ಭಾಲ್ಕಿ: ಪ್ರಶಾಂತ ವಾತಾವರಣ, ಸದಾ ಹಸಿರು, ಹಕ್ಕಿಗಳ ಚಿಲಿಪಿಲಿ, ಕೆರೆಯ ನಯನ ಮನೋಹರ ದೃಶ್ಯ...
ತಾಲ್ಲೂಕು ಕೇಂದ್ರದಿಂದ 20 ಕಿ.ಮೀ, ಖಟಕಚಿಂಚೋಳಿ ಗ್ರಾಮದಿಂದ 1 ಕಿ.ಮೀ ದೂರದ ಬೆಟ್ಟದಲ್ಲಿರುವ ಶಾಂತಲಿಂಗೇಶ್ವರ ಮಠ, ದೇವಸ್ಥಾನದ ವಿಶೇಷತೆಗಳಿವು.
ಈ ಪವಿತ್ರ ತಾಣಕ್ಕೆ ನಿತ್ಯ ನೂರಾರು ಭಕ್ತರು ಬಂದು ಶಾಂತಲಿಂಗೇಶ್ವರರ ದರ್ಶನ ಪಡೆದು ನಿಸರ್ಗ ರಮಣೀಯ ತಾಣದಲ್ಲಿ ಕಾಲ ಕಳೆದು ಬದುಕನ್ನು ಆನಂದಮಯವಾಗಿಸಿಕೊಳ್ಳುತ್ತಾರೆ. ಶ್ರಾವಣ ಮಾಸದ 3ನೇ ಸೋಮವಾರ ನಡೆಯುವ ಶಾಂತಲಿಂಗೇಶ್ವರರ ಜಾತ್ರಾ ಮಹೋತ್ಸವದಂದು ದೇವಸ್ಥಾನಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ದೇವಸ್ಥಾನದ ಹಿನ್ನೆಲೆ: ಹಿಂದಿನ ಕಾಲದಲ್ಲಿ ದೇವಸ್ಥಾನ ಪ್ರದೇಶ ದಟ್ಟವಾದ ಕಾಡಿನಿಂದ ಕೂಡಿತ್ತು. ಇಲ್ಲಿ ಹುಲಿ ವಾಸಿಸುತ್ತಿತ್ತು. ಅದು ನೀರು ಕುಡಿಯಲು ಈ ಸ್ಥಳಕ್ಕೆ ಬರುತ್ತಿತ್ತು. ಹಾಗಾಗಿ ಈ ಸ್ಥಳವನ್ನು ‘ಹುಲಿಕುಂಟಿ’ ಎಂದು ಕರೆಯಲಾಗುತ್ತದೆ ಎನ್ನುವ ಪ್ರತೀತಿ ಇದೆ.
‘ಗುಡ್ಡಗಾಡಿನ ಮಧ್ಯ ನೆಲೆಸಿರುವ ಶಾಂತಲಿಂಗೇಶ್ವರರು ಭಕ್ತರ ಇಷ್ಟಾರ್ಥ ಪೂರೈಸುವ ಕಲ್ಪವೃಕ್ಷ ಎಂಬುದು ಮನೆ ಮಾತಾಗಿದೆ. ದೇವಾಲಯದ ಮುಂಭಾಗದಲ್ಲಿನ ಸದಾ ತುಂಬಿ ತುಳುಕುವ ಸುಂದರವಾದ ಕೆರೆ, ತುಪ್ಪದ ಬಾವಿ ಭಕ್ತರ ದಾಹ ತಣಿಸುತ್ತಿವೆ’ ಎಂದು ಮಠದ ಕಾರ್ಯದರ್ಶಿ ಓಂಕಾರ ಬೆನಚಿಂಚೋಳೆ, ಪೂಜಾರಿ ಶಿವಕುಮಾರ ಸ್ವಾಮಿ, ಹಿರಿಯರಾದ ಶಾಂತಪ್ಪ ಕಡಗಂಚಿ, ಧೂಳಪ್ಪ ಬನ್ನಾಳೆ ಹಾಗೂ ಶಿವಕುಮಾರ ಪರ್ವತಮಠ ತಿಳಿಸಿದರು.
‘ಈ ಪುಣ್ಯ ಕ್ಷೇತ್ರದಲ್ಲಿ ಮಾಣಿಕ ಪ್ರಭು, ರೇವಣಸಿದ್ದೇಶ್ವರರು ಸೇರಿದಂತೆ ಅನೇಕ ಮಹಾತ್ಮರು ತಪಸ್ಸು ಮಾಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಪುರಾತನ ಬಾವಿ ಇದೆ. ಜಾತ್ರೆ ಸಂದರ್ಭದಲ್ಲಿ ಊಟಕ್ಕೆ ಕುಳಿತ ಭಕ್ತರಿಗೆ ತುಪ್ಪ ಕಡಿಮೆ ಬಿದ್ದಾಗ ಶಾಂತಲಿಂಗೇಶ್ವರರು ಪವಾಡ ಮಾಡಿ ನೀರನ್ನು ತುಪ್ಪವಾಗಿ ಪರಿವರ್ತಿಸಿ ಭಕ್ತರಿಗೆ ಉಣ ಬಡಿಸಿದರು ಎಂಬ ಪ್ರತೀತಿ ಇದೆ’ ಎನ್ನುತ್ತಾರೆ ಭಕ್ತರಾದ ವೀರಶೆಟ್ಟಿ ಕಲ್ಲಾ, ಸುರೇಶ ಭೂರಕೆ ಹಾಗೂ ಸುರೇಶ ಅಲ್ಲೂರೆ.
ಶಾಂತಲಿಂಗೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ರಥೋತ್ಸವ ಅದ್ಧೂರಿಯಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೊರ ರಾಜ್ಯಗಳಿಂದಲೂ ಭಕ್ತರು ಅಪಾರ ಸಂಖ್ಯೆಯಲ್ಲಿ ಬರುತ್ತಾರೆಶಿವಾನಂದ ಸ್ವಾಮೀಜಿ ಶಾಂತಲಿಂಗೇಶ್ವರ ಮಠದ ಪೀಠಾಧಿಪತಿ
ದೇವಸ್ಥಾನ ಮುಂಭಾಗದ ಕೆರೆಯಲ್ಲಿ ಹೂಳು ತುಂಬಿದೆ. ಸುತ್ತ ಮುಳ್ಳು ಗಿಡ–ಗಂಟಿಗಳು ಬೆಳೆದಿವೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಕೆರೆಯ ಜಿರ್ಣೋದ್ಧಾರ ಉದ್ಯಾನ ನಿರ್ಮಾಣಕ್ಕೆ ಮುಂದಾಗಿ ಈ ಸ್ಥಳವನ್ನು ಪ್ರವಾಸ ತಾಣವನ್ನಾಗಿ ಮಾಡಬೇಕುರೇವಣಸಿದ್ದ ಜಾಡರ್ ಗ್ರಾಮದ ಪ್ರಮುಖ
ರಥೋತ್ಸವ
ಶ್ರಾವಣ ಮಾಸದ ಮೂರನೇ ಸೋಮವಾರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಇಡೀ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಶಾಂತಲಿಂಗೇಶ್ವರ ಗದ್ದುಗೆಗೆ ಬಿಲ್ವಾರ್ಚನೆ ವಿಶೇಷ ಪೂಜೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ನಂತರ ಕುಸ್ತಿ ಸ್ಪರ್ಧೆ ಸೇರಿ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ. ಆ.11ರಂದು ಸಂಜೆ 4ಕ್ಕೆ ರಥೋತ್ಸವ ಜರುಗಲಿದೆ. ಸೊಲ್ಲಾಪುರದ ಸ್ವಾಮಿನಾಥ ಸ್ವಾಮೀಜಿ ರಟಕಲ್‌ನ ನೀಲಕಂಠ ದೇವರು ಠಾಣಾಕುಶನೂರಿನ ಸಿದ್ದಲಿಂಗ ಸ್ವಾಮೀಜಿ ಸಾಯಗಾಂವದ ಶಿವಾನಂದ ಸ್ವಾಮೀಜಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಸದ ಸಾಗರ್ ಖಂಡ್ರೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಭಾಗಿಯಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.