ADVERTISEMENT

ಹೊಸ ವರ್ಷದ ಸಂಭ್ರಮ | ಕಲಬುರಗಿ: ₹22 ಕೋಟಿ ಮದ್ಯ ಹೀರಿದ ಮದಿರೆ ಪ್ರಿಯರು

ಡಿ.31ರಂದು ಕಲಬುರಗಿ ವಿಭಾಗದಲ್ಲಿ ಭರ್ಜರಿ ಮದ್ಯ, ಬಿಯರ್‌ ಮಾರಾಟ

ಬಸೀರ ಅಹ್ಮದ್ ನಗಾರಿ
Published 3 ಜನವರಿ 2026, 6:27 IST
Last Updated 3 ಜನವರಿ 2026, 6:27 IST
ಬಿಯರ್‌
ಬಿಯರ್‌   

ಕಲಬುರಗಿ: ಹೊಸ ವರುಷ ಸ್ವಾಗತಿಸುವ ಸಂಭ್ರಮದಲ್ಲಿ ಕಲಬುರಗಿ ವಿಭಾಗದ ‘ಮದಿರೆ’ ಪ್ರಿಯರು ₹22.22 ಕೋಟಿಗೂ ಅಧಿಕ ಮೊತ್ತದ ಮದ್ಯ ಹಾಗೂ ಬಿಯರ್‌ ಹೀರಿದ್ದಾರೆ! ವಿವಿಧ ಬಗೆಯ ಮದ್ಯವು ಮದ್ಯ ಪ್ರಿಯರ ‘ಹ್ಯಾಪಿ ನ್ಯೂ ಇಯರ್‌’ ಸಡಗರ ಹೆಚ್ಚಿಸುವ ಜೊತೆಗೆ ಅಬಕಾರಿ ಇಲಾಖೆಯ ಆದಾಯವನ್ನೂ ಹಿಗ್ಗಿಸಿದೆ.

ಕಲಬುರಗಿ, ಬೀದರ್‌, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಗಳ ವ್ಯಾಪ್ತಿ ಹೊಂದಿರುವ ಕಲಬುರಗಿ ವಿಭಾಗದಲ್ಲಿ ಡಿಸೆಂಬರ್‌ 31ರಂದು ಒಟ್ಟು ₹18.25 ಕೋಟಿ ಮೊತ್ತದ ಸ್ವದೇಶಿ ಮದ್ಯ ಹಾಗೂ ₹3.97 ಕೋಟಿ ಮೊತ್ತದ ಬಿಯರ್‌ ಬಿಕರಿಯಾಗಿದೆ.

ಏಳು ಅಬಕಾರಿ ವಲಯಗಳನ್ನು ಹೊಂದಿರುವ ಕಲಬುರಗಿ ಜಿಲ್ಲೆಯಲ್ಲಿ ಡಿ.31ರಂದು ₹5.71 ಕೋಟಿ ಮೊತ್ತದ 10,216 ಪೆಟ್ಟಿಗೆ ಸ್ವದೇಶಿ ಮದ್ಯ ಹಾಗೂ ₹1.59 ಕೋಟಿ ಮೌಲ್ಯದ 7,836 ಪೆಟ್ಟಿಗೆ ಬಿಯರ್‌ ಮಾರಾಟವಾಗಿದೆ.

ADVERTISEMENT

ನಾಲ್ಕು ಅಬಕಾರಿ ವಲಯಗಳನ್ನು ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ ಜನರು ₹5.14 ಕೋಟಿ ಮೌಲ್ಯದ 9,172 ಪೆಟ್ಟಿಗೆ ದೇಶಿ ಮದ್ಯ ಹಾಗೂ ₹1.01 ಕೋಟಿ ಮೊತ್ತದ ಬಿಯರ್‌ ‘ಸುರಪಾನ’ಗೈದಿದ್ದಾರೆ.

ಐದು ಅಬಕಾರಿ ವಲಯಗಳನ್ನು ಹೊಂದಿರುವ ಕೋಟೆ ಜಿಲ್ಲೆ ಬೀದರ್‌ನಲ್ಲಿ ಡಿ.31ರಂದು ₹5.11 ಕೋಟಿ ಮೊತ್ತದ 9,121 ಪೆಟ್ಟಿಗೆ ಮದ್ಯ ಹಾಗೂ ₹76 ಲಕ್ಷ ಮೌಲ್ಯದ 3,655 ಪೆಟ್ಟಿಗೆ ಬಿಯರ್‌ ಬಿಕರಿಯಾಗಿದೆ.

ಮೂರು ವಲಯಗಳನ್ನು ಹೊಂದಿರುವ ಗಿರಿನಾಡು ಯಾದಗಿರಿ ಜಿಲ್ಲೆಯ ಜನರು ₹2.29 ಕೋಟಿ ಮೊತ್ತದ 3,971 ಪೆಟ್ಟಿಗೆ ಸ್ವದೇಶಿ ಮದ್ಯ ಹಾಗೂ ₹61 ಲಕ್ಷ ಮೌಲ್ಯದ 2,955 ಪೆಟ್ಟಿಗೆ ಬಿಯರ್‌ ಹೀರಿ ಹೊಸ ವರ್ಷವನ್ನು ಆಚರಿಸಿದ್ದಾರೆ.

ವರ್ಷದಿಂದ ವರ್ಷಕ್ಕೆ ಇಳಿಕೆ

ಕಲಬುರಗಿ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ವೇಳೆ ‘ಮದ್ಯ’ ಮಾರಾಟ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಅಬಕಾರಿ ಇಲಾಖೆ ನೀಡಿದ ಅಂಕಿ–ಅಂಶಗಳು ಇದನ್ನು ನಿರೂಪಿಸುತ್ತಿದೆ. 2025ರ ಡಿ.31ರಂದು 10216 ಪೆಟ್ಟಿಗೆ ದೇಶಿವಾಗಿ ತಯಾರಿಸಿದ ಮದ್ಯ ಹಾಗೂ 7836 ಪೆಟ್ಟಿಗೆ ಬಿಯರ್‌ ಸೇರಿ ಒಟ್ಟು 18052 ಪೆಟ್ಟಿಗೆ  ‘ಮದಿರೆ’ ಮಾರಾಟವಾಗಿದೆ. ಇದರ ಒಟ್ಟು ಮೌಲ್ಯ ₹7.30 ಕೋಟಿ. 2024ರ ಡಿ.31ರಂದು 17264 ಪೆಟ್ಟಿಗೆ ಸ್ವದೇಶಿದಲ್ಲಿ ತಯಾರಿಸಿದ ಮದ್ಯ ಹಾಗೂ 9989 ಪೆಟ್ಟಿಗೆ ಬಿಯರ್ ಸೇರಿದಂತೆ ಒಟ್ಟು 27253 ಪೆಟ್ಟಿಗೆ ಮದ್ಯ ಮಾರಾಟವಾಗಿತ್ತು. ಅದರ ಒಟ್ಟು ಮೊತ್ತ ₹11.11 ಕೋಟಿಗಳಷ್ಟಾಗಿತ್ತು. ‘ಮದ್ಯ ಮಾರಾಟದ ಏರಿಳಿತವು ಹಬ್ಬಗಳೊಂದಿಗೆ ಜನರ ಬಳಿಯ ಹಣದ ಚಲಾವಣೆಯನ್ನೂ ಅವಲಂಬಿಸಿದೆ’ ಎಂಬುದು ಅಬಕಾರಿ ಇಲಾಖೆಯ ಅಧಿಕಾರಿಗಳ ಅಂಬೋಣ.

ವಿಶೇಷ ಸಂದರ್ಭಗಳಲ್ಲಿ ಮದ್ಯ ಮಾರಾಟ ಹೆಚ್ಚುವುದು ಸಹಜ. ನಿತ್ಯದ ಸರಾಸರಿ ಮಾರಾಟಕ್ಕೆ ಹೋಲಿಸಿದರೆ ವರ್ಷಾಂತ್ಯಕ್ಕೆ ತುಸು ಹೆಚ್ಚಿದೆ..
–ಪಿ.ಸಂಗನಗೌಡ, ಅಬಕಾರಿ ಉಪ ಆಯುಕ್ತ ಕಲಬುರಗಿ
ಕಳೆದ ಕೆಲವು ವರ್ಷಗಳಿಂದ ತಿಂಗಳ ಸರಾಸರಿಗೆ ಹೋಲಿಸಿದರೆ ಡಿ.31ರಂದು ಮದ್ಯ ಮಾರಾಟ ದುಪ್ಪಟ್ಟಾಗುತ್ತಿದೆ. ಇಲಾಖೆಗೆ ಉತ್ತಮ ಆದಾಯವೂ ಸಿಗುತ್ತಿದೆ
–ಹನಮಂತರಾಯ ವಜ್ರಮಟ್ಟಿ, ಅಬಕಾರಿ ಅಧೀಕ್ಷಕ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.