ADVERTISEMENT

ಕಲ್ಯಾಣದ ಅಭಿವೃದ್ಧಿಗೆ ಕೇಂದ್ರದಿಂದ ಮಲತಾಯಿ ಧೋರಣೆ: ಲಕ್ಷ್ಮಣ ದಸ್ತಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2025, 14:15 IST
Last Updated 9 ಜನವರಿ 2025, 14:15 IST
ಲಕ್ಷ್ಮಣ ದಸ್ತಿ
ಲಕ್ಷ್ಮಣ ದಸ್ತಿ   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಕೇಂದ್ರ ಸರ್ಕಾರ ನಿರಂತರವಾಗಿ ಮಲತಾಯಿ ಧೋರಣೆ ಮಾಡುತ್ತಿರುವುದು ಖಂಡನೀಯ. ಕೇಂದ್ರ ಸರ್ಕಾರ ಇದೇ ರೀತಿಯ ಮಲತಾಯಿ ಧೋರಣೆ ಮುಂದುವರಿಸಿದರೆ, ಕಲ್ಯಾಣದ ಏಳು ಜಿಲ್ಲೆಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಬಸವರಾಜ ದೇಶಮುಖ, ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಎಚ್ಚರಿಸಿದ್ದಾರೆ.

‘ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಏಮ್ಸ್ ಸ್ಥಾಪನೆ, ಹೆದ್ದಾರಿಗಳ ಅಭಿವೃದ್ಧಿ, ವಿಮಾನಯಾನ ಕ್ಷೇತ್ರದ ಅಭಿವೃದ್ಧಿ, ಕಲಬುರಗಿ 2ನೇ ರಿಂಗ್‌ರೋಡ್‌ ನಿರ್ಮಾಣ, ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸೇರಿದಂತೆ, ಕೇಂದ್ರ ಸರ್ಕಾರ ಏಳು ಜಿಲ್ಲೆಗಳಿಗೆ ಈಗಾಗಲೇ ಘೋಷಿಸಿರುವ ಅನೇಕ ಯೋಜನೆಗಳು ದಶಕದಿಂದ ನನೆಗುದಿಗೆ ಬಿದ್ದಿವೆ. ನಿರಂತರ ಮಲತಾಯಿ ಧೋರಣೆ ಮಾಡುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದ್ದಾರೆ.

‘ಫಜಲ್ ಅಲಿ ವರದಿ, ಸರೀನ್ ಸಮಿತಿ ವರದಿ, ಬಚಾವತ್ ವರದಿ, ಬ್ರಿಜೇಶ್ ವರದಿ, ನಂಜುಂಡಪ್ಪ ವರದಿ ಹೀಗೆ ಸರ್ಕಾರದ ಅಧಿಕೃತ ವರದಿಗಳ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಗಾಳಿಗೆ ತೂರಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರಾಜಾರೋಷವಾಗಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ದೇಶದ ಬೇರೆ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಯಾವ ಮಾನದಂಡಗಳೂ ಇರಲ್ಲ. ಆದರೆ, ಕಲ್ಯಾಣ ಕರ್ನಾಟಕದ ಬೀದರ್‌, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯನಗರ, ಬಳ್ಳಾರಿ ಜಿಲ್ಲೆಗಳಿಗೆ ಕೇಂದ್ರದ ಯೋಜನೆಗಳು ಸ್ಥಾಪನೆ ಪ್ರಶ್ನೆ ಬಂದಾಗ ಮಾನದಂಡಗಳು ಹೇರಲಾಗುತ್ತದೆ. ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ತಂತ್ರ ಅನುಸರಿಸುತ್ತಿದೆ’ ಎಂದು ದೂರಿದ್ದಾರೆ.

ADVERTISEMENT

‘ಕೇಂದ್ರ ಸರ್ಕಾರ ನಮ್ಮ ಪ್ರದೇಶದ ಬೇಡಿಕೆಗಳ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸದಿದ್ದರೆ, ಈ ಹಿಂದೆ ನಿರ್ಣಯಿಸಿದಂತೆ ಬರುವ ದಿನಗಳಲ್ಲಿ ಏಳೂ ಜಿಲ್ಲೆಗಳಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡು ಜಾಗೃತಿ ಅಭಿಯಾನ ನಡೆಸಿ, ಉಗ್ರ ಹೋರಾಟಕ್ಕೆ ಅಡಿಪಾಯ ಹಾಕಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.