ಕಲಬುರಗಿ: ‘ಬಿಹಾರದ ಬೌದ್ಧ ಗಯಾ, ಮಹಾರಾಷ್ಟ್ರದ ನಾಗಪುರ ಬುದ್ಧವಿಹಾರ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಜನಿಸಿದ ಮಧ್ಯಪ್ರದೇಶದ ಮಹೌ ಪ್ರದೇಶಗಳನ್ನು ಮನುವಾದಿಗಳ ಕಪಿ ಮುಷ್ಠಿಯಿಂದ ಬಿಡುಗಡೆಗೊಳಿಸಬೇಕು’ ಎಂದು ಒತ್ತಾಯಿಸಿ ಭಾರತೀಯ ಬೌದ್ಧ ಮಹಾಸಭಾದಿಂದ ನಗರದಲ್ಲಿ ಬುಧವಾರ ಜನಾಕ್ರೋಶ ಆಂದೋಲನ ನಡೆಯಿತು.
ಭಾರತೀಯ ಬೌದ್ಧ ಮಹಾಸಭಾದ ಉತ್ತರ ಕರ್ನಾಟಕ ರಾಜ್ಯ ಶಾಖೆ, ಮಹಿಳಾ ವಿಭಾಗ ಹಾಗೂ ಜಿಲ್ಲಾ ಘಟಕದಿಂದ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನೆ ನಡೆಯಿತು. ಈ ಸಂಬಂಧ ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಬಿಹಾರ್ ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಪುಟ್ಟಮಣಿ ದೇವಿದಾಸ್, ‘ಕೇಂದ್ರ ಸರ್ಕಾರವು ಬೌದ್ಧರಿಗೆ ಸೇರಬೇಕಾದ ಬಿಹಾರದ ಬೌದ್ಧ ಮಹಾವಿಹಾರ ಹಾಗೂ ಮಧ್ಯಪ್ರದೇಶದ ಮಹೌ ಪ್ರದೇಶ ಮತ್ತು ಮಹಾರಾಷ್ಟ್ರದ ನಾಗಪುರದ ವಿಹಾರವನ್ನು ಬೌದ್ಧರಿಗೆ ಬಿಟ್ಟು ಕೊಡುವಂತೆ ಮಧ್ಯಸ್ಥಿಕೆ ವಹಿಸಬೇಕು’ ಎಂದು ಒತ್ತಾಯಿಸಿದರು.
ಅನಿಲ್ ಟೆಂಗಳಿ ಮಾತನಾಡಿ, ‘ಪ್ರಧಾನಿಯವರು ವಿದೇಶಗಳಿಗೆ ಹೋದಾಗ ನಾನು ಬುದ್ಧನ ನಾಡಿನಿಂದ ಬಂದವನು ಎಂದು ನಾಟಕೀಯ ಮಾತು ಆಡುತ್ತಾರೆ. ಆದರೆ ಬುದ್ಧರ ನೆಲದಲ್ಲಿಯೇ ಬುದ್ಧರ ಪ್ರದೇಶ, ಬಾಬಾ ಸಾಹೇಬರ ಸ್ಥಳಗಳನ್ನು ಮನುವಾದಿಗಳ ಕೈಗೆ ಕೊಟ್ಟು ಬುದ್ಧರಿಗೆ, ಬಾಬಾಸಾಹೇಬರಿಗೆ ಅಪಮಾನಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
ಜನಾಕ್ರೋಶ ಆಂದೋಲನದಲ್ಲಿ ವಿ.ಟಿ.ಕಾಂಬ್ಳೆ, ಹೋರಾಟಗಾರ ಹಣಮಂತ ಬೋಧನಕರ, ಸಂತೋಷ್ ಮೇಲ್ಮನಿ, ಅಶ್ವಿನಿ ಮದನಕರ್, ಭವಾನಿ ಪ್ರಸಾದ, ವಿಜಯಕುಮಾರ್, ಶೇಖರ್, ಪರಶುರಾಮ್, ಪಂಡಿತ ಮದಗುಣಕಿ, ಗೌತಮಿ ಹಿರೋಳಿ, ಸುರೇಶ ಕಾನೇಕರ, ಸುನೀಲ ವಂಟಿ, ಸಂಧ್ಯಾ ಹಂಗರಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.