ADVERTISEMENT

ಕಲಬುರಗಿ: ಕಮಲಾಪುರ ತಾಲೂಕಿಗೆ ಬಂತು ಬಿಇಒ ಕಚೇರಿ

ಡಯಟ್ ಕಟ್ಟಡದಲ್ಲಿ ಏ.25ರಿಂದ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 5:32 IST
Last Updated 17 ಏಪ್ರಿಲ್ 2025, 5:32 IST
<div class="paragraphs"><p><strong>ಬಸವರಾಜ ಮತ್ತಿಮಡು</strong></p></div>

ಬಸವರಾಜ ಮತ್ತಿಮಡು

   

ಕಮಲಾಪುರ: ಕಂದಾಯ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದ್ದರಿಂದ ಕಮಲಾಪುರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆರಂಭಿಸುವಂತೆ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ಹೆಚ್ಚುವರಿ ಆಯುಕ್ತ ಡಾ.ಆಕಾಶ್‌ ಎಸ್. ಅವರು ಏ. 15ರಂದು ಆದೇಶ ಹೊರಡಿಸಿದ್ದಾರೆ.

ಕಮಲಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯನ್ನು ಕಳೆದೆರಡು ತಿಂಗಳ ಹಿಂದೆ ಕಲಬುರಗಿಯ ಪ್ರಾತ್ಯಕ್ಷಿಕ ಪ್ರೌಢಶಾಲೆಗೆ ಸ್ಥಳಾಂತರಿಸಲಾಗಿದೆ. ಇದರಿಂದ ಕಮಲಾಪುರದಲ್ಲಿದ್ದ ಸುಸಜ್ಜಿತ ಕಟ್ಟಡ ಬಳಕೆಯಾಗದೇ ಉಳಿದಿತ್ತು. ಕಟ್ಟಡದ ಸುಸ್ಥಿತಿ ಕಾಪಾಡುವುದರ ಜೊತೆಗೆ ಕಂದಾಯ ತಾಲ್ಲೂಕು ರಚನೆಗೊಂಡಿರುವ ಕಮಲಾಪುರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಅವಶ್ಯಕತೆ ಮನಗಂಡು ಈ ಆದೇಶ ಹೊರಡಿಸಲಾಗಿದೆ.

ADVERTISEMENT

ಕಮಲಾಪುರ ತಾಲ್ಲೂಕು ವ್ಯಾಪ್ತಿಯ ಎಲ್ಲ ಸಿಆರ್‌ಸಿ ವಲಯಗಳು ಒಳಗೊಂಡು ಈ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸಲಿದೆ.

ಸದ್ಯ ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯನ್ನೇ ಕಮಲಾಪುರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾರ ವಹಿಸಲು ಆದೇಶಿಸಿದೆ. ಜೊತೆಗೆ ಉತ್ತರ ವಲಯ ಕಚೇರಿಯಲ್ಲಿನ ಕೆಲ ಸಿಬ್ಬಂದಿಯನ್ನೇ ಕಮಲಾಪುರ ಕಚೇರಿಗೆ ನಿಯೋಜಿಸಲು ಸೂಚಿಸಲಾಗಿದೆ.

ಕಟ್ಟಡ ಹಸ್ತಾಂತರಿಸುವಂತೆ ಡಯಟ್ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.

ಈ ನೂತನ ಕಚೇರಿಗೆ ಬೇಕಾಗುವ ಕಾಯಂ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಹುದ್ದೆ ಸ್ಥಳಾಂತರದ ಮೂಲಕ ಒದಗಿಸಬಹುದೆಂದು ಶಾಲಾ ಶಿಕ್ಷಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರೆಗೆ ಮನವರಿಕೆ ಮಾಡಿದ್ದಲ್ಲದೆ ಈ ಕುರಿತು ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಏ. 25ರಂದೇ ಬಿಇಒ ಕಚೇರಿ ಕಾರ್ಯಾರಂಭ ಮಾಡುವಂತೆ ಸೂಚಿಸಿ ದ್ದಾರೆ. ಉತ್ತರ ವಲಯದಿಂದ ಬೇರ್ಪಟ್ಟ ಕಮಲಾಪುರ ತಾಲ್ಲೂಕಿನ 9 ಸಿಆರ್‌ಸಿ ವಲಯಗಳು ಮಾತ್ರ ಈ ಕಚೇರಿ ವ್ಯಾಪ್ತಿಗೆ ಬರುತ್ತವೆ ಎಂದು ಹೇಳಲಾಗುತ್ತಿದೆ. ಕಮಲಾಪುರ ಕಂದಾಯ ತಾಲ್ಲೂಕಿಗೆ ಒಳಪಟ್ಟ ಎಲ್ಲ ಸಿಆರ್‌ಸಿ ವಲಯಗಳನ್ನು ಒಳಗೊಳ್ಳುವಂತೆ ನೂತನ ಕಚೇರಿ ಕಾರ್ಯನಿರ್ವಹಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆಳಂದ ತಾಲ್ಲೂಕಿನ 4, ಚಿಂಚೋಳಿ ತಾಲ್ಲೂಕಿನ ಚೇಂಗಟಾ, ಚಿತ್ತಾಪುರ ತಾಲ್ಲೂಕಿನ ಅರಣಕಲ್ ಸಿಆರ್‌ಸಿ ವಲಯಗಳು ಸೇರ್ಪಡೆಯಾದರೆ 15 ಸಿಆರ್‌ಸಿ ವಲಯಗಳಾಗಲಿವೆ.

ಕಮಲಾಪುರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಒತ್ತಡ ಹೇರಲಾಗಿತ್ತು ಈಗ ಫಲ ನೀಡಿದೆ. ಅಗತ್ಯ ಸೌಕರ್ಯ ಒದಗಿಸಲಾಗುವುದು.
ಬಸವರಾಜ ಮತ್ತಿಮಡು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.