ಆಳಂದ: ಪಟ್ಟಣದ ಸಮತಾ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಭಾನುವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಪುಣೆಯ ಸಾಧು ವಾಸ್ವಾನಿ ಮಿಷನ್ ಹಾಗೂ ಸಮತಾ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ವಿಕಲಚೇತನರ ಕೃತಕ ಕೈಕಾಲು ಜೋಡಣೆ ಶಿಬಿರದಲ್ಲಿ 64 ಜನರ ತಪಾಸಣೆ ಕೈಗೊಂಡು ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಶಿಬಿರವನ್ನು ಕೆಎಂಎಫ್ ಅಧ್ಯಕ್ಷ ಆರ್.ಕೆ ಪಾಟೀಲ ಉದ್ಘಾಟಿಸಿ ಮಾತನಾಡಿ, ‘ಮನುಷ್ಯನಿಗೆ ದೇಹದ ಅಂಗಾಂಗಳು ಕಳೆದುಕೊಂಡ ಮೇಲೆ ಮಾತ್ರ ಅವುಗಳ ಉಪಯುಕ್ತತೆ ಅರಿವು ಮೂಡುತ್ತದೆ. ಅದಕ್ಕೆ ನಾವು ನಮ್ಮ ಆರೋಗ್ಯದ ಪಾಲನೆ, ಸದೃಡತೆ ಬಗ್ಗೆ ಸದಾ ಮುನ್ನೆಚ್ಚೆರಿಕೆ ವಹಿಸಬೇಕು’ ತಿಳಿಸಿದರು.
ಶಾಸಕರ ನಿಧಿಯಿಂದ ₹60 ಲಕ್ಷ ಅನುದಾನವು ಅಂಗವಿಕಲರಿಗೆ ತ್ರಿಚಕ್ರ ವಿತರಣೆಗೆ ಮೀಸಲಿರಿಸಲಾಗಿದೆ. ಮುಂದಿನ ದಿನಗಳಲ್ಲಿ ಅರ್ಹ ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳು ಒದಗಿಸಲಾಗುವುದು’ ಎಂದರು.
ತಾಲ್ಲೂಕಿನ ವಿವಿಧ ಗ್ರಾಮದಿಂದ ನೂರಕ್ಕೂ ಹೆಚ್ಚು ಜನರು ವಿಕಲಚೇತನರು ಆಗಮಿಸಿದರು. ಅಂತಿಮವಾಗಿ 64 ಜನರಿಗೆ ಕೃತಕ ಕೈಕಾಲು ಜೋಡಣೆಯ ಚಿಕಿತ್ಸೆಗೆ ಅಂತಿಮಗೊಳಿಸಲಾಯಿತು.
‘ಮುಂಬರುವ 20 ದಿನಗಳಲ್ಲಿ ಹಂತಹಂತವಾಗಿ ಚಿಕಿತ್ಸೆ ಕೈಗೊಂಡು ಅಗತ್ಯ ಸಲಕರಣೆ ವಿತರಿಸಲಾಗುವುದು’ ಎಂದು ಸಂಯೋಜಕ ಬಾಬುರಾವ ಮಡ್ಡೆ ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಅಧ್ಯಕ್ಷ ಅರುಣಕುಮಾರ ಲೋಯಾ, ಪುಣೆಯ ಸಲೀಲ ಜೈನ್, ಮಿಲಿಂದ್ ಜಾಧವ, ರೆಡ್ ಕ್ರಾಸ್ ತಾಲ್ಲೂಕು ಅಧ್ಯಕ್ಷ ಮೋಹನ ಜಿಡ್ಡಿಮನಿ, ಪ್ರಾಚಾರ್ಯ ಮಂಜುನಾಥ ಹಕ್ಕಿ, ಕಲ್ಯಾಣಕುಮಾರ ಶೀಲವಂತ, ಗುಂಡೇರಾವ ಪದ್ಮಾಜಿ, ಮನೋಜ ತಳವಾರ, ಬಾಬುರಾವ ಮಡ್ಡೆ, ಪ್ರಭಾಕರ ಸಲಗರೆ, ಮಲ್ಲಿಕಾರ್ಜುನ ಕಟ್ಟಿಮನಿ, ಚನ್ನವೀರ, ಆಶಾ ಪಾಟೀಲ, ಹಣಮಂತ ಸನಗುಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.