ADVERTISEMENT

ಬ್ಯಾನರ್ ಹರಿದ ಕಿಡಿಗೇಡಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 14:27 IST
Last Updated 5 ಮಾರ್ಚ್ 2025, 14:27 IST

ಚಿತ್ತಾಪುರ: ತಾಲ್ಲೂಕಿನ ಯರಗಲ್ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಕಟ್ಟೆಯಲ್ಲಿ ಅಳವಡಿಸಿದ್ದ ಅಂಬಿಗರ ಚೌಡಯ್ಯ, ಮಾತೆ ಮಾಣಿಕೇಶ್ವರಿ ಹಾಗೂ ದಿ.ವಿಠಲ್ ಹೇರೂರ ಅವರ ಚಿತ್ರವಿರುವ ಬ್ಯಾನರ್‌ನಲ್ಲಿ ವಿಠಲ್ ಹೇರೂರ ಅವರ ಮುಖದ ಚಿತ್ರವನ್ನು ಫೆ.26ರಂದು ಹರಿದು ಸುಟ್ಟು ಹಾಕಿದ್ದ ಕಿಡಿಗೇಡಿ ಚಂದ್ರಕಾಂತ ಶರಣಪ್ಪಾ ನಾಯಕೋಡಿ ಎಂಬಾತನನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸ್ ತನಿಖಾ ತಂಡವು ಕಿಡಿಗೇಡಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಬ್ಲೇಡಿನಿಂದ ತಾನೇ ಬ್ಯಾನರ್‌ನಲ್ಲಿನ ವಿಠಲ್ ಹೇರೂರ ಅವರ ಮುಖದ ಚಿತ್ರ ಹರಿದು ಸುಟ್ಟಿರುವುದಾಗ ಚಂದ್ರಕಾಂತ ತಪ್ಪೊಪ್ಪಿಕೊಂಡಿದ್ದಾನೆ. ಕಂಡಕಂಡಲ್ಲಿ ಅನುಮತಿ ಇಲ್ಲದೆ ಸಮಾಜದ ಹಿರಿಯರ, ಆರಾಧ್ಯ ಪುರುಷರ ಭಾವಚಿತ್ರಗಳ ಬ್ಯಾನರ್ ಇಟ್ಟು ಅವಮಾನ ಮಾಡುತ್ತಿದ್ದುದು ಸರಿಯಲ್ಲ. ಬ್ಯಾನರ್ ಕಟ್ ಮಾಡಿದರೆ ಸಮಾಜದವರು ಕೂಡಿಕೊಂಡು ಜಾಗದಲ್ಲಿ ಗುಡಿ ಕಟ್ಟಿ ಇಡುತ್ತಾರೆ ಎಂದು ರಾತ್ರಿ ಬ್ಯಾನರ್ ಕಟ್ ಮಾಡಿದ್ದೇನೆ ಎಂದು ಚಂದ್ರಕಾಂತ ವಿಚಾರಣೆ ಸಮಯದಲ್ಲಿ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಅಪರ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣವರ್, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಶ್ರೀಶೈಲ್ ಅಂಬಾಟಿ ನೇತೃತ್ವದಲ್ಲಿ ಸಿಬ್ಬಂದಿ ಬಸವರಾಜ, ಸವಿಕುಮಾರ, ರವಿಕುಮಾರ, ದತ್ತಾತ್ರೇಯ ಒಳಗೊಂಡ ತನಿಖಾ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿ ಪ್ರಕರಣದ ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಕ್ಕೆ ಇಲಾಖೆಯ ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.