ADVERTISEMENT

ಇನ್ನೊಂದು ಮಳೆಗೆ ಕಾಯಿರಿ: ರೈತರಿಗೆ ಕೃಷಿ ಅಧಿಕಾರಿಗಳ ಸಲಹೆ

10 ದಿನ ಮುಂಚಿತವಾಗಿಯೇ ಬಂದ ಮುಂಗಾರು, ಬಿತ್ತನೆಗೆ ಮುಂದಾದ ರೈತರು

ಸಂತೋಷ ಈ.ಚಿನಗುಡಿ
Published 5 ಜೂನ್ 2021, 6:31 IST
Last Updated 5 ಜೂನ್ 2021, 6:31 IST
ರಿತೇಂದ್ರನಾಥ ಸೂಗೂರ
ರಿತೇಂದ್ರನಾಥ ಸೂಗೂರ   

ಕಲಬುರ್ಗಿ: ಈ ಬಾರಿ ಜಿಲ್ಲೆಗೆ 10 ದಿನ ಮುಂಚಿತವಾಗಿಯೇ ಮುಂಗಾರು ಮಳೆ ಕಾಲಿಟ್ಟಿದೆ. ಆದರೆ, ಬಿತ್ತನೆಗೆ ಭೂಮಿ ಹದವಾಗಬೇಕಾದರೆ ಇನ್ನೊಂದು ಮಳೆಗಾಗಿ ಕಾಯಬೇಕು. ರೈತರು ಅವಸರ ಮಾಡಬಾರದು ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕನಿಷ್ಠ 60 ಮಿ.ಮೀ.ದಿಂದ ಗರಿಷ್ಠ 80 ಮಿ.ಮೀ ಮಳೆ ಬಿದ್ದರೆ ಅದು ಮುಂಗಾರಿನ ಬಿತ್ತನೆಗೆ ಅನುಕೂಲವಾಗಲಿದೆ. ಕಳೆದ 48 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 30 ಮಿ.ಮೀ ಮಳೆ ಬಿದ್ದಿದೆ. ಇದು ಉತ್ತಮ ಮಳೆಯಾದರೂ ಬಿತ್ತನೆಗೆ ಹೊಲ ಪಕ್ವವಾಗಿರುವುದಿಲ್ಲ. ಮಣ್ಣಿನ ಮೇಲ್ಪದರು ಮಾತ್ರ ತೋಯ್ದಿರುತ್ತದೆ. ಆದ್ದರಿಂದ ಇನ್ನೊಂದು ಮಳೆ ಬೀಳುವವರೆಗೆ ರೈತರು ಕಾದು ಬಿತ್ತನೆಗೆ ಮುಂದಾಗಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗೂರ ಸಲಹೆ ನೀಡಿದ್ದಾರೆ.

ಸಾಮಾನ್ಯವಾಗಿ ಮುಂಗಾರು ಕರಾವಳಿ ಪ್ರವೇಶಿಸಿದ ಒಂದು ವಾರದ ನಂತರ ಅಂದರೆ; ಜೂನ್‌ 7ರ ನಂತರ ಜಿಲ್ಲೆಗೆ ಪ್ರವೇಶ ಮಾಡುತ್ತದೆ. ಹಾಗಾಗಿ, ನಮ್ಮ ರೈತರು ಜೂನ್‌ 15ರ ನಂತರ ಬಿತ್ತನೆ ಮಾಡುತ್ತಿದ್ದರು. ಆದರೆ, ಈ ಬಾರಿ ಮಾನ್ಸೂನ್‌ ಮುಂಚಿತವಾಗಿ ಬರುವ ಜತೆಗೆ, ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು ಆಶಾದಾಯಕವಾಗಿದೆ.

ಜೂನ್‌ 1ರಿಂದ 4ರವರೆಗೆ ವಾಡಿಕೆ ಮಳೆ ಪ್ರಮಾಣ 5.8 ಮಿ.ಮೀ. ಆದರೆ, ಈ ಬಾರಿ 19.4 ಮಿ.ಮೀ ಮಳೆ ಸುರಿದಿದೆ. ಬೇಸಿಗೆ ಅವಧಿಯಲ್ಲಿ ಅಂದರೆ; ಫೆಬ್ರುವರಿ 1ರಿಂದ ಮೇ 31ರವರೆಗೆ 67 ಮಿ.ಮೀ ವಾಡಿಕೆ ಮಳೆ ಬೀಳಬೇಕಿತ್ತು. ಆದರೆ, ಈ ಬಾರಿ ಅದರ ದುಪ್ಪಟ್ಟು ಅಂದರೆ; 106 ಮಿ.ಮೀ ಮಳೆಯಾಗಿದೆ. ಇದರಿಂದ ಈ ಬಾರಿಯ ಬೇಸಿಗೆ ಕೂಡ ಹೆಚ್ಚು ತ್ರಾಸದಾಯಕ ಎಣಿಸಲಿಲ್ಲ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ADVERTISEMENT

ಎಲ್ಲಿ, ಎಷ್ಟು ಮಳೆ: ಶುಕ್ರವಾರ ಬೆಳಿಗ್ಗೆ ಕೊನೆಗೊಂಡಂತೆ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 15.3 ಮಿ.ಮೀ ಮಳೆ ಸುರಿದಿದೆ.

ಯಡ್ರಾಮಿ 50.2 ಮಿ.ಮೀ, ಇಜೇರಿ 44.4 ಮಿ.ಮೀ, ಸೇಡಂ 13.6 ಮಿ.ಮೀ, ಕೋಡ್ಲಾ 30.2 ಮಿ.ಮೀ, ಜೇವರ್ಗಿ 6.8 ಮಿ.ಮೀ, ಅಂದೋಲಾ 12.6 ಮಿ.ಮೀ, ನೆಲೋಗಿ 6 ಮಿ.ಮೀ, ಜೇರಟಗಿ 9.6 ಮಿ.ಮೀ, ಅಫಜಲಪುರ 22, ಆಳಂದ 5 ಮಿ.ಮೀ, ಚಿಂಚೋಳಿ 9 ಮಿ.ಮೀ, ಕಲಬುರ್ಗಿ 13 ಮಿ.ಮೀ, ಜೇವರ್ಗಿ 20, ಕಾಳಗಿ 39 ಮಿ.ಮೀ ಮಳೆ ಬಿದ್ದಿದೆ. 48 ಗಂಟೆಗಳ ಅವಧಿಯಲ್ಲಿ ಚಿಂಚೋಳಿ ತಾಲ್ಲೂಕು ಕೋಡ್ಲಾದಲ್ಲಿ ಅತಿ ಹೆಚ್ಚು ಅಂದರೆ; 108 ಮಿ.ಮೀ ಮಳೆಯಾಗಿದೆ.

ಬಿತ್ತನೆಗೂ ಮುನ್ನ ಏನು ಮಾಡಬೇಕು?
‘ತೊಗರಿ, ಹೆಸರು, ಹುರುಳು, ಉದ್ದು ಸೇರಿದಂತೆ ಮುಂಗಾರಿನಲ್ಲಿ ಏನೇ ಬಿತ್ತನೆ ಮಾಡುವ ಮುನ್ನ ಬೀಜೋಪಚಾರ ಮಾಡುವುದು ಬಹಳ ಮುಖ್ಯ. ಇದರಿಂದ ಮುಂದಿನ ದಿನಗಳಲ್ಲಿ ಕೀಟನಾಶಕ ಅಥವಾ ರಸಗೊಬ್ಬರವನ್ನು ಪದೇಪದೇ ಬಳಸುವ ಅಗತ್ಯ ಬೀಳುವುದಿಲ್ಲ’ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ರಾಜು ತೆಗ್ಗಳ್ಳಿ ಅವರು ರೈತರಿಗೆ ಸಲಹೆ ನೀಡಿದ್ದಾರೆ.

‘ರೈಸೋಬಿಯಂ, ರಂಜಕ, ಟ್ರೈಕೋಡರ್ಮ ಈ ಮೂರನ್ನೂ ಒಂದ ಕೆ.ಜಿ.ಗೆ ತಲಾ 4 ಗ್ರಾಂನಷ್ಟು ಸೇರಿಸಿ ಬೀಜೋಪಚಾರ ಮಾಡುವುದು ಬಹಳ ಮುಖ್ಯ. ರೈಸೋಬಿಯಂ ಬೆಳೆಯಲ್ಲಿ ಶಕ್ತಿ ತುಂಬುತ್ತದೆ. ರಂಜಕ ಕರಗಿಸುವ ಸೂಕ್ಷ್ಮಾನು ಬಳಸಿದರೆ ಭೂಮಿಯಲ್ಲಿರುವ ರಂಜಕ ಅಂಶವನ್ನು ಬೆಳೆಗೆ ಒದಗಿಸುತ್ತದೆ. ಟ್ರೈಕೋಡರ್ಮ ಬಳಸಿದರೆ ನೆಟೆರೋಗ ಬರುವುದಿಲ್ಲ’ ಎನ್ನುವುದು ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.