ADVERTISEMENT

ವಾಗ್ದರಗಿ ರಾಚೋಟೇಶ್ವರ ರಥೋತ್ಸವ

ಸಾಮೂಹಿಕವಾಗಿ ಅಗ್ನಿ ಹಾಯ್ದ ಭಕ್ತರು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 7:59 IST
Last Updated 24 ಅಕ್ಟೋಬರ್ 2025, 7:59 IST
ಆಳಂದ ತಾಲ್ಲೂಕಿನ ರಾಚಣ್ಣ ವಾಗ್ದರಗಿ ಗ್ರಾಮದ ರಾಚೋಟೇಶ್ವರ ದೇವರ ಜಾತ್ರೆಯಲ್ಲಿ ಭಕ್ತರು ಸಾಮೂಹಿಕವಾಗಿ ಅಗ್ನಿ ಹಾಯ್ದು ಹರಕೆ ತೀರಿಸಿದರು
ಆಳಂದ ತಾಲ್ಲೂಕಿನ ರಾಚಣ್ಣ ವಾಗ್ದರಗಿ ಗ್ರಾಮದ ರಾಚೋಟೇಶ್ವರ ದೇವರ ಜಾತ್ರೆಯಲ್ಲಿ ಭಕ್ತರು ಸಾಮೂಹಿಕವಾಗಿ ಅಗ್ನಿ ಹಾಯ್ದು ಹರಕೆ ತೀರಿಸಿದರು    

ಆಳಂದ: ತಾಲ್ಲೂಕಿನ ರಾಚಣ್ಣ ವಾಗ್ದರಗಿ ಗ್ರಾಮದ ರಾಚೋಟೇಶ್ವರ ದೇವರ ಮಹಾ ರಥೋತ್ಸವ ಗುರುವಾರ ಸಂಭ್ರಮದೊಂದಿಗೆ ಜರುಗಿತು. ಕಲಬುರಗಿ, ಬೀದರ್‌, ಸೋಲಾಪುರ, ರಾಯಚೂರು ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಬೆಣ್ಣೆತೊರಾ ನದಿ ಪಕ್ಕದಲ್ಲಿರುವ ಎತ್ತರ ಗುಡ್ಡದಲ್ಲಿ ದಿನವಿಡೀ ಭಕ್ತರು ಸಾಗರದಂತೆ ಹರಿದು ಬಂದರು. ಹಾರಕೂಡ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರು ಹಾಗೂ ಮುತ್ತ್ಯಾನ ಬಬಲಾದನ ಗುರುಪಾದಲಿಂದ ಸ್ವಾಮೀಜಿ ನೇತೃತ್ವದಲ್ಲಿ ರಾಚೋಟೇಶ್ವರ ದೇವರ ರಥೋತ್ಸವಕ್ಕೆ ಗೋಧೂಳಿ ಸಮಯದಲ್ಲಿ ಪೂಜೆ ಸಲ್ಲಿಸಿದರು. ಕಿಕ್ಕಿರಿದು ಸೇರಿದ ಭಕ್ತರು ರಾಚೋಟೇಶ್ವರ ಮಹಾರಾಜ ಕೀ ಜೈ ಘೋಷಣೆಗಳೊಂದಿಗೆ ದೇವಸ್ಥಾನದ ವಿಶಾಲ ಪ್ರಾಂಗಣದಲ್ಲಿ ರಥವನ್ನು ಉತ್ಸಾಹದಿಂದ ಎಳೆದರು. ಪುಷ್ಪಾಲಂಕಾರದಿಂದ ಕಂಗೊಳಿಸುವ ರಥದ ಮೇಲೆ ನೆರೆದ ಭಕ್ತರು ಬಾಳೆಹಣ್ಣು, ಉತ್ತತಿ, ಕೊಬ್ಬರಿ ಮತ್ತಿತರ ಫಲಪುಷ್ಪ ಸಮರ್ಪಿಸಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮೂವತ್ತಕ್ಕೂ ಹೆಚ್ಚು ಜನ ಪುರವಂತರ ಒಡುಪು, ಕುಣಿತ ರೋಮಾಂಚನಕಾರಿಯಾಗಿ ಗಮನ ಸೆಳೆಯಿತು. ವಿವಿಧ ಉತ್ಸವಗಳು ಸಡಗರದಿಂದ ನೆರವೇರಿದವು. ಭಕ್ತರ ಹರ್ಷೋದ್ಘಾರಕ್ಕೆ ತುಂತುರು ಮಳೆ ಹನಿಯ ಆಗಮನವು ಭಕ್ತರ ಸಂಭ್ರಮ ಹೆಚ್ಚಿಸಿತು.

ಬೆಳಿಗ್ಗೆ ಗ್ರಾಮದಿಂದ ನಂದಿಕೋಲ ಮೆರವಣಿಗೆ, ಪಲ್ಲಕ್ಕಿ ಉತ್ಸವವನ್ನು ವಿವಿಧ ಭಾಜಾ ಭಜಂತ್ರಿ ಮೂಲಕ ಕರೆ ತೆರಲಾಯಿತು. ನಂತರ ಮಧ್ಯಾಹ್ನ ದೇವಸ್ಥಾನದ ಮುಂಭಾಗದಲ್ಲಿನ ಅಗ್ನಿಕುಂಡದಲ್ಲಿ ಹಾರಕೂಡ ಚನ್ನವೀರ ಸ್ವಾಮೀಜಿ ಮತ್ತು ಬಬಲಾದನ ಗುರುಪಾದಲಿಂಗ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಸಾಮೂಹಿಕ ಅಗ್ನಿ ಹಾಯುವ ಆಚರಣೆಗೆ ಚಾಲನೆ ನೀಡಿದರು. ನಂತರ ಸಾವಿರಾರು ಭಕ್ತರು ಸರದಿಯಲ್ಲಿ ಸಂಜೆವರೆಗೂ ಅಗ್ನಿ ಹಾಯ್ದು ತಮ್ಮ ಹರಕೆ ತೀರಿಸಿದರು.

ADVERTISEMENT

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಬಸವಕಲ್ಯಾಣ ಶಾಸಕ ಶರಣು ಸಲಗರ ಸೇರಿದಂತೆ ಸುತ್ತಲಿನ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ಸಿಪಿಐ ಪ್ರಕಾಶ ಯಾತನೂರು ನೇತೃತ್ವದಲ್ಲಿ ಆಳಂದ, ನರೋಣಾ, ನಿಂಬರ್ಗಾ ಪೊಲೀಸ್‌ ಠಾಣೆಯ ಪೊಲೀಸರು ಬಂದೋಬಸ್ತ್‌ ಕೈಗೊಂಡಿದ್ದರು.

ಆಳಂದ ತಾಲ್ಲೂಕಿನ ರಾಚಣ್ಣ ವಾಗ್ದರಗಿ ಗ್ರಾಮದ ರಾಚೋಟೇಶ್ವರ ದೇವರ ಜಾತ್ರೆಯಲ್ಲಿ ಭಕ್ತರು ಸಾಮೂಹಿಕವಾಗಿ ಅಗ್ನಿ ಹಾಯ್ದು ಹರಕೆ ತೀರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.