ADVERTISEMENT

ಕಲಬುರಗಿ | ಬಿ.ಇಡಿ. ಫಲಿತಾಂಶ ಪ್ರಕಟಣೆಗೆ ಆಗ್ರಹ: ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 8:22 IST
Last Updated 31 ಅಕ್ಟೋಬರ್ 2025, 8:22 IST
<div class="paragraphs"><p>ಹತ್ತು ತಿಂಗಳ ಹಿಂದೆ ನಡೆದ ಬಿ.ಇಡಿ. ಪರೀಕ್ಷೆ ಫಲಿತಾಂಶವನ್ನು ತಕ್ಷಣ ಪ್ರಕಟಿಸುವಂತೆ ಒತ್ತಾಯಿಸಿ ‌ಬಿ.ಇಡಿ. ವಿದ್ಯಾರ್ಥಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಲಬುರಗಿಯ ಎಸ್‌ವಿಪಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು&nbsp;&nbsp;</p></div>

ಹತ್ತು ತಿಂಗಳ ಹಿಂದೆ ನಡೆದ ಬಿ.ಇಡಿ. ಪರೀಕ್ಷೆ ಫಲಿತಾಂಶವನ್ನು ತಕ್ಷಣ ಪ್ರಕಟಿಸುವಂತೆ ಒತ್ತಾಯಿಸಿ ‌ಬಿ.ಇಡಿ. ವಿದ್ಯಾರ್ಥಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಲಬುರಗಿಯ ಎಸ್‌ವಿಪಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು  

   

ಪ್ರಜಾವಾಣಿ ಚಿತ್ರ

ಕಲಬುರಗಿ: ಬಿ.ಇಡಿ. ಪರೀಕ್ಷೆ ನಡೆದು ಹತ್ತು ತಿಂಗಳಾದರೂ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲು ಗುಲಬರ್ಗಾ ವಿಶ್ವವಿದ್ಯಾಲಯ ಮೊಂಡಾಟ ಮಾಡುತ್ತಿದೆ ಎಂದು ಆರೋಪಿಸಿ ಬಿ.ಇಡಿ. ವಿದ್ಯಾರ್ಥಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಗುರುವಾರ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ADVERTISEMENT

ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಸ್ಥಳಕ್ಕೆ ಕುಲಪತಿ ಬರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ಮಧ್ಯಾಹ್ನದ ವೇಳೆಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದ ಗುಲಬರ್ಗಾ ವಿ.ವಿ. ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಜಿ.ಕಣ್ಣೂರ ಅವರು, ‘ಬಿ.ಇಡಿ. ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿರುವುದರಿಂದ ತನಿಖಾ ವರದಿ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು’ ಎಂದರು. ಇದರಿಂದ ತೃಪ್ತರಾಗದ ವಿದ್ಯಾರ್ಥಿಗಳು ಕುಲಪತಿ ಬರಬೇಕು ಎಂದು ಒತ್ತಾಯಿಸಿ ಧರಣಿ ಮುಂದುವರೆಸಿದರು. ಅಂತಿಮವಾಗಿ ಕಣ್ಣೂರ ಅವರು ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿಸಿದರು. ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಕುಲಪತಿ, ನವೆಂಬರ್ 6ರಂದು ನಿವೃತ್ತ ನ್ಯಾಯಮೂರ್ತಿ ಅವರು ಗುಲಬರ್ಗಾ ವಿ.ವಿ.ಗೆ ಬರಲಿದ್ದು, ಅಂದು ಅವರಿಗೆ ಭೇಟಿ ಮಾಡಿಸುವುದಾಗಿ ಭರವಸೆ ನೀಡಿದರು. ಆ ಬಳಿಕ ಧರಣಿ ಕೈಬಿಟ್ಟರು.

ಬೆಳಿಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಮಾವೇಶಗೊಂಡ ವಿದ್ಯಾರ್ಥಿಗಳು ವಿಳಂಬ ಮಾಡದೇ ಬಿ.ಇಡಿ. ಪರೀಕ್ಷಾ ಫಲಿತಾಂಶ ಪ್ರಕಟಿಸಬೇಕು. ಎಲ್ಲ ಸೆಮಿಸ್ಟರ್‌ಗಳ ಮೂಲ ಅಂಕ‍ಪಟ್ಟಿ ವಿತರಿಸಬೇಕು. ಘಟಿಕೋತ್ಸವ ಪ್ರಮಾಣಪತ್ರ ನೀಡಬೇಕು. ಬಿ.ಇಡಿ. ಪರೀಕ್ಷಾ ಶುಲ್ಕ (ಎಲಿಜಿಬಿಲಿಟಿ ಫೀ) ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ಮಾನವ ಸರಪಳಿ ನಿರ್ಮಿಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿ ಸಂಚಾಲಕ ತೇಜಸ್ ಆರ್. ಇಬ್ರಾಹಿಂಪುರ, ‘ಕಳೆದ ಜೂನ್ 15ರಂದು ವಿಶ್ವವಿದ್ಯಾಲಯದ ಕಾರ್ಯಸೌಧದ ಎದುರು ಹೋರಾಟ ಮಾಡಿ ಮನವಿ ಸಲ್ಲಿಸಲಾಗಿತ್ತು. ಅಂದು ಕುಲಪತಿ ಹಾಗೂ ಕುಲಸಚಿವರು ತಿಂಗಳ ಒಳಗಾಗಿ ಫಲಿತಾಂಶ ಪ್ರಕಟಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಐದು ತಿಂಗಳಾದರೂ ಫಲಿತಾಂಶ ಪ್ರಕಟಿಸಿಲ್ಲ. ಈಗಾಗಲೇ ಕರ್ನಾಟಕ ಸರ್ಕಾರವು ಶಿಕ್ಷಕರ ಅರ್ಹತಾ ಪರೀಕ್ಷೆ ಅರ್ಜಿ ಸಲ್ಲಿಕೆ ಪ್ರಾರಂಭಿಸಿದ್ದು, ಫಲಿತಾಂಶ ಘೋಷಣೆ ವಿಳಂಬ ನೀತಿಯಿಂದಾಗಿ ಅನರ್ಹ ಶಿಕ್ಷಕರಾಗಿ ಉಳಿದಿದ್ದಾರೆ. ಭವಿಷ್ಯದಲ್ಲಿ ಕರ್ನಾಟಕ ಸರ್ಕಾರವು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವ ನಿರೀಕ್ಷೆ ಇದೆ. ಅಷ್ಟರಲ್ಲಿ ಫಲಿತಾಂಶ ಬಾರದೇ ಇದ್ದರೆ ಬಿ.ಇಡಿ. ವೃತ್ತಿ ಶಿಕ್ಷಣ ಪಡೆದು ಶಿಕ್ಷಕರಾಗುವ ಆಕಾಂಕ್ಷೆ ಹೊತ್ತಿರುವ ಸಾವಿರಾರು ಪ್ರಶಿಕ್ಷಣಾರ್ಥಿಗಳ ಭವಿಷ್ಯ ನುಚ್ಚು ನೂರಾಗುವುದರಲ್ಲಿ ಸಂಶಯವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಸದಸ್ಯರಾದ ಸಂತೋಷಕುಮಾರ್ ಎಸ್.ಪಿ., ರಮೇಶ ದೇವಕರ್, ಪ್ರಭಾಕರ ಚಿಂಚೋಳಿ, ಅಣವೀರಗೌಡ ಬಿರಾದಾರ, ಗಣೇಶ ಜಾಧವ್, ರವಿಚಂದ್ರ, ಪೂಜಾ, ವಿವೇಕ ಹಿರೇಮಠ, ಸಚಿನ್, ವೀರೇಶ್, ಖಾಸಿಂ, ಪ್ರಭಾಕರ್ ಇತರರು ಭಾಗವಹಿಸಿದ್ದರು.

10 ತಿಂಗಳಾದರೂ ಬಿ.ಇಡಿ. ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸದ ಗುಲಬರ್ಗಾ ವಿಶ್ವವಿದ್ಯಾಲಯದ ಕ್ರಮ ನಾಚಿಕೆಗೇಡು. ವಿ.ವಿ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವುದನ್ನು ಬಿಟ್ಟು ಫಲಿತಾಂಶ ಪ್ರಕಟಿಸಬೇಕು
ರಕ್ಷಿತಾ ಬಿ.ಇಡಿ. ವಿದ್ಯಾರ್ಥಿನಿ
ವಿಶ್ವವಿದ್ಯಾಲಯವು ಕಾಲಮಿತಿಯಲ್ಲಿ ಬಿ.ಇಡಿ. ಪರೀಕ್ಷಾ ಅಕ್ರಮದ ತನಿಖೆಯನ್ನು ಮುಗಿಸಿ ಫಲಿತಾಂಶ ಪ್ರಕಟಿಸಬೇಕು. ಪರೀಕ್ಷಾ ಫಲಿತಾಂಶ ಪ್ರಕಟಣೆ ಹಾಗೂ ಅಂಕಪಟ್ಟಿ ಮುದ್ರಣಕ್ಕೆ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು
ಜಗನ್ನಾಥ ಎಚ್.ಎಸ್. ವಿದ್ಯಾರ್ಥಿ ಹೋರಾಟ ಸಮಿತಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.