ADVERTISEMENT

ಅಫಜಲಪುರ: ನದಿ ಪಾತ್ರದ ಜನರನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 4:40 IST
Last Updated 23 ಆಗಸ್ಟ್ 2025, 4:40 IST
ಅಫಜಲಪುರ ತಾಲ್ಲುಕಿನ ಸೊನ್ನ ಬ್ಯಾರೇಜ್‌ಗೆ ಶುಕ್ರವಾರ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಭೇಟಿ ನೀಡಿ ಪರಿಶೀಲಿಸಿದರು. ಜಿ.ಪಂ ಸಿಇಒ ಭಂವರ್‌ಸಿಂಗ್ ಮೀನಾ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಎಸಿ ಸಾಹಿತ್ಯ ಆಲದಕಟ್ಟಿ ಇದ್ದರು.
ಅಫಜಲಪುರ ತಾಲ್ಲುಕಿನ ಸೊನ್ನ ಬ್ಯಾರೇಜ್‌ಗೆ ಶುಕ್ರವಾರ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಭೇಟಿ ನೀಡಿ ಪರಿಶೀಲಿಸಿದರು. ಜಿ.ಪಂ ಸಿಇಒ ಭಂವರ್‌ಸಿಂಗ್ ಮೀನಾ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಎಸಿ ಸಾಹಿತ್ಯ ಆಲದಕಟ್ಟಿ ಇದ್ದರು.   

ಅಫಜಲಪುರ: ತಾಲ್ಲೂಕಿನ ನದಿ ಪಾತ್ರದಲ್ಲಿ ವಾಸಿಸುತ್ತಿರುವರನ್ನು ಮನವಲಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಈಗಾಗಲೇ ಗುರುತಿರುವ ಕಾಳಜಿ ಕೇಂದ್ರಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕುಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಪ್ರವಾಹ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸನ್ನಧರಾಗಬೇಕು. ಸ್ಥಳೀಯ ಪರಿಣಿತ ಈಜುಗಾರರ ಜೊತೆ ನಿರಂತರ ಸಂಪರ್ಕ ಸಾಧಿಸಿ, ನೀರು ಬರುವ ಸ್ಥಳಗಳ ಹತ್ತಿರ ಬಿಳಿ ಬಣ್ಣದ ಪಟ್ಟಿ ಬಳಿಯಬೇಕು. ಪೋಲಿಸರು ನಿರಂತರ ಗಸ್ತು ಕೈಗೊಳ್ಳಬೇಕು’ ಎಂದರು.

‘ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ದೇವಲ ಗಾಣಗಾಪುರ, ಘತ್ತರಗಾದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಒಂದು ವಾರ ದೇವಸ್ಥಾನಕ್ಕೆ ಭಕ್ತರು ಬಾರದಂತೆ ಮನವಿ ಮಾಡಬೇಕು. ಸೊನ್ನ, ಘತ್ತರಗಾ, ದೇವಲ ಗಾಣಗಾಪುರದ ಬ್ಯಾರೇಜ್‌ನ ಗೇಟ್‌ಗಳ ಚಲನ ಸ್ಥಿತಿ ಪರಿಶೀಲಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಸೇತುವೆ ಬಳಿ ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದ್ದು, ಸೇತುವೆ ಮೇಲೆ ವಾಹನ ಚಲಾಯಿಸುವುದು, ಯುವಕರು ರೀಲ್ಸ್‌ ಮಾಡುವ ದುಸ್ಸಾಹಸ ಮಾಡುತ್ತಿದ್ದು, ಪೊಲೀಸರು ರಸ್ತೆಗೆ ಬ್ಯಾರಿಕೇಡ ಅಳವಡಿಸಿ, ಸಿಬ್ಬಂದಿ ನೇಮಿಸಬೇಕು’ ಎಂದು ತಿಳಿಸಿದರು.

ಜಿ.ಪಂ ಸಿಇಒ ಭಂವರಸಿಂಗ್‌ ಮೀನಾ ಮಾತನಾಡಿ, ‘ಗ್ರಾಮ ಪಂಚಾಯಿತಿ ಪಿಡಿಒಗಳು ಅಧ್ಯಕ್ಷ ಮತ್ತು ಸದಸ್ಯರ ಜೊತೆಗೆ ನಿರಂತರ ಸಂಪರ್ಕದಲ್ಲಿರಬೇಕು. ಸಕಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಶಿಥಿಲಾವಸ್ಥೆಯಲ್ಲಿರುವ ಶಾಲೆಗಳು, ನದಿ ಪಾತ್ರದಲ್ಲಿನ ಮುಳುಗಡೆ ಪ್ರದೇಶದ ಮನೆಗಳ ಪಟ್ಟಿ ತಯಾರಿ ಜಿಲ್ಲಾ ಪಂಚಾಯಿತಿಗೆ ಕಳುಹಿಸಬೇಕು’ ಎಂದು ಸೂಚಿಸಿದರು.

ಉಪ ವಿಭಾಗಾಧಿಕಾರಿ ಸಾಹಿತ್ಯ ಆಲದಕಟ್ಟಿ ಮಾತನಾಡಿ, ‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧ ಹಾಗೂ ಅಂಬುಲೇನ್ಸ್ ಇರಬೇಕು. ನಿತ್ಯ ತಾಲ್ಲೂಕಿನಾದ್ಯಂತ ಮಾಹಿತಿ ಒದಗಿಸಬೇಕು’ ಎಂದರು.

ತಹಶಿಲ್ದಾರ್‌ ಸಂಜೀವಕುಮಾರ ದಾಸರ ಮಾಹಿತಿ ನೀಡಿ, ‘ತಾಲ್ಲೂಕಿನಲ್ಲಿ ಮಳೆಯಿಂದ 68 ಮನೆಗಳು ಬಿದ್ದಿವೆ. ಭೋಸಗಾ ಗ್ರಾಮದಲ್ಲಿ ಮನೆ ಬಿದ್ದು ಮೃತರಾದ ಲಕ್ಷ್ಮಿಬಾಯಿ ಬಿರಾದಾರ ಅವರಿಗೆ ₹5 ಲಕ್ಷ ಪರಿಹಾರ ನೀಡಲಾಗಿದೆ. ಪ್ರವಾಹದ ಮುನ್ಸೂಚನೆಯಂತೆ 30 ಗ್ರಾಮಗಳನ್ನು ಗುರುತಿಸಲಾಗಿದ್ದು, ಎಲ್ಲ ರೀತಿಯ ಪ್ರವಾಹ ಪರಸ್ಥಿತಿ ಎದುರಿಸಲು ತಾಲ್ಲೂಕಾಡಳಿತ ಸಜ್ಜಾಗಿದೆ’ ಎಂದರು.

ಸಭೆಯಲ್ಲಿ ಎಸ್‌ಪಿ ಅಡ್ಡೂರು ಶ್ರೀನಿವಾಸಲು, ತಾ.ಪಂ ಇಒ ವೀರಣ್ಣ ಕೌಲಗಿ, ರೇವಣಸಿದ್ದ ತಾವರಖೇಡ, ಲಕ್ಷ್ಮೀಕಾಂತ ಬಿರಾದಾರ, ಎಸ್.ಎಚ್. ಗಡಗಿಮನಿ, ಯುವರಾಜ ಗಾಡಿ, ಚನ್ನಯ್ಯ ಹಿರೇಮಠ, ಕೆ.ಎಂ. ಕೋಟೆ, ಬಾಬುರಾವ ಜ್ಯೋತಿ, ಪ್ರವೀಣ ಹೇರೂರ, ಚೇತನ ದುಮಾಲೆ, ರಮೇಶ ಪಾಟೀಲ, ಸಿದ್ದಪ್ಪ ಹುದಲೂರ, ಮಂಜುನಾಥ, ಅನುಸುಯಾ, ಮಹಾಂತೇಶ ಸಾಲಿಮಠ, ಸುರೇಶ ರಾಠೋಡ ಇತರರಿದ್ದರು.

ಅಫಜಲಪುರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಫಾಜಿಯಾ ತರನ್ನುಮ್‌ ಮಾತನಾಡಿದರು

ಶೀಘ್ರ ಬೆಳೆಹಾನಿ ಸರ್ವೆ 

ಕೃಷಿ ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಶೀಘ್ರದಲ್ಲೇ ಹಾನಿಯಾದ ಬೆಳೆಗಳ ಸರ್ವೆ ಕಾರ್ಯ ನಡೆಸಿ ವಿಮಾ ಕಂಪನಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಸೂಚಿಸಿದರು. ರೈತರ ಜಮೀನುಗಳಿಗೆ ಕಾರ್‌ಗಳು ಹೋಗದಿದ್ದರೆ ಬೈಕ್‌ ಅಥವಾ ನಡೆದುಕೊಂಡು ಹೋಗಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಜೆಸ್ಕಾಂ ಮುಳುಗಡೆ ಹಂತದಲ್ಲಿರುವ ಗ್ರಾಮದಲ್ಲಿನ ವಿದ್ಯುತ್ ಕಡಿತ ಮಾಡಬೇಕು. ವಿದ್ಯುತ್ ತಂತಿ ಕೋಟಿಂಗ್  ಬದಲಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.