ADVERTISEMENT

ಕಲಬುರಗಿ: ಬಿ.ಎನ್. ಪಾಟೀಲ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 4:39 IST
Last Updated 10 ನವೆಂಬರ್ 2025, 4:39 IST
ಕಲಬುರಗಿಯ ದಿ ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿರುವ ಕಲಾವಿದ ಬಿ.ಎನ್.ಪಾಟೀಲ ಅವರ ಪ್ರಥಮ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಹಿರಿಯ ಕಲಾವಿದ ಜೆ.ಎಸ್.ಖಂಡೇರಾವ್, ಬಸವರಾಜ ಜಾನೆ ಇತರರು ವೀಕ್ಷಿಸಿದರು
ಕಲಬುರಗಿಯ ದಿ ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿರುವ ಕಲಾವಿದ ಬಿ.ಎನ್.ಪಾಟೀಲ ಅವರ ಪ್ರಥಮ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಹಿರಿಯ ಕಲಾವಿದ ಜೆ.ಎಸ್.ಖಂಡೇರಾವ್, ಬಸವರಾಜ ಜಾನೆ ಇತರರು ವೀಕ್ಷಿಸಿದರು   

ಕಲಬುರಗಿ: ‘ಕಲಾವಿದರು ರೇಖೆ, ಆಕಾರ, ಬಣ್ಣಗಳ ಮೂಲಕ ಕ್ಯಾನ್ವಾಸ್‌ ತುಂಬುವುದಲ್ಲ. ಪ್ರಮಾಣಬದ್ಧತೆ, ಲಾವಣ್ಯ ಯೋಜನೆ, ಸಾದೃಶ್ಯ ಇವೆಲ್ಲವುಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಕಲಾಕೃತಿ ರಚಿಸಬೇಕು. ಮುಖ್ಯವಾಗಿ ಕಲಾಕೃತಿಯಲ್ಲಿ ಮೌಲ್ಯಗಳಿರಬೇಕು’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಬಸವರಾಜ ಎಲ್.ಜಾನೆ ಹೇಳಿದರು.

ನಗರದ ಅಗ್ನಿಶಾಮಕ ದಳದ ಎದುರಿಗೆ ಇರುವ ಕಾಳೆ ಲೇಔಟ್‌ನ ದಿ ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲಾವಿದ ಬಿ.ಎನ್.ಪಾಟೀಲ ಅವರ ಪ್ರಥಮ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಲಾವಿದರು ತಮ್ಮ ಅನುಭವವನ್ನು ಕ್ಯಾನ್ವಾಸ್‌ ಮೇಲೆ ರೇಖೆ, ಆಕಾರ, ಬಣ್ಣಗಳಿಂದ ಅನುಭೂತಿಗೊಳಿಸುವ ಸಾಮರ್ಥ್ಯವಿರಬೇಕು. ಅಂದಾಗ ಮಾತ್ರ ಕಲಾಕೃತಿಗೆ ಮೌಲ್ಯ ಬರುತ್ತದೆ. ಅದೇ ದಾರಿಯಲ್ಲಿ ಬಿ.ಎನ್. ಪಾಟೀಲ ಸಾಗುತ್ತಿದ್ದಾರೆ’ ಎಂದರು.

ADVERTISEMENT

‘ಕಲಾಕೃತಿಗಳು ಇಂದು ಬಹಳಷ್ಟು ರಚನೆಯಾಗುತ್ತಿವೆ. ಆದರೆ, ಕಲಾಕೃತಿ ನೋಡಿ ತಿಳಿದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ, ಹಿರಿಯ ಕಲಾವಿದ ಜೆ.ಎಸ್.ಖಂಡೇರಾವ್ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಚ್.ಬೆಳಮಗಿ ಮಾತನಾಡಿ, ‘ಸಾಧನೆ ಒಂದು ಅಥವಾ ಎರಡು ವರ್ಷಗಳಲ್ಲಿ ಸಿಗುವಂತಹದಲ್ಲ. ಅದಕ್ಕೆ ಬಹಳ ವರ್ಷಗಳ ಸತತ ಪ್ರಯತ್ನ ಬೇಕಾಗುತ್ತದೆ. ಸಕ್ಸಸ್‌ಫುಲ್‌ ಜೀವನಕ್ಕಿಂತ ಸಂತೃಪ್ತಿ ಜೀವನ ಮುಖ್ಯ. ಹಾಗಾಗಿ, ಕಲಾವಿದರು ಹಣಕ್ಕಿಂತ ಸಂತೃಪ್ತಿ ಜೀವನ ಇಷ್ಟಪಡುತ್ತಾರೆ’ ಎಂದು ತಿಳಿಸಿದರು.

ದಿ ಆರ್ಟ್ ಇಂಟಿಗ್ರೇಶನ್ ಸೊಸೈಟಿ ನಿರ್ದೇಶಕಿ ನೀಲಮ್ಮ ಎಂ.ಬೆಳಮಗಿ, ‘ಜೀವನದಲ್ಲಿ ಸಾಕಷ್ಟು ಅಡೆತಡೆಗಳು ಎದುರಾದರೂ ನಮ್ಮ ಗುರಿಯೆಡೆಗೆ ಮಾತ್ರ ಗಮನ ಇರಬೇಕು. ಇದರಿಂದ ಜೀವನದಲ್ಲಿ ಸಾಧನೆ ಸಾಧ್ಯ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಬಹಳಷ್ಟು ಸಾಧನೆ ಮಾಡಿದ್ದಾರೆ’ ಎಂದರು.

ಕಲಾವಿದ ಬಿ.ಎನ್‌.ಪಾಟೀಲ ಅವರು ತಮ್ಮ ಜೀವನದ ನೋವು–ನಲಿವು, ಏಳು–ಬೀಳುಗಳನ್ನು ಹಂಚಿಕೊಂಡರು. ತಮ್ಮ ಕರೆಗೆ ಓಗೊಟ್ಟು ಎ.ಎಸ್‌.ಪಾಟೀಲ ಸೇರಿದಂತೆ ಬಹಳಷ್ಟು ಜನ ಹಿರಿಯ ಕಲಾವಿದರು ಪ್ರದರ್ಶನದಲ್ಲಿ ಪಾಲ್ಗೊಂಡಿರುವುದಕ್ಕೆ ಕೃತಜ್ಞತೆ ಅರ್ಪಿಸಿದರು.

ಉಪನ್ಯಾಸಕ ಅಶೋಕ ಶೆಟಕಾರ ಅಧ್ಯಕ್ಷತೆ ವಹಿಸಿದ್ದರು. ಎಂ.ಎಚ್.ಬೆಳಮಗಿ ಮತ್ತು ನೀಲಮ್ಮ ಎಂ.ಬೆಳಮಗಿ ಅವರನ್ನು ಸತ್ಕರಿಸಲಾಯಿತು.

ಕಾವ್ಯ ಮತ್ತು ಗೌರಿ ಪ್ರಾರ್ಥಿಸಿದರು. ಚಿದಾನಂದ ಚಿಣಮಗೇರಿ ಸ್ವಾಗತಿಸಿದರು. ದೌಲತರಾಯ ದೇಸಾಯಿ ನಿರೂಪಿಸಿದರು. ಮಲ್ಲಿಕಾರ್ಜುನ ಸಿ.ಎಂ ವಂದಿಸಿದರು. ಪ್ರದರ್ಶನವು ನ.12ರವರೆಗೆ ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.

ಕಲೆ ಮತ್ತು ಸಂಸ್ಕೃತಿ ಇಲ್ಲದ ದೇಶ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾಗರಿಕತೆ ಬೆಳೆಯುವುದಕ್ಕಿಂತ ಮೊದಲು ಸಹ ಚಿತ್ರಕಲೆ ಇತ್ತು
ಅಶೋಕ ಶೆಟಕಾರ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.