
ಆಳಂದ: ಶಾಸಕ ಬಿ.ಆರ್.ಪಾಟೀಲ ಅವರು ಕರ್ನಾಟಕ ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷರಾಗಿರುವುದರಿಂದ ಸಹಜವಾಗಿ ಈ ಬಾರಿಯ ಬಜೆಟ್‌ನಲ್ಲಿ ಆಳಂದ ಕ್ಷೇತ್ರಕ್ಕೆ ಹೆಚ್ಚಿನ ಅಭಿವೃದ್ಧಿಯ ಅನುದಾನವು ಹರಿದು ಬರಲಿದೆ. ಈ ಭಾಗದ ಹಲವು ಬೇಡಿಕೆಗಳಿಗೆ ಶುಕ್ರದೆಸೆಯಾಗಲಿದೆ ಎನ್ನುವ ನಿರೀಕ್ಷೆಯು ಜನರಲ್ಲಿ ಮನೆಮಾಡಿದೆ.
ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿರುವ ಬಿ.ಆರ್.ಪಾಟೀಲ ಅವರು ಈ ಹಿಂದಿನ ಬಜೆಟ್‌ನಲ್ಲಿಯೂ ಕ್ಷೇತ್ರಕ್ಕೆ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡಿದರು. ಹೀಗಾಗಿ ರಾಜ್ಯದಲ್ಲಿಯೇ ಪ್ರಾಯೋಗಿಕವಾಗಿ ಶಿರಪುರ ಮಾದರಿ ಜಲಸಂಗ್ರಹ ಕಾರ್ಯವೂ ಆಳಂದ ತಾಲ್ಲೂಕಿನಲ್ಲಿ ಆರಂಭಿಸಲಾಗಿತ್ತು.
ಒಟ್ಟು ₹ 22.60 ಕೋಟಿ ಅನುದಾನದಲ್ಲಿ 56 ಕಿ.ಮೀ. ಉದ್ದದ ವಿವಿಧ ಗ್ರಾಮದಲ್ಲಿನ ಹರಿಯುವ ಹಳ್ಳಗಳನ್ನೇ ತೋಡಿ ಚೆಕ್ ಡ್ಯಾಂ ಮಾದರಿಯಲ್ಲಿ ಜಲಸಂಗ್ರಹ ಮಾಡಲಾಗಿದೆ. ಈ ಶಿರಪುರ ಮಾದರಿ ಜಲಸಂಗ್ರಹ ಕಾಮಗಾರಿಗೆ ಆಳಂದ ತಾಲ್ಲೂಕಿನಲ್ಲಿ ರೈತರಿಂದ ಬೇಡಿಕೆ ಹೆಚ್ಚಿದೆ. ಜತೆಗೆ ಶಾಸಕರಿಗೂ ಶಿರಪುರ ಮಾದರಿ ಜಲಸಂವರ್ಧನೆ ಮೇಲೆ ವಿಶೇಷ ಆಸಕ್ತಿ ಹೊಂದಿರುವ ಕಾರಣ ಮತ್ತೆ ಮಾರ್ಚ್ ಬಜೆಟ್‌ನಲ್ಲಿ ಶಿರಪುರ ಮಾದರಿ ಜಲಸಂಗ್ರಹ ಕಾಮಗಾರಿಗೆ ಮತ್ತೆ ಹೆಚ್ಚಿನ ಅನುದಾನ ದಕ್ಕುವ ನಿರೀಕ್ಷೆಯು ರೈತರಲ್ಲಿ ಜಾಸ್ತಿ ಇದೆ.
ಮುಖ್ಯವಾಗಿ ಮಟಕಿ, ತೀರ್ಥ, ನಿರಗುಡಿ, ಹೆಬಳಿ, ಚಿತಲಿ, ಎಲೆ ನಾವದಗಿ, ಸಾವಳೇಶ್ವರ, ರುದ್ರವಾಡಿ, ಜಮಗಾ, ತಡೋಳಾ ಗ್ರಾಮಗಳ ವ್ಯಾಪ್ತಿಯಲ್ಲಿ ಇನ್ನು ಐದು ನೂರು ಕಿ.ಮೀ. ಉದ್ದದಲ್ಲಿ ಶಿರಪುರ ಮಾದರಿ ಜಲಸಂಗ್ರಹಕ್ಕಾಗಿ ಸ್ಥಳ ಗುರುತಿಸಿ ಪರಿಶೀಲನೆ ಮಾಡಲಾಗಿದೆ. ಆದರೆ 20 ಟಿಎಂಸಿ ಅಡಿ ನೀರು ತುಂಬಿಸುವ ಶಾಸಕರ ಮಹತ್ವಾಕಾಂಕ್ಷೆಯ ಈ ಜಲಸಂಗ್ರಹ ಕಾರ್ಯಕ್ಕೆ ಬಜೆಟ್‌ನಲ್ಲಿ ಅನುದಾನ ಎಷ್ಟು ಲಭಿಸಲಿದೆ ಎಂಬುದು ಬಜೆಟ್ ಮಂಡನೆಯಾದ ಬಳಿಕವೇ ಗೊತ್ತಾಗಲಿದೆ.
ಅಮರ್ಜಾ ಅಣೆಕಟ್ಟೆ ಭರ್ತಿ: ಅಫಜಲಪುರದಲ್ಲಿ ಹರಿಯುವ ಭೀಮಾ ನದಿಯ ಸೊನ್ನ ಬ್ಯಾರೇಜ್‌ನಿಂದ ಹೆಚ್ಚುವರಿ ನೀರು ಆಳಂದದ 8 ಗ್ರಾಮದ ಕೆರೆಗಳು ಸೇರಿದಂತೆ ಅಮರ್ಜಾ ಅಣೆಕಟ್ಟೆಗೆ ನೀರು ತುಂಬುವ ಕಾಮಗಾರಿಗೆ ಈ ಹಿಂದೆ ಶಾಸಕರಿದ್ದ ಸಮಯದಲ್ಲಿ ಶಾಸಕ ಬಿ.ಆರ್.ಪಾಟೀಲ ವಿಶೇಷ ಕಾಳಜಿಯಿಂದ ಅನುದಾನ ತಂದಿದರು. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಮತ್ತೆ ಈಗ ಕಾಮಗಾರಿ ಆರಂಭಿಸಿ ಪೈಪ್ ಲೈನ್ ಹಾಕುವ ಕಾರ್ಯ ಕುಂಟುತ್ತಾ ಸಾಗಿದೆ. ಈ ಬಾರಿ ಬಜೆಟ್‌ನಲ್ಲಿ ಮುಂದುವರಿದು ಆಳಂದ ತಾಲ್ಲೂಕಿನ ನಿಂಬಾಳ, ಯಳಸಂಗಿ, ಕೆರೂರು, ಕವಲಗಾ, ಮಾಡಿಯಾಳ, ಮಾದನ ಹಿಪ್ಪರಗಿ, ಮದಗುಣಕಿ, ಝಳಕಿ, ದರ್ಗಾ ಶಿರೂರು ಗ್ರಾಮದ 12 ಕೆರೆಗಳು ಸಹ ನೀರು ತುಂಬುವ ಕಾಮಗಾರಿಯ ಸರ್ವೆ ಕಾರ್ಯ ಕೈಗೊಂಡು ನೀರಾವರಿ ನಿಗಮಕ್ಕೆ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಆಳಂದ ತಾಲ್ಲೂಕಿನ ಶ್ರದ್ಧಾಕೇಂದ್ರವಾಗಿರುವ ಜಿಡಗಾ ಮಠದಲ್ಲಿ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ಕೆರೆ ನಿರ್ಮಾಣಕ್ಕೆ ಜಮೀನು ನೀಡಲು ಮುಂದಾಗಿದ್ದು , ಈ ಮಠದ ವ್ಯಾಪ್ತಿಯಲ್ಲಿ ಕೆರೆ ನಿರ್ಮಾಣಕ್ಕೆ ಅಗತ್ಯ ಅನುದಾನ ಬೇಕಿದೆ. ಈ ಸಂಬಂಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಈ ಕೆರೆ ನಿರ್ಮಾಣದಿಂದ ಜಿಡಗಾ, ಜಮಗಾ, ಕವಲಗಾ, ಗುಳ್ಳೋಳ್ಳಿ, ರಾಜವಾಳ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದೆ. ಜಿಡಗಾ ಮಠವನ್ನು ಪ್ರವಾಸಿ ತಾಣವಾಗಿ ರೂಪುಗೊಳಿಸಲು ಈ ಕೆರೆ ಅಭಿವೃದ್ಧಿಗೆ ಶಾಸಕರು ಮುತುವರ್ಜಿ ವಹಿಸಿದ್ದಾರೆ. ಇದು ಸಹಜವಾಗಿ ಅನುದಾನ ನಿರೀಕ್ಷೆಯು ಬಜೆಟ್‌ನಲ್ಲಿ ಹೆಚ್ಚಿದೆ.
ವಾಗ್ದರಿ–ರಿಬ್ಬನಪಲ್ಲಿ ಚತುಷ್ಪಥ ರಸ್ತೆ ?
ಆಳಂದ–ಕಲಬುರಗಿ ಸಂಪರ್ಕ ಕಲ್ಪಿಸುವ ವಾಗ್ದರಿ-ರಿಬ್ಬನಪಲ್ಲಿ ರಾಜ್ಯ ಹೆದ್ದಾರಿಯ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಈ ಬಾರಿಯ ಬಜೆಟ್ ಹಸಿರು ನಿಶಾನೆ ನೀಡಲಿದೆ ಎನ್ನುವದು ಆಳಂದದ ಜನತೆ ನೋಟವು ಬಜೆಟ್ ಮೇಲೆ ನೆಟ್ಟಿದೆ. ಶಾಸಕ ಬಿ.ಆರ್.ಪಾಟೀಲ ಅವರು ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಡಿಪಿಆರ್ ಕೈಗೊಳ್ಳಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳ ಗಮನ ಸೆಳೆದು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಇಡಲಾಗಿದೆ. ಪುಣೆ ಸೋಲಾಪುರ. ಮುಂಬೈ ಲಾತೂರು ಮಾರ್ಗವಾಗಿ ಉತ್ತರ ಭಾರತಕ್ಕೆ ಸಂಪರ್ಕ ಕಲ್ಪಿಸುವ ವಾಗ್ದರಿ -ರಿಬ್ಬನ್ ಪಲ್ಲಿ ರಸ್ತೆ ಕಾಮಗಾರಿಯಿಂದ ಗಡಿರಾಜ್ಯಗಳ ನಡುವೆ ವ್ಯಾಪಾರ-ವಹೀವಾಟು ಹೆಚ್ಚಲಿದೆ. ಈ ಹಿನ್ನಲೆಯಲ್ಲಿ ಚತುಷ್ಪಥ ರಸ್ತೆಗೆ ಮಾರ್ಚ್ ಕಾಯಕಲ್ಪ ನೀಡುವ ಭರವಸೆಗೆ ಜನರು ಬಜೆಟ್‌ಗಾಗಿ ಕಾಯುವಿಕೆ ಹೆಚ್ಚಿದೆ. ಆಳಂದದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕೇಂದ್ರ ತೆರೆಯಲಾಗಿದೆ. ಈಗಾಗಲೇ ಗಡಿಭಾಗದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಉತ್ತಮ ಶೈಕ್ಷಣಿಕ ವ್ಯವಸ್ಥೆ ಸಂಘಟಿಸಲು ಸ್ವಂತ ಕಟ್ಟಡದ ಅವಶ್ಯಕತೆ ಇದೆ. ಅದಕ್ಕೆ ಈ ಬಾರಿ ಬಜೆಟ್‌ನಲ್ಲಿ ಸ್ವಂತ ಕಟ್ಟಡಕ್ಕೆ ಅಗತ್ಯವಾದ ಅನುದಾನವು ಸರ್ಕಾರ ಬಜೆಟ್‌ನಲ್ಲಿ ಒದುಗಿಸಬೇಕು. ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸಹ ಆಳಂದ ತಾಲ್ಲೂಕಿನಲ್ಲಿ ತೆರೆಯಬೇಕು. ಮೋಘಾ ಚಿಚಕೋಟೆ ವಿದ್ಯಾರ್ಥಿನಿ ಆಳಂದ
ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ಶಿಕ್ಷಣ ಆರೋಗ್ಯ ಕೃಷಿ ಪರಿಸರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಜೆಟ್‌ನಲ್ಲಿ ಒದಗಲಿದೆ. ಹಣಕಾಸಿನ ಲಭ್ಯತೆ ಆಧಾರದಲ್ಲಿ ಈ ಬಾರಿ ಬಜೆಟ್ ನಲ್ಲಿ ಆಳಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ನಿರೀಕ್ಷೆ ಇದೆ. ಶಾಶ್ವತ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಬೇಡಿಕೆಯು ಇಡಲಾಗಿದೆ.ಬಿ.ಆರ್.ಪಾಟೀಲ ಶಾಸಕ
ಶಿರಪುರ ಮಾದರಿ ಜಲಸಂಗ್ರಹ ಕಾರ್ಯವೂ ರೈತರಿಗೆ ಉಪಯುಕ್ತವಾಗಿದ್ದು ಈ ಬಾರಿ ಬಜೆಟ್‌ನಲ್ಲಿ ಶಾಸಕರ ಬೇಡಿಕೆಯಂತೆ 500 ಕಿ.ಮೀ. ಉದ್ದದ ಶಿರಪುರ ಮಾದರಿ ಕಾಮಗಾರಿಯಾದರೆ ಆಳಂದ ತಾಲ್ಲೂಕಿನಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿದು ಸಮೃದ್ಧ ಮತ್ತು ಸಂಪೂರ್ಣ ನೀರಾವರಿ ಆಧಾರಿತ ತಾಲ್ಲೂಕಾಗಿ ರೂಪಗೊಳ್ಳಲಿದೆ. ಶೇ 70ರಷ್ಟು ರೈತರಿಗೆ ಅನುಕೂಲವಾಗಲಿದೆ.ಆನಂದ ದೇಶಮುಖ ನಿರಗುಡಿ ಪಿಕೆಪಿಎಸ್ ಅಧ್ಯಕ್ಷ
ಆಳಂದದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕೇಂದ್ರ ತೆರೆಯಲಾಗಿದೆ. ಈಗಾಗಲೇ ಗಡಿಭಾಗದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಉತ್ತಮ ಶೈಕ್ಷಣಿಕ ವ್ಯವಸ್ಥೆ ಸಂಘಟಿಸಲು ಸ್ವಂತ ಕಟ್ಟಡದ ಅವಶ್ಯಕತೆ ಇದೆ. ಅದಕ್ಕೆ ಈ ಬಾರಿ ಬಜೆಟ್‌ನಲ್ಲಿ ಸ್ವಂತ ಕಟ್ಟಡಕ್ಕೆ ಅಗತ್ಯವಾದ ಅನುದಾನವು ಸರ್ಕಾರ ಬಜೆಟ್‌ನಲ್ಲಿ ಒದುಗಿಸಬೇಕು. ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸಹ ಆಳಂದ ತಾಲ್ಲೂಕಿನಲ್ಲಿ ತೆರೆಯಬೇಕು.ಮೋಘಾ ಚಿಚಕೋಟೆ ವಿದ್ಯಾರ್ಥಿನಿ ಆಳಂದ
ಆಳಂದ ತಾಲ್ಲೂಕಿನಿಂದ ಹಾದುಹೋಗುವ ಔರಾದ್–ಸದಾಶಿವಗಡ ರಾಜ್ಯ ಹೆದ್ದಾರಿಯು ಚತುಷ್ಪಥ ರಸ್ತೆಯಾಗಿ ಪರಿವರ್ತಿಸಬೇಕು. ಬೀದರ್‌ನ ಔರಾದ ಭಾಲ್ಕಿ ಬಸವ ಕಲ್ಯಾಣ ಆಳಂದ ಅಫಜಲಪುರ ಸಿಂದಗಿ ಇಂಡಿ ಮಾರ್ಗವಾಗಿ ಸದಾಶಿವಗಡ ಸಂಪರ್ಕಿಸುವ ಈ ರಾಜ್ಯ ಹೆದ್ದಾರಿ ಅಭಿವೃದ್ಧಿಯಿಂದ ಗಡಿಯಲ್ಲಿ ಗ್ರಾಮಗಳ ವ್ಯಾಪಾರ-ವಹಿವಾಟು ಹೆಚ್ಚಲಿದೆ.ಭೀಮಾಶಂಕರ ಮಾಡಿಯಾಳ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.