ADVERTISEMENT

ಕಲಬುರಗಿಯಲ್ಲಿ 371 (ಜೆ) ಸಂಪುಟ ಉಪ ಸಮಿತಿ ಸಭೆ ನಾಳೆ

ರಾಮುಲು ಸಮಿತಿ ಸಭೆ; ಹೆಚ್ಚಿದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 19:30 IST
Last Updated 9 ಫೆಬ್ರುವರಿ 2022, 19:30 IST
ಬಿ. ಶ್ರೀರಾಮುಲು
ಬಿ. ಶ್ರೀರಾಮುಲು   

ಕಲಬುರಗಿ: 371 (ಜೆ) ಕಲಂ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶೆಯ ಸಂಪುಟ ಉಪ ಸಮಿತಿಯ ಸಭೆ ಇದೇ 11ರಂದು ಬೆಳಿಗ್ಗೆ 11ಕ್ಕೆ ಇಲ್ಲಿಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ನಡೆಯಲಿದೆ.

ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯ ಈ ಸಮಿತಿಯಲ್ಲಿ, ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಸದಸ್ಯರಾಗಿದ್ದಾರೆ. ಅವರೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂವಿಧಾನಕ್ಕೆ371 (ಜೆ) ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕಪ್ರದೇಶಕ್ಕೆ ನೀಡಿರುವ ವಿಶೇಷ ಸ್ಥಾನಮಾನದಡಿಯಲ್ಲಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಹಾಗೂ ಪರಾಮರ್ಶಿಸುವುದು. ಸರ್ಕಾರಕ್ಕೆ ಕಾಲಕಾಲಕ್ಕೆ ಸಲಹೆ ನೀಡುವುದು ಈ ಉಪ ಸಮಿತಿಯ ಕೆಲಸ.

ADVERTISEMENT

ನೇಮಕಾತಿಗೆ ಅರ್ಜಿ ಸಲ್ಲಿಸುವಾಗ 371 (ಜೆ) ಮೀಸಲಾತಿ ಬಯಸಿದರೆ, ಮೆರಿಟ್‌ ಇದ್ದರೂ ತಮ್ಮನ್ನು ಕಲ್ಯಾಣ ಕರ್ನಾಟಕ ಭಾಗದ ಮೀಸಲಾತಿಗೆ ಸೀಮಿತಗೊಳಿಸಲಾಗುತ್ತಿದೆ. 2020ರಲ್ಲಿ ಹೊರಡಿಸಿರುವ ಈ ಸುತ್ತೋಲೆ ರದ್ದುಪಡಿಸಬೇಕು. ಮೆರಿಟ್‌ ಇದ್ದವರಿಗೆ ರಾಜ್ಯದ ಕೋಟಾದಡಿ ನೇಮಕಾತಿ ಮಾಡಿಕೊಳ್ಳಬೇಕು ಮತ್ತು ಉಳಿದವರನ್ನು ಕಲ್ಯಾಣ ಕರ್ನಾಟಕ ಮೀಸಲಾತಿ ಅಡಿ ನೇಮಕ ಮಾಡಿಕೊಳ್ಳಬೇಕು ಎಂಬುದು ಈ ಭಾಗದ ಅಭ್ಯರ್ಥಿಗಳ ಬೇಡಿಕೆಯಾಗಿದೆ.

ಇದೇ ಕಾರಣಕ್ಕೆಪಿಎಸ್‌ಐ ನೇಮಕಾತಿ ಸಂದರ್ಭದಲ್ಲಿ ಈ ಭಾಗದವರಿಗೆ ಅನ್ಯಾಯವಾಗಿದೆ ಎಂದು ಅಭ್ಯರ್ಥಿಗಳು ಅಷ್ಟೇ ಅಲ್ಲ, ಆಡಳಿತ–ವಿರೋಧ ಪಕ್ಷಗಳ ನಾಯಕರೂ ಆರೋಪಿಸಿದ್ದಾರೆ. ಹೀಗಾಗಿ ಈ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರ ತಡೆ ಹಿಡಿದಿದೆ.

ಈ ಸುತ್ತೋಲೆ ರದ್ದತಿ ಕುರಿತು ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಇಂಗಿತವನ್ನು ಸಚಿವ ಶ್ರೀರಾಮುಲು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮನವಿ: ‘ನೇಮಕಾತಿ ಹಾಗೂ ಪದೋನ್ನತಿಯಲ್ಲಿ 371 (ಜೆ) ಮೀಸಲಾತಿ ಪ್ರಕಾರ ಸಿಗುವ ಸೌಲಭ್ಯಗಳಿಂದ ಅರ್ಹರು ವಂಚಿತರಾಗುತ್ತಿದ್ದಾರೆ. ಈ ಭಾಗದವರಿಗೆ ಆಗುತ್ತಿರುವ ಅನ್ಯಾಯದ ಕುರಿತು ಸಂಪುಟ ಉಪಸಮಿತಿ ಸೂಕ್ತ ನಿರ್ಣಯ ಕೈಗೊಳ್ಳಬೇಕು‘ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷದತ್ತಾತ್ರೇಯ ಪಾಟೀಲ ರೇವೂರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.