ADVERTISEMENT

ಯಡ್ರಾಮಿಯಲ್ಲಿ ಹೆಸರು ಬಿತ್ತನೆಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 5:32 IST
Last Updated 28 ಆಗಸ್ಟ್ 2023, 5:32 IST
ಹೆಸರು ಕಾಳು
ಹೆಸರು ಕಾಳು   

ಮಂಜುನಾಥ ದೊಡಮನಿ

ಯಡ್ರಾಮಿ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ವಾಣಿಜ್ಯ ಬೆಳೆ ಹೆಸರು ಬಿತ್ತನೆಗೆ ಭಾರಿ ಹಿನ್ನಡೆಯಾಗಿ‌ದೆ.

2023-24ನೇ ಸಾಲಿಗೆ ಯಡ್ರಾಮಿ ತಾಲ್ಲೂಕಿನಲ್ಲಿ ಭತ್ತ(ಖು), ಭತ್ತ (ನೀ), ಜೋಳ(ಖು), ಜೋಳ(ಖು), ಮೆಕ್ಕೆಜೋಳ(ಖು), ಮೆಕ್ಕೆಜೋಳ(ನೀ), ಸಜ್ಜಿ(ಖು), ಸಜ್ಜಿ (ನೀ), ಮತ್ತು ಇತರೆ ಏಕದಳ ಧಾನ್ಯಗಳು, ತೊಗರಿ(ಖುಷ್ಕಿ ಮತ್ತು ನೀರಾವರಿ), ಹುರುಳಿ(ಖು), ಉದ್ದು(ಖು), ಹೆಸರು (ಖುಷ್ಕಿ ಮತ್ತು ನೀರಾವರಿ), ಅಲಸಂಧಿ(ಖು), ಅವರೆ(ಖು), ಮಡಕಿ ಸೇರಿ ಯಡ್ರಾಮಿ ಮತ್ತು ಇಜೇರಿಗಳಲ್ಲಿ ಮುಂಗಾರು ಅವಧಿಯಲ್ಲಿ ಒಟ್ಟು 59,647 ಹೆಕ್ಟೇರ್‌ಗಳಲ್ಲಿ ಬಿತ್ತನೆ ಆಗಿದೆ.

ADVERTISEMENT

ಈ ಪೈಕಿ 540 ಹೆಕ್ಟೇರ್‌ಗಳಲ್ಲಿ ಹೆಸರು ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಶೇಕಡ 15ರಷ್ಟು ಮಾತ್ರ ಬಿತ್ತನೆ ಆಗಿದೆ.

ಎರಡು ವರ್ಷ ಹೆಚ್ಚಿನ ಮಳೆಯಿಂದ ಬೆಳೆ ಕಳೆದುಕೊಂಡಿದ್ದೇವೆ. ಸರ್ಕಾರದಿಂದ ಪರಿಹಾರವೂ ಸಿಗಲಿಲ್ಲ. ಈ ವರ್ಷ ಹೆಸರು ಬೆಳೆ ಬಿತ್ತಲು ಮಳೆ ಸಕಾಲಕ್ಕೆ ಬರಲಿಲ್ಲ. ಸರ್ಕಾರ ರೈತರ ನೆರವಿಗೆ ಬರಬೇಕು.
ಮಹೇಶ ಕೋಣಸಿರಸಿಗಿ, ಗ್ರಾಮಸ್ಥ

ಹೆಸರು ಅಲ್ಪಾವಧಿ ಬೆಳೆಯಾಗಿದ್ದು ಮುಂಗಾರು ಆರಂಭದ ವಾರದಲ್ಲಿಯೇ ಬಿತ್ತನೆ ಮಾಡಲಾಗುತ್ತದೆ. ಆದರೆ ಈ ಬಾರಿ ಮುಂಗಾರು ಮುನಿಸಿನಿಂದ ಹೆಸರು ಬಿತ್ತನೆ ಸಂಪೂರ್ಣ ಕುಸಿತವಾಗಿದೆ.

ಈ ಬಾರಿ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ಬೀಜ ಖರೀದಿ ಮಾಡಿಲ್ಲ. ತಾಲ್ಲೂಕಿನಲ್ಲಿ ಶೇ 15ಕ್ಕಿಂತ ಕಡಿಮೆ ಪ್ರದೇಶದಲ್ಲಿ ಮಾತ್ರ ಹೆಸರು ಬಿತ್ತನೆ ಆಗಿರಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಮಳೆ ಕೊರತೆಯಿಂದ ವಾಣಿಜ್ಯ ಬೆಳೆ ಹೆಸರು ಬಿತ್ತನೆಯಾಗಿಲ್ಲ. ಮುಂಗಾರು ಮಳೆ ಸಮರ್ಪಕವಾಗಿದ್ದರೆ ರೈತರು ಬಿತ್ತನೆ ಮಾಡಿ ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಿದ್ದರು. ಹೆಸರು ಬಿತ್ತನೆಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.
ಪವನ್, ಕೃಷಿ ಅಧಿಕಾರಿ, ಯಡ್ರಾಮಿ

ಮಳೆ ಬೀಳದೆ ಕಾರಣ ರೈತರು ಬೀಜ ಕೂಡ ಖರೀದಿಸಿಲ್ಲ. ಹೀಗಾಗಿ ಹೆಸರು ಬೀಜಗಳ ದಾಸ್ತಾನು ರೈತ ಸಂಪರ್ಕ ಕೇಂದ್ರದಲ್ಲಿ ಹಾಗೆ ಉಳಿದುಕೊಂಡಿದೆ. ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಪ್ರತಿ ವರ್ಷ ಸಾಕಷ್ಟು ಪ್ರಮಾಣದಲ್ಲಿ ಹೆಸರು ಬೆಳೆ ಬೆಳೆಯಲಾಗುತ್ತದೆ. ಅಲ್ಪಾವಧಿ ಬೆಳೆಯಾಗಿರುವುದರಿಂದ ರೈತರು ಹೆಸರು ಬಿತ್ತನೆಗೆ ಆಸಕ್ತಿ ತೋರಿಸುತ್ತಾರೆ. ಜತೆಗೆ ಅದಕ್ಕೆ ಉತ್ತಮ ಬೆಲೆಯೂ ಸಿಗುತ್ತದೆ ಮತ್ತು ಹಿಂಗಾರು ಬೆಳೆ ಖರ್ಚು ನಿರ್ವಹಿಸುತ್ತದೆ.

ಇಲ್ಲಿಯ ಹೆಸರು ಬೇರೆಬೇರೆ ರಾಜ್ಯಗಳಿಗೆ ರಫ್ತಾಗುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ಮಳೆಯಾಗದೆ ಇರುವುದರಿಂದ ಹೆಸರು ಬಿತ್ತನೆ ನಿಂತು ಹೋಗುತ್ತಿದೆ. ಹೆಸರು ಬೆಳೆಯಬೇಕು ಎಂಬ ರೈತರ ಆಸೆಗೆ ಮಳೆರಾಯ ತಣ್ಣೀರು ಎರಚಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.