ADVERTISEMENT

ಶಹಾಬಾದ್ | ಅಂಬಿಗರ ಚೌಡಯ್ಯ ಪ್ರತಿಮೆ ಭಗ್ನ: ಕೋಲಿ ಸಮಾಜದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 11:29 IST
Last Updated 10 ಅಕ್ಟೋಬರ್ 2025, 11:29 IST
<div class="paragraphs"><p>ಕಲಬುರಗಿ ಜಿಲ್ಲೆಯ ಶಹಾಬಾದ್‌ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆ ಭಗ್ನಗೊಳಿಸಿರುವುದು</p></div>

ಕಲಬುರಗಿ ಜಿಲ್ಲೆಯ ಶಹಾಬಾದ್‌ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆ ಭಗ್ನಗೊಳಿಸಿರುವುದು

   

ಶಹಾಬಾದ್ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿರುವುದು ಶುಕ್ರವಾರ ಬೆಳಕಿಗೆ ಬಂದಿದೆ.

ಮಾರ್ಬಲ್‌ನಲ್ಲಿ ಕೆತ್ತಿದ ಮೂರ್ತಿ ಇದ್ದಾಗಿದ್ದು, ಎಡಗೈ ತುಂಡರಿಸಿದ್ದು, ಬಲಗೈ ಬೆರಳು ಮುರಿಯಲಾಗಿದೆ. ಜೊತೆಗೆ ಮುಖಕ್ಕೆ ಸಗಣಿ ಎರೆಚಲಾಗಿದೆ.

ADVERTISEMENT

ಈ ಕೃತ್ಯ ಖಂಡಿಸಿ ಕೋಲಿ ಸಮಾಜದ ಮುಖಂಡರು ಭಂಕೂರ ಕ್ರಾಸ್ ಬಳಿ ಶುಕ್ರವಾರ ದಿಢೀರ್‌ ಪ್ರತಿಭಟನೆ ನಡೆಸಿದರು. ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

‘ಶರಣ ಚೌಡಯ್ಯ ಪ್ರತಿಮೆ ಭಗ್ನಗೊಳಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಜೊತೆಗೆ ಕೂಡಲೇ ಹೊಸ ಮೂರ್ತಿ ಪ್ರತಿಷ್ಠಾಪಿಸಬೇಕು’ ಎಂದು ಆಗ್ರಹಿಸಿದರು.

ಕೋಲಿ ಸಮಾಜದ ಜಿಲ್ಲಾ ಮುಖಂಡರಾದ ಶರಣಪ್ಪ ತಳವಾರ, ಅವಣ್ಣ ಮ್ಯಾಕೇರಿ, ಬಸವರಾಜ ಸಿಪ್ಪನಗೌಡ, ಬಸವರಾಜ ಬೂದಿಹಾಳ, ನಿಂಗಣ್ಣ ಹುಳುಗೋಳ್ಕರ್, ಶಿವಕುಮಾರ್ ತಳವಾರ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು. ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ಕುರಿತು ಶಹಾಬಾದ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಾನೂನು ಪ್ರಕಾರ ಶಿಕ್ಷೆ’

‘ಚಿತ್ತಾಪುರ ಮತಕ್ಷೇತ್ರದ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವುದು ಹೇಯ ಕೃತ್ಯ. ಈ ಘಟನೆ ಖಂಡನೀಯ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಕಾನೂನು ಪ‍್ರಕಾರ ಕಠಿಣ ಶಿಕ್ಷೆಯಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಚಿತ್ತಾಪುರ ಮತಕ್ಷೇತ್ರದ ಶಾಸಕ ಪ್ರಿಯಾಂಕ್‌ ಖರ್ಗೆ ‘ಎಕ್ಸ್’ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಘಟನೆ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿರುವೆ. ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ ಬಂಧಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿ ವಚನ ಕ್ರಾಂತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ ಬಸವಣ್ಣನವರ ಅನುಯಾಯಿ. ಅವರ ವಚನಗಳು ನಮ್ಮಲ್ಲಿ ವಿಚಾರವಂತಿಕೆ ಮೂಡಿಸುತ್ತವೆ. ಆದರೆ ವಿಕೃತ ಮನಸ್ಥಿತಿಯ ಕೆಲವರು ಮಹಾನ್ ವಚನಕಾರರ ಪ್ರತಿಮೆ ವಿರೂಪಗೊಳಿಸಿರುವುದು ನಮ್ಮ ಭವ್ಯ ಪರಂಪರೆಗೆ ಮಾಡಿರುವ ಅಪಮಾನ. ಇದನ್ನು ಸರ್ಕಾರ ಸಹಿಸುವುದಿಲ್ಲ’ ಎಂದಿದ್ದಾರೆ.

ಎಂಎಲ್‌ಸಿ ತಳವಾರ ಸಾಬಣ್ಣಾ ಖಂಡನೆ

‘ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಇದೇ ವರ್ಷ ಸ್ಥಾಪನೆಯಾಗಿತ್ತು. ಕೆಲವು ಸಮಾಜಘಾತಕ ವ್ಯಕ್ತಿಗಳು ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ. ಇದು ಕೋಲಿ-ಕಬ್ಬಲಿಗ ಸಮಾಜದ ಮೇಲೆ ನಡೆದ ನೇರವಾದ ಭಾವನಾತ್ಮಕ ದಾಳಿಯಾಗಿದೆ. ಅನ್ಯಾಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಕೃತ್ಯ ಎಸೆಗಿದ ಸಮಾಜಘಾತುಕ ವ್ಯಕ್ತಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಜೊತೆಗೆ ಜಿಲ್ಲಾಡಳಿತದಿಂದ ಹೊಸದಾಗಿ ಮೂರ್ತಿ ನಿರ್ಮಿಸಿಕೊಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ತಳವಾರ ಸಾಬಣ್ಣಾ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.