ADVERTISEMENT

ಅಫಜಲಪುರ: ಸಂಬಳಕ್ಕಾಗಿ ಚಾತಕ ಪ‍ಕ್ಷಿಯಂತೆ ಕಾಯುತ್ತಿರುವ ಸಿಪಾಯಿ

ಶಿವಾನಂದ ಹಸರಗುಂಡಗಿ
Published 21 ಜನವರಿ 2026, 7:09 IST
Last Updated 21 ಜನವರಿ 2026, 7:09 IST
   

ಅಫಜಲಪುರ: ತಾಲ್ಲೂಕಿನ ಬಳ್ಳೂರಗಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಿಪಾಯಿಯಾಗಿ ಕೆಲಸ ಮಾಡುತ್ತಿರುವ ಚಾಂದಸಾಬ್ ಶೇಕ್ ಅವರಿಗೆ ಮೂರು ವರ್ಷಗಳಿಂದ ಸಂಬಳ ಆಗಿಲ್ಲ!.

ಚಾಂದಸಾಬ್ ಶೇಕ್ ಅವರಿಗೆ ಕೆಲ ದಿನಗಳ ಹಿಂದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,‘ತೆರಿಗೆ ಸಂಗ್ರಹ ಮಾಡಿದರೆ ಸಂಬಳ ನೀಡಲಾಗುವುದು’ ಎಂದು ಹೇಳಿದ್ದರು. ಆಗ ಚಾಂದಸಾಬ್‌ ಅವರು, ಬಿಲ್ ಕಲೆಕ್ಟರ್ ಆಗಿ ₹7 ಲಕ್ಷ ತೆರಿಗೆ ಸಂಗ್ರಹ ಮಾಡಿದ್ದರು. ಆದರೂ ಈವರೆಗೆ ಅವರಿಗೆ ಸಂಬಳ ನೀಡಿಲ್ಲ.

ಸಂಬಳ ನೀಡುತ್ತೇನೆ ಎಂದು ಭರವಸೆ ನೀಡಿದ್ದ ಪಿಡಿಒ ವರ್ಗಾವಣೆಯಾಗಿ ಬೇರೆ ಪಂಚಾಯಿತಿಗೆ ಹೋಗಿದ್ದಾರೆ. ಹೊಸದಾಗಿ ಬಂದಿರುವ ಪಿಡಿಒ ಸಂತೋಷ ಭೂಸನೂರ ಅವರು,‘ಸಂಬಳ ನೀಡಲು ಪಂಚಾಯಿತಿಯಲ್ಲಿ ಯಾವುದೇ ಅನುದಾನ ಇಲ್ಲ’ ಎಂದು ಹೇಳುತ್ತಾರೆ ಎಂದು ಸಿಪಾಯಿ ಅಳಲು ತೋಡಿಕೊಂಡರು.

ADVERTISEMENT

‘ಈ ಹಿಂದೆ ಪಿಡಿಒ ಆಗಿ ಕಾರ್ಯನಿರ್ವಹಿಸಿದ್ದ ಹಿಟ್ಟನಹಳ್ಳಿ ಅವರು ಗ್ರಾಮ ಪಂಚಾಯಿತಿ ಕಡತಗಳನ್ನ ಹೊಸ ಪಿಡಿಒ ಅವರಿಗೆ ನೀಡದೆ ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ತಾ.ಪಂ ಇಒ ಆಗಲಿ ಅಥವಾ ಮೇಲಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು.

ಏಳು ತಿಂಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ಅನೇಕ ಸಿಬ್ಬಂದಿಗೆ ಸಂಬಳ ಆಗಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳನ್ನೂ ಮಾಡಿಲ್ಲ. ತೆರಿಗೆ ಹಣ ಎಲ್ಲಿ ಹೋಯಿತು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.

‘ನಾನು ಹೊಸದಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಹಿಂದಿನ ಪಿಡಿಒ ಅವರು ಏನು ಮಾಡಿದ್ದಾರೆ ಗೊತ್ತಿಲ್ಲ. ಜವಾನರಾಗಿ ಕಾರ್ಯನಿರ್ವಹಿಸುತ್ತಿರುವ ಚಾಂದಸಾಬ್ ಅವರಿಗೆ ವಾರದಲ್ಲಿ ನಾಲ್ಕು ತಿಂಗಳ ಸಂಬಳ ನೀಡಲಾಗುವುದು’ ಎಂದು ಪಿಡಿಒ ಸಂತೋಷ ಭೂಸನೂರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.