
ವಾಡಿ: ಕಳೆದುಹೋದ ಅಥವಾ ಕಳುವಾದ ಫೋನ್‌ಗಳನ್ನು ಪತ್ತೆಹಚ್ಚುವಲ್ಲಿ ಸಿಇಐಆರ್ ದೊಡ್ಡ ಮಟ್ಟಿಗೆ ಸಹಾಯ ಮಾಡಿದೆ. ಒಮ್ಮೆ ಫೋನ್ ಸ್ವಿಚ್ ಆನ್ ಆದ ತಕ್ಷಣ ನಮಗೆ ಸ್ಥಳದ ಮಾಹಿತಿ ಸಿಗುತ್ತದೆ ಮತ್ತು ನಾವು ಕಾರ್ಯಪ್ರವೃತ್ತರಾಗುತ್ತೇವೆ ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಕಳುವಾಗಿದ್ದ ಒಟ್ಟು 15 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಿ, ಅವುಗಳ ವಾರಸುದಾರರಿಗೆ ಹಸ್ತಾಂತರಿಸಿದ ಬಳಿಕ ಅವರು ಮಾತನಾಡಿದರು.
ಭಾರತ ಸರ್ಕಾರವು ಕಳೆದುಹೋದ ಅಥವಾ ಕಳುವಾದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಲು ಮತ್ತು ಬ್ಲಾಕ್ ಮಾಡಲು ಪರಿಚಯಿಸಿದ ‘ಸಂಚಾರ್ ಸಾಥಿ’ ಪೋರ್ಟಲ್ ಮತ್ತು ಅದರಲ್ಲಿರುವ ಸಿಇಐಆರ್ ತಂತ್ರಾಂಶವು ಅತ್ಯಂತ ಯಶಸ್ವಿಯಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಸಾರ್ವಜನಿಕರು ತಮ್ಮ ಫೋನ್ ಕಳೆದುಹೋದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ಸೂಚಿಸಿದರು.
ಪಿಎಸ್ಐ ತಿರುಮಲೇಶ ಕೆ. ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮೊಬೈಲ್‌ನ ಇಎಂಇಐ ಸಂಖ್ಯೆಯನ್ನು ಕಡ್ಡಾಯವಾಗಿ ಎಲ್ಲಾದರೂ ಬರೆದಿಟ್ಟುಕೊಳ್ಳಬೇಕು. ಸಂಚಾರ್ ಸಾಥಿ ಪೋರ್ಟಲ್ ಅಥವಾ ಸಿಇಐಆರ್ ವೆಬ್‌ಸೈಟ್‌ಗೆ ಭೇಟಿ ನೀಡಿ ದೂರು ಸಲ್ಲಿಸುವಾಗ ಇಎಂಇಐ ಸಂಖ್ಯೆಯನ್ನು ತಪ್ಪದೇ ನಮೂದಿಸಬೇಕು ಎಂದುಸಲಹೆ ನೀಡಿದರು.
ಈ ವೇಳೆ ಕ್ರೈಂ ಪಿಎಸ್‌ಐ ರೇಣುಕಾ ಉಡಗಿ, ಎಎಸ್‌ಐ ಶರಣಪ್ಪ ಜಾಂಜಿ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.