
ಕಲಬುರಗಿ: ‘ವೈದ್ಯರು ಈಗ ರೋಗಿಗಳನ್ನು ಹೇಗಿದ್ದೀರಿ ಎಂದು ಮಾತನಾಡಿಸುತ್ತಿಲ್ಲ. ಬದಲಿಗೆ ಅವರ ಮೆಡಿಕಲ್ ರಿಪೋರ್ಟ್‌ಗಳನ್ನು ನೋಡಿ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ವೈದ್ಯರು ಮತ್ತು ರೋಗಿಗಳ ಮಧ್ಯ ಅಂತರ ಹೆಚ್ಚಾಗುತ್ತಿದೆ’ ಎಂದು ವಿಜಯಪುರದ ಬಿಎಲ್‌ಡಿಇ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ. ವೈ.ಎಂ. ಜಯರಾಜ್ ಕಳವಳ ವ್ಯಕ್ತಪಡಿಸಿದರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಡಾ.ಪಿ.ಎಸ್. ಶಂಕರ್ ಪ್ರತಿಷ್ಠಾನ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ 26ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ವೈದ್ಯಕೀಯ, ಎಂಜಿನಿಯರಿಂಗ್ ವಿದ್ಯಾರ್ಥಿ ವೇತನ ವಿತರಣೆ ಮತ್ತು ವಿಜ್ಞಾನ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬೆಳೆಯುತ್ತಿರುವ ವೈದ್ಯಕೀಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರವು ಹೆಚ್ಚಿನ ನೆರವು ನೀಡುತ್ತಿದ್ದು, ಪ್ರಸ್ತುತ ವಿದ್ಯಾರ್ಥಿಗಳು ತಮ್ಮ ಮೆರಿಟ್ ಆಧಾರದ ಮೇಲೆ ಬೇಕಾದ ಕಾಲೇಜು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ದೇಶದಲ್ಲಿ 800ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದು, 1.50 ಲಕ್ಷ ಮೆಡಿಕಲ್ ಸೀಟುಗಳಿವೆ. 2030ರ ವೇಳೆಗೆ ಈ ಸಂಖ್ಯೆ 2 ಲಕ್ಷಕ್ಕೆ ಹೆಚ್ಚಲಿದೆ. ಪಿಜಿ ಸೀಟುಗಳು 1 ಲಕ್ಷಕ್ಕೆ ಹೆಚ್ಚಾಗಲಿದೆ’ ಎಂದರು.
ವಿಜ್ಞಾನ ಕ್ಯಾಲೆಂಡರ್ ಬಿಡುಗಡೆ ಮಾಡಿದ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಮಾತನಾಡಿ, ‘ವಿದ್ಯಾರ್ಥಿ ವೇತನವು ಶಿಕ್ಷಣಕ್ಕೆ ಶಕ್ತಿ ನೀಡುತ್ತದೆ. ಸರ್ಕಾರಿ ಶಾಲಾ–ಕಾಲೇಜುಗಳಲ್ಲಿ ಶಿಕ್ಷಣ ಪಡೆದ ನನಗೂ ಸ್ಕಾಲರ್‌ಶಿಪ್ ನೆರವಾಗಿದೆ. ಡಾ. ಪಿ.ಎಸ್. ಶಂಕರ್ ಪ್ರತಿಷ್ಠಾನ ನೀಡುತ್ತಿರುವ ವಿದ್ಯಾರ್ಥಿ ವೇತನವು ಪ್ರತಿಭೆ ಮತ್ತು ಭವಿಷ್ಯದ ಮೇಲಿನ ಹೂಡಿಕೆಯಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.
‘ಡಾ.ಪಿ.ಎಸ್. ಶಂಕರ್ ಅವರು ವೈದ್ಯಕೀಯ ಕ್ಷೇತ್ರವಲ್ಲದೇ ಸಮಾಜಕ್ಕೆ ಮಾದರಿ ಕೆಲಸ ಮಾಡುತ್ತಿದ್ದಾರೆ. ವಿಜ್ಞಾನ ಕ್ಯಾಲೆಂಡರ್ ಬಿಡುಗಡೆ ಮಾಡಿರುವುದು ಯುವಸಮುದಾಯಕ್ಕೆ ಅತ್ಯುಪಯುಕ್ತವಾಗಲಿದೆ’ ಎಂದು ಹೇಳಿದರು.
ವೈದ್ಯ ಸಾಹಿತಿ ಡಾ.ಪಿ.ಎಸ್. ಶಂಕರ್, ಪ್ರತಿಷ್ಠಾನದ ಅಧ್ಯಕ್ಷೆ ಅಂಬಿಕಾ ಶಂಕರ್, ಜಂಟಿ ಕಾರ್ಯದರ್ಶಿ ಸದಾನಂದ ಮಹಾಗಾಂವಕರ್, ಡಾ.ಜಿ.ಡಿ. ಹುನಗುಂಟಿ, ಡಾ.ವೀಣಾ ವಿಕ್ರಮ ಸಿದ್ಧಾರಡ್ಡಿ, ಉದಯ ಪಿ.ಹುನಗುಂಟಿಕರ್, ಲಕ್ಷ್ಮಿದೇವಿ ಕುರಾಳ, ಡಾ.ಮಲ್ಲಿಕಾರ್ಜುನ ಕುರಾಳ, ಶೈಲಜಾ ತಪಲಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ. ಎಚ್.ವೀರಭದ್ರಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ನರೇಂದ್ರ ಬಡಶೇಷಿ ನಿರೂಪಿಸಿದರು. ರಾಮಕೃಷ್ಣ ರಡ್ಡಿ ವಂದಿಸಿದರು.
ಡಾ.ಪಿ.ಎಸ್. ಶಂಕರ್ ಅವರು ಜೀವಂತ ವಿಶ್ವಕೋಶ ಇದ್ದಂತೆ. ಯುವ ಸಮುದಾಯಕ್ಕೆ ಮಾದರಿಯಾಗಿದ್ದು ಪ್ರತಿಷ್ಠಾನದ ಮೂಲಕ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೆರವಾಗುವ ಮೂಲಕ ಅವರಲ್ಲಿ ದಾನದ ಶಕ್ತಿ ತುಂಬುತ್ತಿದ್ದಾರೆ
–ಪ್ರೊ. ವೈ.ಎಂ. ಜಯರಾಜ್ ಬಿಎಲ್‌ಡಿಇ ವಿಶ್ವವಿದ್ಯಾಲಯದ ಸಮಕುಲಪತಿ ವಿಜಯಪುರ
ರಾಷ್ಟ್ರೀಯ ವೈದ್ಯಶ್ರೀ ಪ್ರಶಸ್ತಿ ನೀಡಿದ ಡಾ.ಪಿ.ಎಸ್.ಶಂಕರ್ ಪ್ರತಿಷ್ಠಾನಕ್ಕೆ ನಾನು ಆಭಾರಿ. ಇದರ ಜೊತೆಗೆ ಕಷ್ಟದಲ್ಲಿಯೂ ಸಾಧನೆ ಮಾಡಿ ವಿದ್ಯಾರ್ಥಿವೇತನ ಪಡೆದ ಫಲಾನುಭವಿಗಳು ಭವಿಷ್ಯದಲ್ಲಿ ಸಫಲತೆ ಕಾಣಲಿ
–ಡಾ.ಬಿ.ಎನ್. ಗಂಗಾಧರ ಪ್ರಶಸ್ತಿ ಪುರಸ್ಕೃತರು
ಜನಸಾಮಾನ್ಯರಿಗೆ ತಿಳಿಯುವಂತೆ ಕನ್ನಡದಲ್ಲಿ ವೈದ್ಯಕೀಯ ಪುಸ್ತಕಗಳನ್ನು ಬರೆದ ನನ್ನನ್ನು ಪ್ರಶಸ್ತಿಗೆ ಪರಿಗಣಿಸಿದ ಪ್ರತಿಷ್ಠಾನಕ್ಕೆ ನಮನಗಳು. ಇನ್ನೂ ಹೆಚ್ಚಿನ ಒಳ್ಳೆಯ ಕಾರ್ಯ ಮಾಡಲು ಇಂಥ ಸನ್ಮಾನ ಪ್ರೇರಣೆ ನೀಡುತ್ತದೆ
ಡಾ.ಅಣ್ಣಪ್ಪ ಪಾಂಗಿ ಪ್ರಶಸ್ತಿ ಪುರಸ್ಕೃತರು
ವೈದ್ಯಶ್ರೀ ವೈದ್ಯ ಸಾಹಿತ್ಯ ಪ್ರಶಸ್ತಿ ಪ್ರದಾನ
ನವದೆಹಲಿಯ ನ್ಯಾಷನಲ್ ಮೆಡಿಕಲ್ ಕಮಿಷನ್ ಮಾಜಿ ಅಧ್ಯಕ್ಷ ಬೆಂಗಳೂರಿನ ನಿಮ್ಹಾನ್ಸ್ ವಿಶ್ರಾಂತ ಕುಲಪತಿ/ ನಿರ್ದೇಶಕ ಡಾ.ಬಿ.ಎನ್. ಗಂಗಾಧರ ಅವರಿಗೆ ‘ಡಾ.ಪಿ.ಎಸ್. ಶಂಕರ್ ರಾಷ್ಟ್ರೀಯ ವೈದ್ಯಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹15 ಸಾವಿರ ನಗದು ನೆನಪಿನ ಕಾಣಿಕೆ ಒಳಗೊಂಡಿದೆ. ಬೆಳಗಾವಿ ಜಿಲ್ಲೆ ಅಥಣಿಯ ವೈದ್ಯ ಸಾಹಿತಿ ಡಾ.ಅಣ್ಣಪ್ಪ ಪಾಂಗಿ ಅವರಿಗೆ ‘ಡಾ.ಪಿ.ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹7500 ನಗದು ನೆನಪಿನ ಕಾಣಿಕೆ ಒಳಗೊಂಡಿದೆ. ಬಳಿಕ ಇಬ್ಬರೂ ತಮಗೆ ನೀಡಿದ ಪ್ರಶಸ್ತಿಗಳ ಮೊತ್ತವನ್ನು ಪ್ರತಿಷ್ಠಾನದ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿವೇತನಗಳಿಗೆ ಅನುಕೂಲವಾಗಲಿ ಎಂದು ಪ್ರತಿಷ್ಠಾನದ ಅಧ್ಯಕ್ಷರಿಗೆ ಮರಳಿಸಿದರು.
ವಿದ್ಯಾರ್ಥಿವೇತನ ವಿತರಣೆ
ಸಮಾರಂಭದಲ್ಲಿ 2025-30ನೇ ಸಾಲಿನ ವೈದ್ಯ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿ ವೇತನ ನೀಡಲಾಯಿತು. ವೈದ್ಯಕೀಯ ವಿದ್ಯಾರ್ಥಿಗಳು: ಹಾಸನ ಜಿಲ್ಲೆಯ ಹಾರನಹಳ್ಳಿ ಅರಸೀಕೆರೆಯ ಪಾಂಡುರಂಗ ಜಿ.ಪಿ. ಭದ್ರಾವತಿಯ ನಂದನ ಗಣೇಶ ತುಮಕೂರು ಜಿಲ್ಲೆಯ ಆದಿತ್ಯ ಎಚ್.ಎಸ್. ಚಿಕ್ಕಮಗಳೂರಿನ ಲಿಖಿತ್ ಸಿ.ಪಿ. ಭಾಲ್ಕಿ ತಾಲ್ಲೂಕಿನ ಗೋರಚಿಂಚೋಳಿಯ ಪಲ್ಲವಿ ಬಿರಾದಾರ ಗದಗ ಜಿಲ್ಲೆಯ ಅಮೋಘ ರೆಡ್ಡಿ ಯಡ್ರಾಮಿ ತಾಲ್ಲೂಕಿನ ಬಳಬಟ್ಟಿಯ ಅಭಿಷೇಕ್ ಕಲಬುರಗಿಯ ಪ್ರಜ್ವಲ್ ಸಮಗೊಂಡ ಚಿತ್ತಾಪುರ ತಾಲ್ಲೂಕಿನ ಭೀಮನಳ್ಳಿಯ ಶಾಂಭವಿ ಅಂಬರ್ ಕಾರಟಗಿ ತಾಲ್ಲೂಕಿನ ಮೈಲಾಪುರದ ಕಿರಣಕುಮಾರ. ಇವರಿಗೆ ವಾರ್ಷಿಕ ತಲಾ ₹18 ಸಾವಿರ ವಿದ್ಯಾರ್ಥಿ ವೇತನ ಸಿಗಲಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು: ನೇಹಾ ಎಸ್. ಭಾಗ್ಯಶ್ರೀ ಮತ್ತು ಚೇತನ್. ಇವರಿಗೆ ವಾರ್ಷಿಕ ತಲಾ ₹10 ಸಾವಿರ ವಿದ್ಯಾರ್ಥಿ ವೇತನ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.