ADVERTISEMENT

ಪ್ರವಾಹ ಪೀಡಿತ ಕಲಬುರಗಿ, ಯಾದಗಿರಿಗೆ ಸಿಎಂ ಅಥವಾ ಕಂದಾಯ ಸಚಿವರು ಭೇಟಿ: ದರ್ಶನಾಪುರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 6:18 IST
Last Updated 28 ಸೆಪ್ಟೆಂಬರ್ 2025, 6:18 IST
   

ಯಾದಗಿರಿ: 'ಭೀಮಾ ನದಿ‌ ಪ್ರವಾಹಕ್ಕೆ ಒಳಗಾಗಿರುವ ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಮುಖ್ಯಮಂತ್ರಿ ಅಥವಾ ಕಂದಾಯ ಸಚಿವರು ಭೇಟಿ ನೀಡುವರು' ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಯಾದಗಿರಿಯಲ್ಲಿ ಭಾನುವಾರ ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಯನ್ನು ಆಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ಫೋನ್ ಮಾಡಿ ಪ್ರವಾಹದ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಾಳೆ (ಸೋಮವಾರ) ಮುಖ್ಯಮಂತ್ರಿಯಾಗಲಿ ಅಥವಾ ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಗಲಿ ಭೇಟಿ ನೀಡಿ ಪರಿಶೀಲನೆ ನಡೆಸುವರು. ಕಂದಾಯ ಸಚಿವರಿಗೆ ಇವತ್ತೇ ಹೋಗುವಂತೆ ಸಿಎಂ ಅವರು ಹೇಳಿದ್ದರು. ನಾಳೆ ಬರುವುದಾಗಿ ಹೇಳಿದ್ದಾರೆ. ಕಂದಾಯ ಸಚಿವರು ಬಾರದೆ ಇದ್ದರೆ ಮುಖ್ಯಮಂತ್ರಿಗಳು ಬರುವುದಾಗಿ ಹೇಳಿದ್ದಾರೆ. ಸಿಎಂ, ಕಂದಾಯ ಸಚಿವರು ಬರುವುದು ನಮಗೂ ಮಹತ್ವದಾಗಿದೆ' ಎಂದರು.

ADVERTISEMENT

'ಪ್ರವಾಹದ ಬಗ್ಗೆ ನಿತ್ಯ ಸಿಎಂಗೆ ಮಾಹಿತಿ ಇದೆ. ಕಲಬುರಗಿಗೂ ಭೇಟಿ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಮನವಿ ಮಾಡಿದ್ದಾರೆ. ನಾನೂ ಕೂಡ ಮನವಿ ಮಾಡಿದ್ದೇನೆ' ಎಂದರು.

'ಯಾವುದೇ ಸರ್ಕಾರ ಇರಲಿ ಇಂತಹ ಸಂದರ್ಭದಲ್ಲಿ ಜನರ ಜೊತೆಗೆ ಇರಬೇಕಾಗುತ್ತದೆ. ವಿರೋಧ ಪಕ್ಷವಾದರೂ ಜನರ ಪರವಾಗಿ ಕೆಲಸ ಮಾಡಬೇಕಾಗುತ್ತದೆ. ಸಂಘ- ಸಂಸ್ಥೆಗಳು ಜನರ ಪರವಾಗಿ ನಿಂತಿವೆ. ಬೆಳೆಹಾನಿ ಸಂಪೂರ್ಣ ಮಾಹಿತಿ ಸರ್ಕಾರಕ್ಕೆ ಹೋಗಬೇಕು. ಎನ್‌ಡಿಆರ್ ನಿಯಮ ಪ್ರಕಾರ ಪರಿಹಾರ ಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಜವಾಬ್ದಾರಿ ಆಗುತ್ತವೆ' ಎಂದು ಹೇಳಿದರು.

'ಪ್ರವಾಹಕ್ಕೆ ಒಳಗಾದ ತಳಕ, ರೋಜಾ ಗ್ರಾಮಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಪರಿಸ್ಥಿತಿ ಇದ್ದರೂ ಸರಿಯಾದ ವ್ಯವಸ್ಥೆ ಮಾಡುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಬೆಳಹಾನಿಯಿಂದ ಬಹಳಷ್ಟು ಹಾನಿಯಾಗಿದ್ದು, ಜಾನುವಾರು ಕೂಡ ಸಾವನ್ನಪ್ಪಿದರ ವರದಿಯಾಗಿದೆ. ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗಿದ್ದು, ಮತ್ತೊಮ್ಮೆ ಬೆಳೆಹಾನಿಯ ಸಮೀಕ್ಷೆ ಮಾಡಲಾಗುವುದು' ಎಂದರು.

ಈ ವೇಳೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಎಸ್‌ಪಿ ಪೃಥ್ವಿಕ್ ಶಂಕರ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.