ADVERTISEMENT

ಮಹಾಶಿವರಾತ್ರಿ ವಿಶೇಷ ಪೂಜೆಗೆ 14 ಜನರಿಗೆ ಅನುಮತಿ: ಆಳಂದದಲ್ಲಿ ಪೊಲೀಸ್ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 4:13 IST
Last Updated 15 ಫೆಬ್ರುವರಿ 2026, 4:13 IST
ಆಳಂದ ಪಟ್ಟಣದ ಲಾಡ್ಲೆ ಮಶಾಕ್‌ ದರ್ಗಾ ಸುತ್ತ ಕೈಗೊಂಡಿರುವ ಪೊಲೀಸ್‌ ಬಂದೋಬಸ್ತ್‌
ಆಳಂದ ಪಟ್ಟಣದ ಲಾಡ್ಲೆ ಮಶಾಕ್‌ ದರ್ಗಾ ಸುತ್ತ ಕೈಗೊಂಡಿರುವ ಪೊಲೀಸ್‌ ಬಂದೋಬಸ್ತ್‌   

ಆಳಂದ: ಪಟ್ಟಣದ ಹಜರತ್‌ ಲಾಡ್ಲೆ ಮಶಾಕ್‌ ದರ್ಗಾ ಆವರಣದಲ್ಲಿನ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾಶಿವರಾತ್ರಿ ದಿನ ವಿಶೇಷ ಪೂಜೆ ಸಲ್ಲಿಸಲು ಈಗಾಗಲೇ ಕೆಲ ಸಂಘಟನೆಗಳ ಪ್ರಮುಖರು ಕೋರ್ಟ್‌ ಮೊರೆ ಹೋಗಿ ಅನುಮತಿ ತಂದ ಪರಿಣಾಮ ಪಟ್ಟಣದಲ್ಲಿ ಪೊಲೀಸ್‌ ಕಟ್ಟೆಚ್ಚರ ವಹಿಸಲಾಗಿದೆ.

ಕಲಬುರಗಿ ಹೈಕೋರ್ಟ್‌ ಪೀಠವು 14 ಜನರಿಗೆ ವಿಶೇಷ ಪೂಜೆಗೆ ಅವಕಾಶ ನೀಡಿದೆ. ಫೆ.15ರಂದು ಭಾನುವಾರ ಮಧ್ಯಾಹ್ನ 2ರಿಂದ ಸಂಜೆ 6 ರವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಆಳಂದ ಸಂಪರ್ಕಿಸುವ ಮುಖ್ಯರಸ್ತೆ, ಬಸ್‌ ನಿಲ್ದಾಣ, ಚೆಕ್‌ಪೋಸ್ಟ್‌, ಶ್ರೀರಾಮ ಮಾರುಕಟ್ಟೆ, ದರ್ಗಾ ಚೌಕ್‌, ಪಟ್ಟಣದ ವಿವಿಧ ಪ್ರಾರ್ಥನಾ ಮಂದಿರ ಸೇರಿದಂತೆ ಲಾಡ್ಲೆ ಮಶಾಕ್‌ ದರ್ಗಾ ಸುತ್ತಲೂ ಖಾಕಿ ಪಡೆಯ ಸರ್ಪಗಾವಲು ಕಾಣುತ್ತಿದೆ. ಬೀದರ್‌, ರಾಯಚೂರು, ಯಾದಗಿರಿ, ವಿಜಯಪುರ, ಕೊಪ್ಪಳ, ಬಳ್ಳಾರಿಯಿಂದ ಬಂದೋಬಸ್ತ್‌ಗಾಗಿ ಪೊಲೀಸರನ್ನು ಕರೆಸಲಾಗಿದೆ.

ADVERTISEMENT

ಈಶಾನ್ಯ ವಲಯ ಐಜಿಪಿ ಡಿ.ಶರಣಬಸಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಬಂದೋಬಸ್ತ್‌ ಬಗ್ಗೆ ನಿಗಾವಹಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಕೋರ್ಟ್‌ ಆದೇಶದನ್ವಯ 14 ಜನ ಪೂಜೆ ಸಲ್ಲಿಸಲು ಅನುಮತಿ ದೊರೆತಿದ್ದು ಪಟ್ಟಣದಲ್ಲಿ ಶಾಂತಿ ಸೌಹಾರ್ದ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ
ಅಣ್ಣಾರಾವ ಪಾಟೀಲ ತಹಶೀಲ್ದಾರ್‌

ಬಿಗಿ ಬಂದೋಬಸ್ತ್‌: ಎಸ್‌ಪಿ

‘ಆಳಂದ ಪಟ್ಟಣದಲ್ಲಿ ಪೊಲೀಸ್‌ ಬಿಗಿಬಂದೋಬಸ್ತ್‌ಗಾಗಿ 900ಕ್ಕಿಂತ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆಎಸ್‌ಆರ್‌ಪಿ ತುಕಡಿಗಳು ಸಿಬ್ಬಂದಿಯೊಂದಿಗೆ ಡಿಎಆರ್‌ ವಾಹನಗಳು ಸುಮಾರು 40 ಸಿಸಿ ಟಿವಿ ಕ್ಯಾಮೆರಾಗಳು 4 ಡ್ರೋನ್‌ಗಳನ್ನು ಬಳಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.