
ಕಲಬುರಗಿ: ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ ಅವರ ನೇತೃತ್ವದಲ್ಲಿ ಕಲಬುರಗಿ ನಗರದ ಐವಾನ್ ಇ ಶಾಹಿ ಹೊಸ ಅತಿಥಿಗೃಹದ ಸಭಾಂಗಣದಲ್ಲಿ ರೈತ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್ ಅವರ ಜಯಂತ್ಯುತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಆರ್.ಪಾಟೀಲ, ‘ರೈತನಾಯಕ, ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್ ಅವರ ಹುಟ್ಟುಹಬ್ಬದಂದೇ ರೈತ ದಿನ ಆಚರಿಸಲಾಗುತ್ತಿದ್ದು, ಚರಣ್‌ಸಿಂಗ್ ತಮ್ಮ ಜೀವಿತಾವಧಿವರೆಗೂ ರೈತರ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು. ಕಳೆದ 11 ವರ್ಷಗಳಿಂದ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆ ನೀಡದೆ ಮೋಸ ಮಾಡುತ್ತಿದೆ’ ಎಂದು ಆರೋಪಿಸಿದರು.
‘ನಮ್ಮ ಸ್ಥಳೀಯ ಬೆಳೆಗಳಿಗೆ ಆದ್ಯತೆ ನೀಡದೆ ಬಹುಪ್ರಮಾಣದಲ್ಲಿ ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ಮೂಲಕ ಮಾರುಕಟ್ಟೆಯಲ್ಲಿ ರೈತರಿಗೆ ಸರಿಯಾದ ಬೆಲೆ ಸಿಗದೆ ಸಾಲ ಸೋಲ ಮಾಡಿಕೊಳ್ಳುತ್ತಿದ್ದಾರೆ. ಅದರ ಪರಿಣಾಮವೇ ಇಂದು ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಹೀಗಿರುವಾಗ ಮತದಾನ ಮಾಡುವಾಗ ರೈತರ ಸಮಸ್ಯೆ ಪರಿಹರಿಸುವ ಪಕ್ಷಗಳನ್ನು ಬೆಂಬಲಿಸಬೇಕು’ ಎಂದರು.
ಜಿ.ಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮರತೂರ, ಮಜರ್ ಹುಸೇನ್, ಸಿದ್ಧರಾಮ ಪ್ಯಾಟಿ, ಎಚ್.ಎಂ.ಪಟೇಲ್, ಗಣೇಶ್ ಪಾಟೀಲ, ಸಿದ್ಧರಾಮ ಪಾಟೀಲ, ಗುರುಶಾಂತ ಪಾಟೀಲ, ನಾಗೇಂದ್ರ ಕೋರೆ, ವಿರೂಪಾಕ್ಷಯ್ಯ, ರಾಜು ಬುದ್ಧಿವಂತ, ಶರಣು ವಾರದ, ಸಾತು ಪಾಟೀಲ, ಶಿವಾನಂದ ಪಾಟೀಲ, ಶರಣು ಭೂಸನೂರ ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.