ADVERTISEMENT

‘ರಕ್ತದಾನದಿಂದ ಜೀವ ಉಳಿಸಲು ಸಾಧ್ಯ’

ಮಂಗಲಗಿ ಆರೋಗ್ಯ ಕೇಂದ್ರದಲ್ಲಿ 39 ಜನರಿಂದ ರಕ್ತದಾನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 2:41 IST
Last Updated 15 ನವೆಂಬರ್ 2020, 2:41 IST

ಕಾಳಗಿ: ‘ರಕ್ತದಾನದಿಂದ ಸಾವಿರಾರು ಜನರ ಜೀವ ಉಳಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು’ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ವಿವೇಕಾನಂದ ರೆಡ್ಡಿ ಹೇಳಿದರು.

ತಾಲ್ಲೂಕಿನ ಮಂಗಲಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

‘ಈ ಆರೋಗ್ಯ ಕೇಂದ್ರದಲ್ಲಿ ಇಲಾಖೆಯ ಪ್ರತಿಯೊಂದು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಇಲ್ಲಿನ ವೈದ್ಯರ ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆ ನೋಡಿದರೆ ರೋಗಿಗಳಿಗೆ ಇಲ್ಲಿ ಯಾವುದಕ್ಕೂ ಏನು ಕೊರತೆ ಇಲ್ಲ’ ಎಂದು ಆರೋಗ್ಯ ಕೇಂದ್ರದ ಕಾರ್ಯಕ್ಕೆ
ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಕುಷ್ಠರೋಗ ಕಾರ್ಯಕ್ರಮ ಅಧಿಕಾರಿ ಡಾ.ರಾಜಕುಮಾರ ಕುಲಕರ್ಣಿ ಮಾತನಾಡಿ, ‘ಆರೋಗ್ಯ ಇಲಾಖೆಯ ಮೇಲಧಿಕಾರಿಗಳು ಬಂದಾಗ ಜಿಲ್ಲೆಯ ಮಾದರಿ ಆರೋಗ್ಯ ಕೇಂದ್ರದ ವೀಕ್ಷಣೆಗಾಗಿ ಅವರನ್ನು ಅಫಜಲಪುರ ತಾಲ್ಲೂಕಿನ ಗೊಬ್ಬೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದೇವು. ಈಗ ಮಂಗಲಗಿ ಆರೋಗ್ಯ ಕೇಂದ್ರವೂ ಮಾದರಿಯಾಗಿ ನಿಂತಿದೆ’ ಎಂದು ಶ್ಲಾಘಿಸಿದರು.

ಜಿಮ್ಸ್ ರಕ್ತ ನಿಧಿ ವೈದ್ಯಾಧಿಕಾರಿ ಡಾ.ನಶೀರ್ ಅಹ್ಮದ್, ಜಿಲ್ಲಾ ಕುಷ್ಠರೋಗ ಮೇಲ್ವಿಚಾರಕ ಗಣಪತಿ, ಮಾಡಬೂಳ ಪ್ರಯೋಗಶಾಲೆ ಹಿರಿಯ ತಂತ್ರಜ್ಞ ಸಿರಾಜೋದ್ದಿನ್, ಬಶೀರ ಅಹ್ಮದ್, ರವಿಕುಮಾರ, ಆಪ್ತ ಸಮಾಲೋಚಕಿ ಸುಜ್ಞಾನಿ ಪಾಟೀಲ, ರೇಷ್ಮಾ, ಗೌರಿ, ವಿಜಯಲಕ್ಷ್ಮಿ, ಚಂದ್ರಕಾಂತ, ನಂದಕಿಶೋರ, ನಾಗಣ್ಣ ಕುಸ್ಮಕರ್ ಇದ್ದರು.

ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಕ್ ಕುಮಾರ ರಾಠೋಡ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಆರೋಗ್ಯ ಇಲಾಖೆ ಕಾರ್ಯಕರ್ತರು, ಪತ್ರಕರ್ತರು, ರಾಜಕೀಯ ವ್ಯಕ್ತಿಗಳು, ರೈತರು, ಯುವಕರು ಸೇರಿದಂತೆ ಒಟ್ಟು 39 ಜನರು ಸ್ವಯಂ ಪ್ರೇರಿತರಾಗಿ
ರಕ್ತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.