ADVERTISEMENT

ಕಲಬುರ್ಗಿ| ಹೆಚ್ಚುತ್ತಿರುವ ನೀರಿನ ಮಟ್ಟ: ಭೀತಿಯಲ್ಲಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 8:48 IST
Last Updated 19 ಅಕ್ಟೋಬರ್ 2020, 8:48 IST
   
""
""
""

ಕಲಬುರ್ಗಿ: ಸೊನ್ನ ಭೀಮಾ ಬ್ಯಾರೇಜಿನಿಂದ ಶನಿವಾರ ಮಧ್ಯಾಹ್ನದಿಂದ ಸತತವಾಗಿ 8.20 ಲಕ್ಷ ‌ಕ್ಯುಸೆಕ್ ನೀರನ್ನು ಹೊರಬಿಡುತ್ತಿರುವುದರಿಂದ ನದಿ ದಂಡೆಯ ಹಲವು ಗ್ರಾಮಗಳಲ್ಲಿ ‌ಕ್ಷಣಕ್ಷಣಕ್ಕೂ ನೀರಿನ ಮಟ್ಟ ‌ಹೆಚ್ಚುತ್ತಿದೆ.

ಕಲಬುರ್ಗಿ ತಾಲ್ಲೂಕಿನ ಸರಡಗಿ (ಬಿ), ಫಿರೋಜಾಬಾದ್, ಜೇವರ್ಗಿ ತಾಲ್ಲೂಕಿನ ರಾಸಣಗಿ, ಹಂದನೂರ, ಹರವಾಳ ಗ್ರಾಮಗಳಲ್ಲಿ ಹಲವು ಮನೆಗಳಿಗೆ ನೀರು ಹೊಕ್ಕಿದೆ.

ಮುಖ್ಯ ರಸ್ತೆಯಿಂದ ‌ಸರಡಗಿ ಗ್ರಾಮವನ್ನು ಸಂಪರ್ಕಿಸುವ ರಸ್ತೆ ‌ಭಾನುವಾರ ರಾತ್ರಿಯಿಂದಲೇ ಜಲಾವೃತವಾಗಿದೆ. ಹೀಗಾಗಿ ಗ್ರಾಮಸ್ಥರು ಮನೆಯ ಸಾಮಾನು, ಸರಂಜಾಮುಗಳನ್ನು ಟ್ರ್ಯಾಕ್ಟರ್ ನಲ್ಲಿ ಹೇರಿಕೊಂಡು ಬಯಲಿನ ‌ಹೊಲಗಳಿಗೆ ತೆರಳುತ್ತಿದ್ದಾರೆ.

ADVERTISEMENT

ಉಳಿದವರು ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಹರವಾಳ ಗ್ರಾಮದಲ್ಲಿ 100ಕ್ಕೂ ಅಧಿಕ ಮನೆಗಳು ಸಂಪೂರ್ಣ ‌ಮುಳುಗಿವೆ. ಹರಿಜನವಾಡಾ, ಮುಸ್ಲಿಂ ಸಮುದಾಯದ ಮನೆಗಳನ್ನು ನೀರು ಆವರಿಸಿಕೊಂಡಿದೆ. ಇಡೀ ಹರವಾಳ ಗ್ರಾಮ ‌ದ್ವೀಪದಂತಾಗಿದೆ.

ಕಲಬುರ್ಗಿಯಿಂದ ಕಟ್ಟಿ ಸಂಗಾವಿ ಸೇತುವೆ ಮೂಲಕ ಜೇವರ್ಗಿ, ವಿಜಯಪುರ ‌ಸಂಪರ್ಕಿಸುವ ಸೇತುವೆ ಕೆಳಭಾಗದಲ್ಲಿ ಭಾರಿ ಪ್ರಮಾಣದ ನೀರು ಹರಿದು ಹೋಗುತ್ತಿರುವುದರಿಂದ ಶನಿವಾರ ರಾತ್ರಿಯಿಂದಲೇ ಸೇತುವೆ ಮೇಲಿಂದ ‌ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಪರ್ಯಾಯ ಮಾರ್ಗವಾದ ಕೋನ ಹಿಪ್ಪರಗಾ ಸೇತುವೆ ಬಳಿಯ ಕಚ್ಚಾ ಹಾದಿಯ ಮೇಲೂ ‌ನೀರು ಬಂದಿರುವುದರಿಂದ ಯಾವುದೇ ಕ್ಷಣದಲ್ಲಿ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.