ADVERTISEMENT

ಹಗಲಲ್ಲಿ ಹೊಂಚು, ನಸುಕಿನಲ್ಲಿ ಕನ್ನ! ಮಹಮ್ಮದ್ ಆರೀ‌ಫ್ ಅಲಿ ಬಂಧನ

ಮೂರು ಮನೆ ಕಳ್ಳತನ ಪ್ರಕರಣ ಭೇದಿಸಿದ ವಿಶ್ವವಿದ್ಯಾಲಯ ಪೊಲೀಸರು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:02 IST
Last Updated 7 ನವೆಂಬರ್ 2025, 7:02 IST
<div class="paragraphs"><p>ಆರೋಪಿ ಮಹಮ್ಮದ್ ಆರೀ‌ಫ್ ಅಲಿ</p></div>

ಆರೋಪಿ ಮಹಮ್ಮದ್ ಆರೀ‌ಫ್ ಅಲಿ

   

ಕಲಬುರಗಿ: ನಗರದ ವಿವಿಧೆಡೆ ನಡೆದಿದ್ದ ಮೂರು ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

‘ನಗರದ ಬಿಲಾಲಾಬಾದ್‌ ಕಾಲೊನಿ ನಿವಾಸಿ ಮಹಮ್ಮದ್ ಆರೀಫ್‌ ಅಲಿ (50) ಬಂಧಿತ ಆರೋಪಿ. ಬಂಧಿತನಿಂದ ₹13.41 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ, ₹16 ಸಾವಿರ ಮೌಲ್ಯದ 200 ಗ್ರಾಂ ಬೆಳ್ಳಿ ಆಭರಣ, ಕೃತ್ಯಕ್ಕೆ ಉಪಯೋಗಿಸಿ ಬೈಕ್‌ ಅನ್ನು ವಶಕ್ಕೆ ಪಡೆಯಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಆರೋಪಿಯು ವೃತ್ತಿಯಿಂದ ಮಸೀದಿಯೊಂದರಲ್ಲಿ ಅರೇಬಿಕ್‌ ಶಿಕ್ಷಕನಾಗಿದ್ದ. ಹಗಲಲ್ಲಿ ಪಾಠ ಬೋಧನೆ ಜೊತೆಗೆ ಬೈಕ್‌ನಲ್ಲಿ ಸಂಚರಿಸಿ ಕೀಲಿ ಹಾಕಿದ ಮನೆಗಳ ಮೇಲೆ ಕಣ್ಣಿಟ್ಟು ಹೊಂಚುಹಾಕುತ್ತಿದ್ದ. ಬಳಿಕ ನಸುಕಿನ 3 ಗಂಟೆಯಿಂದ 4.30ರ ಅವಧಿಯಲ್ಲಿ ಕೃತ್ಯ ಎಸೆಗಿ ಪರಾರಿಯಾಗುತ್ತಿದ್ದ. ಮನೆಯ ಆರ್ಥಿಕ ಸ್ಥಿತಿ ನಿರ್ವಹಣೆ ಹಾಗೂ ಸಾಲದ ಬಾಧೆಯಿಂದ ಕಳ್ಳತನ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಮಾಹಿತಿ ನೀಡಿದರು.

‘ಈ ಆರೋಪಿ ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯ ಮಾಲಗತ್ತಿ ಕ್ರಾಸ್‌, ಫಿರ್ದೋಸ್ ಕಾಲೊನಿ, ಹಾಗರಗಾ ರಸ್ತೆ ಪ್ರದೇಶವನ್ನೇ ಕೇಂದ್ರೀಕರಿಸಿ ಕಳ್ಳತನದಲ್ಲಿ ತೊಡಗಿದ್ದ. ಏಪ್ರಿಲ್‌27ರಂದು ಉಮರ್‌ ಕಾಲೊನಿಯ ಮನೆಯಲ್ಲಿ ₹1.35 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ. ಅಕ್ಟೋಬರ್‌ 5ರಂದು ಮಾಲಗತ್ತಿ ಕ್ರಾಸ್‌ನ ಮನೆಯಲ್ಲಿ ₹9.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ದ. ಅಕ್ಟೋಬರ್‌ 20ರಿಂದ 24ರ ಅವಧಿಯಲ್ಲಿ ಫಿರ್ದೋಸ್‌ ಕಾಲೊನಿಯ ಮನೆಯಲ್ಲಿ ₹4.22 ಲಕ್ಷ ಮೊತ್ತದ ಚಿನ್ನ–ಬೆಳ್ಳಿ ಆಭರಣ, ನಗದು ಕದ್ದಿದ್ದ’ ಎಂದು ವಿವರಿಸಿದರು.

‘ಈ ಮೂರು  ಪ್ರಕರಣಗಳಲ್ಲಿ ದೊಡ್ಡ ಪುರಾವೆಗಳೇ ಸಿಕ್ಕಿರಲಿಲ್ಲ. ಒಂದು ಪ್ರಕರಣದಲ್ಲಿ ಮನೆಗಳ ಮೇಲೆ ಕಣ್ಣಿಡಲು ಬಳಸುತ್ತಿದ್ದ ಬೈಕ್‌ ವಿಶಿಷ್ಟ ಇಂಡಿಕೇಟರ್‌ ಈ ಪ್ರಕರಣದಲ್ಲಿ ಸೂಕ್ಷ್ಮ ಸುಳಿವು ನೀಡಿತು. ಹಾನಿಯಾದ ನಂಬರ್‌ ಪ್ಲೇಟ್‌, ವಿಶಿಷ್ಟವಾದ ಇಂಡಿಕೇಟರ್‌ ಹೊಂದಿದ ಬೈಕ್‌ ಹಾದು ಹೋಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆ ಸುಳಿವು ಬೆನ್ನಟ್ಟಿದ ಇನ್‌ಸ್ಪೆಕ್ಟರ್‌ ಸುಶೀಲಕುಮಾರ ಅವರ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಪ್ರವೀಣ ನಾಯಕ, ಇನ್‌ಸ್ಪೆಕ್ಟರ್‌ ಸುಶೀಲಕುಮಾರ ಇದ್ದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು–ಸಿಬ್ಬಂದಿಗೆ ಕಮಿಷನರ್‌ ಶರಣಪ್ಪ ಪ್ರಶಂಸಾ ಪತ್ರ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.