ADVERTISEMENT

ಬಾಬು ಜಗಜೀವನರಾಂ ಜಯಂತಿ: ಸಮಾನತೆಗೆ ಶ್ರಮಿಸಿದ್ದ ರಾಜಕೀಯ ಮುತ್ಸದ್ದಿ

ಶಾಸಕ ಅಲ್ಲಮಪ್ರಭು ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 7:25 IST
Last Updated 6 ಏಪ್ರಿಲ್ 2025, 7:25 IST
ಕಲಬುರಗಿಯ ಟೌನ್ ಹಾಲ್‌ ಮುಂಭಾಗದಲ್ಲಿ ಶನಿವಾರ ಡಾ.ಬಾಬು ಜಗಜೀವನರಾಂ ಅವರ ಜಯಂತಿ ಅಂಗವಾಗಿ ಬಾಬೂಜಿ ಅವರ ಭಾವಚಿತ್ರಕ್ಕೆ ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮಡು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು  ಪ್ರಜಾವಾಣಿ ಚಿತ್ರ
ಕಲಬುರಗಿಯ ಟೌನ್ ಹಾಲ್‌ ಮುಂಭಾಗದಲ್ಲಿ ಶನಿವಾರ ಡಾ.ಬಾಬು ಜಗಜೀವನರಾಂ ಅವರ ಜಯಂತಿ ಅಂಗವಾಗಿ ಬಾಬೂಜಿ ಅವರ ಭಾವಚಿತ್ರಕ್ಕೆ ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮಡು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು  ಪ್ರಜಾವಾಣಿ ಚಿತ್ರ    

ಕಲಬುರಗಿ: ‘ಡಾ.ಬಾಬು ಜಗಜೀವನರಾಂ ಅವರು ಸಮಾಜದಲ್ಲಿ ಜಾತಿ ಬೇಧ ಮರೆತು ಸಮಾನತೆಗಾಗಿ ಶ್ರಮಿಸಿದ್ದ ಶ್ರೇಷ್ಠ ರಾಜಕೀಯ ಮುತ್ಸದ್ದಿ’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ಇಲ್ಲಿನ ಟೌನ್ ಹಾಲ್‌ನಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶವು ಹಸಿವಿನಿಂದ ಬಳಲುತ್ತಿರುವ ವೇಳೆಯಲ್ಲಿ ದೇಶದ ಪರಿಸ್ಥಿತಿ ಅರಿತುಕೊಂಡು ಒಂದು ರೂಪುರೇಷೆಯನ್ನು ತಯಾರಿಸಿಕೊಂಡರು. ರೈತರು ಆಹಾರ ಧಾನ್ಯದಲ್ಲಿ ಹೆಚ್ಚುವರಿ ಇಳುವರಿ ಪಡೆಯಲು ರೈತರಿಗೆ ನೀರಾವರಿ, ಬಿತ್ತನೆ ಬೀಜ ಗೊಬ್ಬರ, ಆಧುನಿಕ ಕೃಷಿ ಸಲಕರಣೆಗಳನ್ನು ಪರಿಚಯಿಸುವುದರ ಮೂಲಕ ಕೃಷಿಯಲ್ಲಿ ಬದಲಾವಣೆ’ ತಂದರು ಎಂದರು.

ADVERTISEMENT

‘ಬಾಬೂಜಿ ಅವರ ಮಹತ್ಕಾರ್ಯದಿಂದಾಗಿ ರೈತರು ಹೆಚ್ಚಿನ ಇಳುವರಿ ಮತ್ತು ಆರ್ಥಿಕ ಅಭಿವೃದ್ಧಿ ಕಾಣಲು ಸಾಧ್ಯವಾಯಿತು. ಸಿಕ್ಕಂತಹ ಅಧಿಕಾರವನ್ನು ದೇಶದ ಅಭಿವೃದ್ಧಿ ಮತ್ತು ಸಮಸ್ಯೆಗಳ ನಿವಾರಣೆಗಾಗಿ ಅವಿರತವಾಗಿ ಶ್ರಮಿಸಿದ್ದ ಮಹಾನ್ ನಾಯಕ’ ಎಂದು ಬಣ್ಣಿಸಿದರು.

ಪಾಲಿಕೆಯ ಮೇಯರ್ ಯಲ್ಲಪ್ಪ ನಾಯಕೊಡಿ ಮಾತನಾಡಿ, ‘ಸಮಾಜದಲ್ಲಿ ಅಸ್ಪೃಶ್ಯತೆ, ಬಡತನ ಮತ್ತು ನಿರುದ್ಯೋಗ ಮತ್ತು ಆಹಾರದ ಕೊರತೆಯಂತಹ ಸಮಸ್ಯೆಗಳು ನಿವಾರಿಸುವಲ್ಲಿ ಬಾಬೂಜಿ ಅವರ ಕೊಡುಗೆ ಅಪಾರವಿದೆ’ ಎಂದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ‘ಬಾಬೂಜಿ  ಅವರು ಸತತ ಮೂವತ್ತು ವರ್ಷಗಳು ಸಂಪುಟ ದರ್ಜೆ ಸಚಿವರಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಶಿಕ್ಷಣದಿಂದ ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ ಎಂದು ನಂಬಿದ್ದವರು’ ಎಂದು ಹೇಳಿದರು.

‘ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿದ್ದಾಗ ಮಾತ್ರ ಒಳ್ಳೆಯ ಉದ್ಯೋಗ ಅಧಿಕಾರ ಪಡೆಯಲು ಸಾಧ್ಯವಿದೆ. ಎಲ್ಲಾ ಸಮಾಜದವರು ಒಗ್ಗೂಡಿ ಇಂತಹ ಮಹಾನ್ ವ್ಯಕ್ತಿಗಳ ಜೀವನ ಕುರಿತು ಅರಿತುಕೊಳ್ಳಬೇಕು. ಅವರ ಸಾಧನೆ ಇಂದಿನ ಜನಾಂಗಕ್ಕೆ ಪ್ರೇರಣೆ ಆಗಬೇಕು’ ಎಂದರು.

ಚಿಂಚೋಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ಅಧ್ಯಯನ ವಿಭಾಗದ ಮುಖಸ್ಥ ಮಲ್ಲಿಕಾರ್ಜುನ ಎಂ. ಸಾವರಕರ್ ಉಪನ್ಯಾಸ ನೀಡಿದರು. ಜಯಂತಿ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಜಯಂತ್ಯುತ್ಸವ ಆಚರಣೆ ಸಮಿತಿ ಅಧ್ಯಕ್ಷ ರಂಜೀತ ಆರ್. ಮೂಲಿಮನಿ, ಮುಖಂಡ ರಾಜು ವಾಡೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಳೆಯಲ್ಲೂ ಅಬ್ಬರದ ಮೆರವಣಿಗೆ

ಡಾ.ಬಾಬು ಜಗಜೀವನರಾಂ ಜಯಂತ್ಯುತ್ಸವ ಆಚರಣೆ ಸಮಿತಿ ಸೇರಿದಂತೆ ಬಾಬೂಜಿ ಅವರ ಅಭಿಮಾನಿಗಳು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸುರಿಯ ಮಳೆಯಲ್ಲೂ ಅಬ್ಬರದ ಮೆರವಣಿಗೆ ಮಾಡಿದರು. ಅಲಂಕೃತ ವಾಹನದಲ್ಲಿ ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರವನ್ನು ಇರಿಸಿ ಡಿ.ಜೆ. ಹಾಡಿಗೆ ನೂರಾರು ಯುವಕರು ಕುಣಿದು ಕುಪ್ಪಳಿಸಿದರು. ಸಂಜೆ 7ರ ಸುಮಾರಿಗೆ ಶುರುವಾದ ಮಳೆ ಕೆಲಹೊತ್ತು ಜೋರಾಗಿ ಬಿತ್ತು. ಮಳೆಯ ಅಬ್ಬರ ಕಡಿಮೆ ಆಗುತ್ತಿದ್ದಂತೆ ಜಿಟಿಜಿಟಿಯಾಗಿ ಬೀಳುವ ಮಳೆಯಲ್ಲೂ ಕುಣಿತವನ್ನು ಮುಂದುವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.