
ವಾಡಿ: ‘ಸಿದ್ದತೋಟೇಂದ್ರರು ನನ್ನನ್ನು ಗುರುತಿಸಿ ಸಿದ್ದತೋಟೇಂದ್ರ ಪ್ರಶಸ್ತಿ ನೀಡಿದ್ದು ಬದುಕಿನ ಸಾರ್ಥಕಭಾವ ಮೂಡಿಸಿದೆ. ಪ್ರಶಸ್ತಿಗಿಂತಲೂ ಗುರುವಿನ ಆಶೀರ್ವಾದ ದೊರಕಿದ್ದು ಖುಷಿ ಕೊಟ್ಟಿದೆ’ ಎಂದು ಚಿತ್ರನಟ ಶ್ರೀನಾಥ ಹೇಳಿದರು.
ನಾಲವಾರದ ಕೋರಿಸಿದ್ಧೇಶ್ವರರ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಸಿದ್ದ ತೋಟೇಂದ್ರ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಗುರುಗಳ ಹಸ್ತದಿಂದ ಪ್ರಶಸ್ತಿ ಸ್ವೀಕರಿಸಿದ್ದು ಇಳಿವಯಸ್ಸಿನಲ್ಲೂ ಮತ್ತಷ್ಟು ಕೆಲಸ ಮಾಡಲು ಪ್ರೋತ್ಸಾಹ ನೀಡಿದೆ. ಇವತ್ತಿನ ದಿನ ನನ್ನ ಜೀವನದ ಆವಿಷ್ಮರಣಿಯ ಘಳಿಗೆಯಾಗಿದೆ. ಈ ಹಿಂದೆ ಡಾ.ರಾಜಕುಮಾರ ಅವರು ಇಲ್ಲಿಗೆ ಬಂದು ಹೋದ ಮೇಲೆ, ನನಗೆ ನಿಮಗೂ ಒಂದು ದಿನ ಪ್ರಶಸ್ತಿ ಕಾದಿದೆ ಎಂದು ಹೇಳಿದ್ದರು. ಅದು ಇಂದು ಪೂರ್ಣಗೊಂಡಿದೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಪೀಠಾಧಿಪತಿ ಸಿದ್ದ ತೋಟೆಂದ್ರ ಸ್ವಾಮೀಜಿ ಮಾತನಾಡಿ, ‘ಹಿರಿಯ ಚಿತ್ರನಟ ಶ್ರೀನಾಥ ಅವರು ಹೆಚ್ಚಾಗಿ ಕೌಟುಂಬಿಕ, ಕಾದಂಬರಿ ಆಧಾರಿತ ಚಲನಚಿತ್ರದಲ್ಲಿ ನಟಿಸಿದ್ದು, ಇಂದಿಗೂ ಅವರು ಅಪರೂಪದ ಸೌಂದರ್ಯ ಹೊಂದಿದ್ದಾರೆ. ಪ್ರಣಯರಾಜ ಎಂಬ ನಾಮಾಂಕಿತ ಸೂಕ್ತವಾಗಿದೆ’ ಎಂದರು.
ಕರಡಕಲ್‌ನ ಶಾಂತರುದ್ರಮುನಿ ಶಿವಾಚಾರ್ಯ, ಮುದ್ನೂರಿನ ಮಲ್ಲಿಕಾರ್ಜುನ ಶಿವಾಚಾರ್ಯ, ಸಿದ್ದಬಸವ ಕಬೀರ ಸ್ವಾಮೀಜಿ, ಸನ್ನತಿ ಚಂದ್ರಲಾಪರಮೇಶ್ವರ ದೇವಸ್ಥಾನದ ಅರ್ಚಕ ಶ್ರೀನಾಥ ಪೂಜಾರಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳ, ಕಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ, ಮಹೇಶ ಸ್ವಾಮಿ ಚಿಂಚೋಳಿ, ಮಹಾದೇವ ಗಂವಾರ ಉಪಸ್ಥಿತರಿದ್ದರು.
ಅಮರೇಶ ಗವಾಯಿ, ಚಂದ್ರಶೇಖರ ಗೋಗಿ, ಈರಣ್ಣ ಕುಲಕುಂದಿ, ಮಹಾಂತೇಶ ಸುರಪೂರ, ಸೂಗಮ್ಮ ಸುರಪೂರ, ವೆಂಕಟೇಶ ಸಂಗೀತ ಸೇವೆ ಸಲ್ಲಿಸಿದರು. ಶರಣಕುಮಾರ ಜಾಲಹಳ್ಳಿ, ಸಿದ್ದ ಔರಾದಿ, ಕಾಶೀನಾಥ ಮಳಗ, ಬಸವರಾಜ ಕಲಬುರಗಿ ಪ್ರಾರ್ಥಿಸಿದರು. ಸಿದ್ದರಾಜ ಕರೆಡ್ಡಿ ಸ್ವಾಗತಿಸಿದರು. ಭಕ್ತಕುಂಬಾರ ನಿರೂಪಿಸಿದರು.
ಮಕ್ಕಳೊಂದಿಗೆ ಕುಣಿದ ನಟ: ನಟ ಶ್ರೀನಾಥ ಅವರು ನಟಿಸಿರುವ ಚಲನಚಿತ್ರಗಳ ಗೀತೆಗೆ ನೃತ್ಯ ಮಾಡಿದ ಕೋರಿಸಿದ್ದೇಶ್ವರ ಶಿಕ್ಷಣ ಸಂಸ್ಥೆ ಮಕ್ಕಳು, ನೀನೇ ಸಾಕಿದಾ ಗಿಣಿ.... ಹಾಡಿಗೆ ಉತ್ಸುಕರಾದ ಶ್ರೀನಾಥ ಮಕ್ಕಳೊಂದಿಗೆ ತಾವೂ ಸಹ ನೃತ್ಯ ಮಾಡಿದರು.
ಪ್ರಶಸ್ತಿ ಪ್ರದಾನ: ಸುಮಾರು 650 ಚಲನಚಿತ್ರಗಳಲ್ಲಿ ನಟಿಸಿದ ಶ್ರೀನಾಥ ಅವರಿಗೆ ಶ್ರೀಮಠದ ವತಿಯಿಂದ 2026ನೇ ಸಾಲಿನ ಶ್ರೀಸಿದ್ದ ತೋಟೆಂದ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪತ್ರ, ಬೆಳ್ಳಿ ಕಿರೀಟ, ಶಾಲು, ಹಾರ, ಹಣ್ಣು, ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಅವರಿಗೂ ಸಹ ಗೌರವಿಸಿ, ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.