ADVERTISEMENT

ಕಲಬುರಗಿ‌: ರಸ್ತೆ ದುರಸ್ತಿಗೆ ಆಗ್ರಹಿಸಿ ಬಿಎಸ್ಪಿಯಿಂದ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 4:06 IST
Last Updated 19 ಅಕ್ಟೋಬರ್ 2021, 4:06 IST
ಕಲಬುರಗಿಯ ಶರಣ ಸಿರಸಗಿ ಬಳಿ ರಸ್ತೆ ತಡೆ ನಡೆಸಿದ ಬಿಎಸ್ಪಿ ಕಾರ್ಯಕರ್ತರು–ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು
ಕಲಬುರಗಿಯ ಶರಣ ಸಿರಸಗಿ ಬಳಿ ರಸ್ತೆ ತಡೆ ನಡೆಸಿದ ಬಿಎಸ್ಪಿ ಕಾರ್ಯಕರ್ತರು–ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು   

ಕಲಬುರಗಿ‌: ನಗರದ ಹೊರವಲಯದ ಶರಣ ಸಿರಸಗಿ ಗ್ರಾಮದ ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ನಗರಕ್ಕೆ ಹೊಂದಿಕೊಂಡಿರುವ ನಿಸರ್ಗ ಕಾಲೊನಿ, ಖರ್ಗೆ ಕಾಲೊನಿಗೆ ಹೋಗುವ ರಸ್ತೆ ಹದಗೆಟ್ಟಿದ್ದು, ಕೂಡಲೇ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ನೇತೃತ್ವದಲ್ಲಿ ಬಡಾವಣೆ ನಿವಾಸಿಗಳು ಸೋಮವಾರ ಕೆಲ ಕಾಲ ರಸ್ತೆ ತಡೆ ನಡೆಸಿದರು.

ಇದರಿಂದಾಗಿ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಯಿತು. ಆಗ ಮಧ್ಯಪ್ರವೇಶಿಸಿದ ಪೊಲೀಸರು ರಸ್ತೆ ತಡೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆಲ ಹೊತ್ತು ಅಶೋಕ ನಗರ ಠಾಣೆ ಪೊಲೀಸರು ಹಾಗೂ ಬಿಎಸ್ಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ರಸ್ತೆ ತಡೆ ನಡೆಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಧಿಕಾರಿಗಳು ರಸ್ತೆಗೆ ಗರಸು ತಂದು ಹಾಕುವ ಮೂಲಕ ದುರಸ್ತಿಗೆ ಮುಂದಾದರು. ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಯಿತು. ಈ ಕುರಿತ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು.

ADVERTISEMENT

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ ಧನ್ನಿ, ರಾಜ್ಯ ಕಾರ್ಯದರ್ಶಿ ಎಲ್‌.ಆರ್. ಭೋಸ್ಲೆ, ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಸೂಗುರ, ಮುಖಂಡರಾದ ಸೂರ್ಯಕಾಂತ ನಿಂಬಾಳಕರ, ಕೆ. ಪ್ರಕಾಶ್, ಜೈಭೀಮ ಶಿಂಧೆ, ಗೋರಕನಾಥ ದೊಡ್ಡಮನಿ, ರಾಜೇಂದ್ರ ದಂಡೋತಿಕರ್, ಯಲ್ಲಪ್ಪ ಛಲವಾದಿ, ಸಿದ್ದರಾಮ ಪೂಜಾರಿ, ಮಂಜುನಾಥ ನಾಲವಾರಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.