
ಅಫಜಲಪುರ: ‘ಕಲಬುರಗಿ, ಬೀದರ್, ಯಾದಗಿರಿ ಮೂರು ಜಿಲ್ಲೆಗಳಲ್ಲಿ ನೀರಾವರಿ ಕಾಲುವೆಗಳ ಬಗ್ಗೆ ಅಧ್ಯಯನ ಮಾಡಲು ಪಾದಯಾತ್ರೆ ಮಾಡಲಾಗುತ್ತಿದೆ. ಜ.1 ರಂದು ಆರಂಭವಾಗಿದ್ದು, ಮಾರ್ಚ್ 30ರವರೆಗೆ ಪಾದಯಾತ್ರೆ ನಡೆಯಲಿದೆ. ಈ ಮೂರು ಜಿಲ್ಲೆಗಳ ಸುಮಾರು 11 ನೀರಾವರಿ ಕಾಮಗಾರಿಗಳನ್ನು ಪರಿಶೀಲಿಸಿ ವರದಿ ತಯಾರಿಸಲಾಗುವುದು’ ಎಂದು ಚಿಂಚೋಳಿ ತಾಲ್ಲೂಕು ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ತಿಳಿಸಿದರು.
ಭೀಮಾ ಮಿಷನ್ ಅಡಿಯಲ್ಲಿ ಬರುವ ಮುಖ್ಯ ಕಾಲುವೆ ಬಗ್ಗೆ ಅಧ್ಯಯನಕ್ಕಾಗಿ ಕಲಬುರಗಿ, ಬೀದರ್, ಯಾದಗಿರಿ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಗುರುವಾರ ಭೀಮಾ ಏತನೀರಾವರಿ ಬಳ್ಳುಂಡಗಿ ಜಾಕ್‌ವೆಲ್ ಹತ್ತಿರದಿಂದ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪಾದಯಾತ್ರೆಯು ಚಿತ್ತಾಪುರದ ಬೆಣ್ಣೆ ತೊರೆ ಯೋಜನೆ ಅಣೆಕಟ್ಟು ಹತ್ತಿರ ಮುಕ್ತಾಯಗೊಳ್ಳಲಿದೆ. ಇನ್ನು ಎಲ್ಲಾ ನೀರಾವರಿ ಯೋಜನೆಗಳು ಪೂರ್ಣಗೊಳಿಸಬೇಕು, ಕಾಲುವೆಗಳು ಸ್ವಚ್ಛಗೊಳಿಸಬೇಕು, ನೀರಿನ ಸಂಗ್ರಹ ಪೂರ್ಣ ಬಳಕೆಯಾಗಬೇಕು, ಕಾಲುವೆಗಳ ವಿನ್ಯಾಸ ದೋಷ ತಿದ್ದುಪಡಿ ಮಾಡಬೇಕು ಹಾಗೂ ಅಪೂರ್ಣವಾಗಿರುವ 11 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಮುಖ್ಯ ಕಾಲುವೆಗಳು, ವಿತರಣಾ ಕಾಲುವೆಗಳು, ಹೊಲ ಕಾಲುವೆಗಳು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದರಿಂದ ನೀರು ಹರಿದು ಹೋಗುತ್ತಿಲ್ಲ ಅವುಗಳನ್ನು ಸರಿಪಡಿಸಬೇಕು’ ಎಂದು
ತಿಳಿಸಿದರು.
ಪಾದಯಾತ್ರೆಯಲ್ಲಿ ಹೋರಾಟ ಸಮಿತಿ ಮುಖಂಡರಾದ ಗಿರೀಶಗೌಡ ಇನಾಮದಾರ, ಪ್ರೊ.ಬಸವರಾಜ್ ಕುನುರ, ಮಲ್ಲಿಕಾರ್ಜುನ ಹುಳಗೇರಾ, ಆಧಿನಾಥ ಹಿರಾ ಇತರರು ಭಾಗಿಯಾಗಿದ್ದರು. ತಾಲ್ಲೂಕು ಭೀಮಾ ಏತ ನೀರಾವರಿ ಉಪ ವಿಭಾಗದ ಇಇ ಶಿವುಕುಮಾರ ಸ್ವಾಮಿ, ಎಇಇ ಸುಧೀರ್ ಸಂಗಾಣಿ, ಸಂತೋಷ ಪಾಟೀಲ, ಸಾಯಿಬಣ್ಣ, ಜಾಕ್‌ವೆಲ್ ಸಿಬ್ಬಂದಿ ಇದ್ದರು.
ಮೂರು ಉದ್ದೇಶ ಮೂರು ತಿಂಗಳು ಪಾದಯಾತ್ರೆ
‘ಕಾಲುವೆ ಪೂರ್ಣಗೊಳಿಸಬೇಕು ನೀರು ಹೊಲಕ್ಕೆ ಬರಬೇಕು ರೈತನ ಬದುಕು ಹೊಸನಾಗಬೇಕು ಎಂಬ ಮೂರು ಉದ್ದೇಶಗಳು ಪೂರ್ಣಗೊಳಿಸಲು ನಾವು ಮೂರು ಜಿಲ್ಲೆಗಳ 11 ನೀರಾವರಿ ಯೋಜನೆಗಳಿಗಾಗಿ ಮೂರು ತಿಂಗಳು ಪಾದಯಾತ್ರೆ ನಡೆಸುವ ಮುಖಾಂತರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವಿವರವಾದ ವರದಿಯನ್ನು ಸಲ್ಲಿಸುತ್ತೇವೆ. ಪಾದಯಾತ್ರೆಯ ಸಂದರ್ಭದಲ್ಲಿ ಜನಪ್ರತಿನಿಧಿಗಳ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಹಕಾರ ಮುಖ್ಯವಾಗಿದೆ’ ಎಂದು ಭೀಮಶೆಟ್ಟಿ ಮುಕ್ಕಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.