ADVERTISEMENT

ಕಲುಷಿತ ನೀರು ಪೂರೈಕೆಯಾದರೆ ಅಧಿಕಾರಿಗಳೇ ಹೊಣೆ: ಸಚಿವ ರಹೀಂ ಖಾನ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 14:49 IST
Last Updated 28 ಮೇ 2025, 14:49 IST
ಕಲಬುರಗಿಯಲ್ಲಿ ಬುಧವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಅಧಿಕಾರಿಗಳು ಉಪಸ್ಥಿತರಿದ್ದರು
ಕಲಬುರಗಿಯಲ್ಲಿ ಬುಧವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಅಧಿಕಾರಿಗಳು ಉಪಸ್ಥಿತರಿದ್ದರು   

ಕಲಬುರಗಿ: ‘ಮಳೆಗಾಲದಲ್ಲಿ ಕಲುಷಿತ ನೀರು ಕುಡಿದು ಏನಾದರು ಅವಘಡ ಸಂಭವಿಸಿದಲ್ಲಿ ಸಂಬಂಧಪಟ್ಟ ಮುಖ್ಯ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

‘ಮಳೆಗಾಲ ಸಮೀಪಿಸುತ್ತಿದ್ದು, ನಗರ ನಿವಾಸಿಗಳಿಗೆ ಕಲುಷಿತ ನೀರು ಪೂರೈಕೆ ಆಗದಂತೆ ಮುಖ್ಯಾಧಿಕಾರಿಗಳು ಎಚ್ಚರ ವಹಿಸಬೇಕು. ಕುಡಿಯುವ ನೀರಿನ ಕೊಳವೆ ಮಾರ್ಗಗಳ ನಿರ್ವಹಣೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಮೂಲಸೌಕರ್ಯ ಬಲಪಡಿಸಲು 2025-26ನೇ ಸಾಲಿನಲ್ಲಿ 15ನೇ ಹಣಕಾಸು, ಎಸ್‌ಎಫ್‌ಸಿ ಸೇರಿ ಇತರೆ ಯೋಜನೆಗಳಿಗೆ, ಕುಡಿಯುವ ನೀರು ಯೋಜನೆಗಳಿಗೆ ₹ 48.70 ಕೋಟಿ ಅನುದಾನ ನೀಡಲಾಗಿದೆ. ಜೂನ್ ಅಂತ್ಯದೊಳಗೆ ಕ್ರಿಯಾ ಯೋಜನೆ ಅನುಮೋದನೆ ಪಡೆದು ಕೆಲಸಗಳನ್ನು ಪ್ರಾರಂಭಿಸಬೇಕು’ ಎಂದರು.

‘ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆ ಮೇಲೆ ಪ್ರಾರಂಭಿಸಬೇಕು. ಶುಕ್ರವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ’ ಎಂದು ಹೇಳಿದರು.

‘ನಗರ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ಆಸ್ತಿ, ನೀರು, ಗ್ರಂಥಾಲಯ, ಜಾಹೀರಾತು, ವ್ಯಾಪಾರ ಪರವಾನಗಿ, ಮಳಿಗೆ ಕರವನ್ನು ಅಭಿಯಾನ ರೂಪದಲ್ಲಿ ವಸೂಲು ಮಾಡಬೇಕು. ಸಣ್ಣ ವರ್ತಕರಿಗಾಗಿ ಶಿಬಿರಗಳನ್ನು ಆಯೋಜಿಸಿ ವ್ಯಾಪಾರ ಪರವಾನಗಿ ನೀಡಬೇಕು’ ಎಂದು ನಿರ್ದೇಶನ ನೀಡಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ್ ದೌಲ್ ಮಾತನಾಡಿ, ‘2024-25ನೇ ಸಾಲಿನಲ್ಲಿ 13 ಸ್ಥಳೀಯ ಸಂಸ್ಥೆಗಳಿಂದ ₹ 85.76 ಕೋಟಿ ಆಸ್ತಿ ತೆರಿಗೆಯಲ್ಲಿ ₹ 52.22 ತೆರಿಗೆ ಸಂಗ್ರಹಿಸಲಾಗಿದೆ. ಕಳೆದ ವರ್ಷದ ನೀರಿನ ಕರದ ₹ 94.78 ಕೋಟಿ ಪೈಕಿ ₹ 15.34 ಕೋಟಿ ಸಂಗ್ರಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮಳಿಗೆಗಳ ಪರವಾನಗಿಯ ₹ 10.48 ಕೋಟಿ ಗುರಿ ಪೈಕಿ ₹ 1.65 ಕೋಟಿ ಹಾಗೂ ವ್ಯಾಪಾರ ಪರವಾನಗಿಯ ₹ 3.30 ಕೋಟಿ ಪೈಕಿ  ₹ 1.56 ಕೋಟಿ ವಸೂಲಿ ಮಾಡಲಾಗಿದೆ. ಅನಧಿಕೃತ ಕಟ್ಟಡಗಳಿಗೆ ‘ಬಿ’ ಖಾತಾ ನೀಡಲು ಕಳೆದ ಫೆಬ್ರವರಿ 18ರಿಂದ ಇದುವರೆಗೆ 10,386 ಅರ್ಜಿ ಸಲ್ಲಿಕೆಯಾಗಿವೆ. ಅವುಗಳಲ್ಲಿ 6,177 ಆಸ್ತಿಗಳಿಗೆ ‘ಬಿ’ ಖಾತಾ ನೀಡಲಾಗಿದೆ. ಇದರಿಂದ ಯುಎಲ್‌ಬಿಗಳಿಗೆ ₹2.63 ಕೋಟಿ ಕರ ಜಮೆಯಾಗಿದೆ’ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮೇಯರ್ ಯಲ್ಲಪ್ಪ ನಾಯಕೊಡಿ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಪೌರಾಡಳಿತ ನಿರ್ದೇಶನಾಲಯದ ಎಂಜಿನಿಯರ್ ರಾಧಾಕೃಷ್ಣ, ಅಧೀಕ್ಷಕ ಎಂಜಿನಿಯರ್ ಬಸವರಾಜ, ಸಚಿವರ ಆಪ್ತ ಕಾರ್ಯದರ್ಶಿ ಕೆ.ಮುರಳಿಧರ ಸೇರಿದಂತೆ ಪೌರ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.