ADVERTISEMENT

ದರೋಡೆಗೆ ಸಂಚು; ಏಳು ಜನರ ತಂಡ ಬಂಧನ

ಮಾರಕಾಸ್ತ್ರ, ನಕಲಿ ಪಿಸ್ತೂಲ್‌, ಕಾರ್‌, ಬೈಕ್‌ ಮೊಬೈಲ್‌ಗಳನ್ನು ವಶಕ್ಕೆ ಪಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 7:38 IST
Last Updated 25 ಅಕ್ಟೋಬರ್ 2020, 7:38 IST
ಕಲಬುರ್ಗಿಯಲ್ಲಿ ಶನಿವಾರ ದರೋಡೆಗೆ ಸಂಚು ರೂಪಿಸಿದ್ದ ಏಳು ಜನರ ತಂಡವನ್ನು ಅಶೋಕ ನಗರದ ಪೊಲೀಸರು ಬಂಧಿಸಿದರು
ಕಲಬುರ್ಗಿಯಲ್ಲಿ ಶನಿವಾರ ದರೋಡೆಗೆ ಸಂಚು ರೂಪಿಸಿದ್ದ ಏಳು ಜನರ ತಂಡವನ್ನು ಅಶೋಕ ನಗರದ ಪೊಲೀಸರು ಬಂಧಿಸಿದರು   

ಕಲಬುರ್ಗಿ: ನಗರ ಹೊರವಲಯದಲ್ಲಿ ಬೆಳಿಗ್ಗೆ 8ರ ಸುಮಾರಿಗೆ ದರೋಡೆಗೆ ಹೊಂಚು ಹಾಕಿ ಕಾಯುತ್ತಿದ್ದ ಏಳು ಜನರ ತಂಡನ್ನು ಇಲ್ಲಿನ ಅಶೋಕ ನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆರೋಪಿಗಳಿಂದ ನಕಲಿ ಪಿಸ್ತೂಲ್‌, ಬೈಕ್‌, ಕಾರ್‌ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೃಷ್ಣ ಅಲಿಯಾಸ್ ಗಜ್ಜು ಪವಾರ, ಆಕಾಶ ಹಲಕಟ್ಟಿ, ಶಿವಲಿಂಗೇಶ್ವರ ಅಲಿಯಾಸ್ ಮುತ್ತು ತಳವಾರ, ವಿಶಾಲ ರಾಠೋಡ, ಕಾರ್ತಿಕ, ಪೃಥ್ವಿ, ಸಂದೀಪ ಚವ್ಹಾಣ ಬಂಧಿತರು. ಇವರೆಲ್ಲರೂ ರಾಜಾಪುರ ಬಡಾವಣೆ, ಆನಂದ ನಗರ, ಗಣೇಶ ನಗರ ನಿವಾಸಿಗಳಾಗಿದ್ದಾರೆ. ಇವರೊಂದಿಗೆ ಇದ್ದ ಇನ್ನಿಬ್ಬರಾದ ನಂದೂರ ಗ್ರಾಮದ ಮಿಥುನ್ ಜಾಧವ ಹಾಗೂ ರಾಘು ಕಲಕೇರಿ ಎಂಬುವವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಹೊರವಲಯದ ಕುಸನೂರ ತಾಂಡಾ ರಸ್ತೆಯಲ್ಲಿ ಶನಿವಾರ ಈ ತಂಡ ದರೋಡೆಗೆ ಹೊಂಚು ಹಾಕಿತಿತ್ತು. ವಿಶ್ವವಿದ್ಯಾಲಯ ಠಾಣಾ ವ್ಯಾಪ್ತಿಯ ಕುಸನೂರ ತಾಂಡಾ ರಸ್ತೆಯಲ್ಲಿ ಕೆಲವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೈಕ್ ಮೇಲೆ ಹೋಗುವವರಿಗೆ ಬೆದರಿಸುತ್ತಿದ್ದಾರೆ ಎಂದು ಕೇಂದ್ರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಪೊಲೀಸರಿಗೆ ವ್ಯಕ್ತಿಯೊಬ್ಬರು ಖಚಿತ ಮಾಹಿತಿ ನೀಡಿದರು.

ADVERTISEMENT

ಇದರಿಂದ ಎಚ್ಚೆತ್ತುಕೊಂಡ ಅಶೋಕ ನಗರ ಪೊಲೀಸರು, ನಗರ ಪೊಲೀಸ್‌ ಕಮಿಷನರ್‌ ಎನ್.ಸತೀಶ ಕುಮಾರ, ಡಿಸಿಪಿ ಕಿಶೋರ ಬಾಬು ಮಾರ್ಗದರ್ಶನದಲ್ಲಿ ದಾಳಿಗೆ ಮುಂದಾದರು. ಪಿಎಸ್‌ಐ ವಾಹೀದ್‌ ಹುಸೇನ್ ಕೊತ್ವಾಲ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ, ಆರೋಪಿಗಳನ್ನು ಮಾರಕಾಸ್ತ್ರಗಳ ಸಮೇತ ಬಂಧಿಸುವಲ್ಲಿ ಯಶಸ್ವಿಯಾದರು.

ಬಂಧಿತರಾದವರಲ್ಲಿ ಕೃಷ್ಣ ಹಾಗೂ ವಿಶಾಲ್‌ ಎಂಬ ಯುವಕರಿಂದ ತಲಾ ಒಂದು ಹರಿತವಾದ ಆಯುಧ, ಒಂದು ಮೊಬೈಲ್, ಆಕಾಶ, ಶಿವಲಿಂಗೇಶ್ವರನಿಂದ ತಲಾ ಒಂದೊಂದು ಮೊಬೈಲ್, ಕಾರ್ತಿಕ್‌ನಿಂದ ಒಂದು ಕ್ರಿಕೆಟ್ ಬ್ಯಾಟ್, ಮೊಬೈಲ್, ಪೃಥ್ವಿಯಿಂದ ಮೊಬೈಲ್, ಖಡ್ಗ, ಸಂದೀಪ್ ಬಳಿ ₹ 1000 ಮೌಲ್ಯದ ನಕಲಿ ಪಿಸ್ತೂಲ್ ಹಾಗೂ ಒಂದು ಪ್ಲಾಸ್ಟಿಕ್‌ ಚೀಲದ ತುಂಬ ಖಾರದ ಪುಡಿ ಜಪ್ತಿ ಮಾಡಲಾಗಿದೆ.

ಜತೆಗೆ, ₹ 30 ಸಾವಿರ ಬೆಲೆಬಾಳುವ ಹಳೆಯ ಕಾರು ಹಾಗೂ ₹ 15 ಸಾವಿರ ಬೆಲೆ ಬಾಳುವ ಬೈಕ್‌ ಕೂಡ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಾರಿಯಾದ ಇಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಶೋಕನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆ ಹೇಗೆ?: ಸಾರ್ವಜನಿಕರೊಬ್ಬರು ಬಸ್‌ ನಿಲ್ದಾಣ ಎದುರಿಗೆ ನಿಂತಿದ್ದ ಪೊಲೀಸರಿಗೆ ದರೋಡೆಕೋರರ ಬಗ್ಗೆ ಸುಳಿವು ನೀಡಿದರು. ಅಲ್ಲಿಂದ ಕಾರ್ಯಪ್ರವೃತ್ತರಾದ ಅಶೋಕ ನಗರ ಪಿಎಸ್‌ಐ ವಾಹಿದ್‌ ಹುಸೇನ್‌ ಕೊತ್ವಾಲ್‌ ಅವರು ತಂಡ ರಚಿಸಿಕೊಂಡು ದಾಳಿಗೆ ಮುಂದಾದರು. ಕುಸನೂರು ತಾಂಡಾ ಬಳಿ ಈ ತಂಡ ಇರುವುದನ್ನು ಖಚಿತಪಡಿಸಿಕೊಂಡರು.

ದೂರದಲ್ಲಿ ಜೀಪ್‌ ನಿಲ್ಲಿಸಿದ ಪೊಲೀಸರು ಆರೋಪಿಗಳ ಬಳಿ ಹೋಗಿ, ಅವರಿಗೆ ಅರಿವಿಗೆ ಬರದಂತೆ ಸುತ್ತುವರಿಸಿದರು. ಇದನ್ನು ಕಂಡು ಕೆಲವರು ಚೆಲ್ಲಾಪಿಲ್ಲಿಯಾಗಿ ಓಡಿಹೋದರು. ಮೊದಲ ಹಿಡಿತದಲ್ಲೇ ಆರು ಜನ ಬಲೆಗೆ ಬಿದ್ದರು. ಮತ್ತೆ ಮೂವರು ಸ್ಥಳದಿಂದ ಪರಾರಿಯಾದರು. ಇವರ ತಂಡದ ಸದಸ್ಯನೇ ಆದ ಇನ್ನೊಬ್ಬ ದೂರದಲ್ಲಿ ನಿಂತು ಟೈಂ ನೋಡಿಕೊಳ್ಳುವಂತೆ ನಾಟಕ ಮಾಡುತ್ತಿದ್ದ. ಅನುಮಾನ ಬಂದು ಆತನನ್ನೂ ಬಂಧಿಸಿದರು. ದೂರದಲ್ಲೇ ನಿಂತಿದ್ದ ಈ ವ್ಯಕ್ತಿ ಯಾರಾದರೂ ಬರುತ್ತಾರೆಯೇ? ಪೊಲೀಸ್‌ ವಾಹನ ಬರುತ್ತಿದೆಯೇ ಎಂಬ ಸುಳಿವು ನೀಡುತ್ತಿದ್ದ. ಉಳಿದಿಬ್ಬರು ಪರಾರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.