ ಖರೀದಿಗೆ ಅಸ್ತು ನೀಡಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದಿದ್ದಾರೆ.

ಹೊಸ ಬಸ್‌ಗಳು ಸಂಸ್ಥೆಗೆ ಸೇರ್ಪಡೆಯಾದ ನಂತರ ಸಂಸ್ಥೆ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಾಧ್ಯವಾಗುತ್ತದೆಯಲ್ಲದೇ ಪ್ರಮುಖವಾಗಿ ಸಾರಿಗೆ ಸೇವೆ ಸುಧಾರಣೆಗೆ ಕ್ರಮ ಕೈಗೊಳ್ಳಲು ಪೂರಕವಾಗುತ್ತದೆ. ಇನ್ನೂ ಸಾರಿಗೆ ಸೇವೆ ಕಾಣದ ಹಳ್ಳಿಗಳಿಗೆ ಸಾರಿಗೆ ಸಂಚಾರದ ಸೇವೆ ಕಲ್ಪಿಸಲು ಸಾಧ್ಯವಾಗುತ್ತದೆ’ ಎಂದು ವಿವರಿಸಿದ್ದಾರೆ.

ADVERTISEMENT

‘1619 ಚಾಲಕ ಕಂ ನಿರ್ವಾಹಕ ಹುದ್ದೆಗಳ ಭರ್ತಿಗೆ ಈಗಾಗಲೇ ದೃಢ ಹೆಜ್ಜೆ ಇಡಲಾಗಿದ್ದು, ಆಗಸ್ಟ್ ಅಂತ್ಯದೊಳಗೆ ಅರ್ಜಿಗಳ ಪ್ರಗತಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಾರೆ ಮುಂದಿನ ಮುಂದಿನ‌ ನಾಲ್ಕೈದು ತಿಂಗಳೊಳಗೆ 1619 ಚಾಲಕ ಕಂ ನಿರ್ವಾಹಕರು ಸೇವೆಗೆ ಸೇರಲಿದ್ದಾರೆ’ ಎಂದು ತೇಲ್ಕೂರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.