ಅಫಜಲಪುರ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಶುಕ್ರವಾರ ಭೀಮಾ ನದಿಗೆ ಬಿಟ್ಟಿದ್ದ 2.24 ಲಕ್ಷ ಕ್ಯೂಸೆಕ್ ನೀರು ಸೊನ್ನ ಜಲಾಶಯಕ್ಕೆ ಬಂದಿದ್ದು, 26 ಗೇಟ್‌ಗಳ ಮೂಲಕ 2.20 ಲಕ್ಷ ಕ್ಯೂಸೆಕ್ ನೀರನ್ನು ಶನಿವಾರ ನದಿ ಪಾತ್ರಕ್ಕೆ ಹರಿಸಲಾಗಿದೆ.
ಘತ್ತರಗಾ ಮತ್ತು ದೇವಲ ಗಾಣಗಾಪುರದ ಸೇತುವೆಗಳು ಜಲಾವೃತಗೊಂಡಿದ್ದು, ಎರಡು ದಿನಗಳಿಂದ ಸಂಚಾರ ಸ್ಥಗಿತಗೊಂಡಿದೆ ಎಂದು ಭೀಮಾ ಏತ ನೀರಾವರಿ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಂತೋಷಕುಮಾರ್ ಸಜ್ಜನ್ ಹಾಗೂ ತಹಶೀಲ್ದಾರ್ ಸಂಜುಕುಮಾರ್ ದಾಸರ್ ತಿಳಿಸಿದ್ದಾರೆ.
ಉಜನಿ ಜಲಾಶಯದ ಹೊರ ಹರಿವಿನ ಪ್ರಮಾಣ ಶನಿವಾರ 40 ಸಾವಿರ ಕ್ಯೂಸೆಕ್‌ಗೆ ತಗ್ಗಿದೆ. ಹೀಗಾಗಿ ಭಾನುವಾರ ಭೀಮಾ ನದಿಯಲ್ಲಿ ನೀರು ಕಡಿಮೆಯಾಗುವ ಸಂಭವವಿದೆ. ಸದ್ಯ ಭೀಮಾ ನದಿಯ ಎರಡು ದಂಡೆಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಸೇತುವೆಗಳ ಬಳಿ ಕಾವಲಿಗೆ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ.
ತಾಲ್ಲೂಕಿನ ಮಣ್ಣೂರು ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನ ಜಲಾವೃತವಾಗಿದ್ದು, ಎರಡು ದಿನಗಳಿಂದ ಭಕ್ತರಿಗೆ ದೇವರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಇಂಡಿ ತಾಲ್ಲೂಕಿನ ಗ್ರಾಮಗಳಿಗೆ ಸಂಚಾರ ಕಡಿತವಾಗಿದೆ.
ಘತ್ತರಗಾ ಗ್ರಾಮದ ಸೇತುವೆ ಮುಳುಗಡೆ ಹಿನ್ನೆಲೆ ಸಿಂದಗಿ ತಾಲ್ಲೂಕಿನ ಹಳ್ಳಿಗಳಿಗೆ ಸಂಪರ್ಕ, ದೇವಲ ಗಾಣಗಾಪುರ ಸೇತುವೆ ಮುಳುಗಡೆಯಿಂದ ಜೇವರ್ಗಿ ತಾಲ್ಲೂಕಿನ ಹಳ್ಳಿಗಳಿಗೆ ಸಂಪರ್ಕ ಕಡಿತವಾಗಿದೆ.
ಬೆನಕನ ಅಮಾವಾಸ್ಯೆ ಹಿನ್ನೆಲೆ ಶನಿವಾರ ಘತ್ತರಗಿ ಭಾಗ್ಯವಂತಿ ದೇವಸ್ಥಾನ ಹಾಗೂ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದರ್ಶನಕ್ಕೆ ಭಕ್ತರು ಚೌಡಾಪುರ, ಆನೂರು ಗ್ರಾಮದ ಮೂಲಕ ಬಂದರು.
ನದಿ ಪಾತ್ರ ಪ್ರದೇಶಗಳಲ್ಲಿ ಬೆಳೆಹಾನಿ: ಉಜನಿ ಜಲಾಶಯದಿಂದ 2.24 ಲಕ್ಷ ಕ್ಯೂಸೆಕ್ ನೀರು ಹೊರಬಿಟ್ಟ ಪರಿಣಾಮ, ನದಿ ಪಾತ್ರದಲ್ಲಿನ ತೊಗರಿ, ಹತ್ತಿ ಸಂಪೂರ್ಣ ಹಾಳಾಗಿದೆ. ಕಬ್ಬಿನ ಹೊಲಗಳಲ್ಲಿ ನೀರು ನಿಂತಿದೆ.
ನದಿ ನೀರಿನ ಮಟ್ಟ ಇಳಿದರೂ, ಒಂದು ವಾರಗಳ ಕಾಲ ಜಮೀನುಗಳಲ್ಲಿ ಸಂಚರಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ ಹಾಗೂ ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.