
ಚಿಂಚೋಳಿ: ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ಚೆಟ್ಟಿನಾಡ ಸಿಮೆಂಟ್ ಕಂಪನಿ ವತಿಯಿಂದ ಶನಿವಾರ ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನ ನಡೆಸಿದರು.
ಗ್ರಾಮದ ಮುಖಂಡರಾದ ವೀರಾರೆಡ್ಡಿ ಪಾಟೀಲ, ಸುದರ್ಶನರೆಡ್ಡಿ ಪಾಟೀಲ, ಜಗನ್ನಾಥ ಈದಲಾಯಿ ಹಾಗೂ ಕಂಪೆನಿಯ ಜಂಟಿ ಅಧ್ಯಕ್ಷ ಎನ್.ರವಿಕುಮಾರ, ಸಹಾಯಕ ಉಪಾಧ್ಯಕ್ಷ(ಎವಿಪಿ) ಪುನ್ನೂರಿ ಶೇಖರಬಾಬು ಅವರು ಕಸ ಎತ್ತಿ ಹಾಕುವ ಮೂಲಕ ಚಾಲನೆ ನೀಡಿದರು.
2 ಜೆಸಿಬಿ, 3 ಟ್ರ್ಯಾಕ್ಟರ್, 40 ಕಾರ್ಮಿಕರು, 20 ಅಧಿಕಾರಿ ವೃಂದ ಮತ್ತು ಗ್ರಾಮದ ಮುಖಂಡರು ಸೇರಿ ಶ್ರಮದಾನ ನಡೆಸಿದರು. ಗ್ರಾಮದ ಹನುಮಾನ ಮಂದಿರ ಅಗಸಿ ಹಾಗೂ ವಿವಿಧ ಬಡಾವಣೆಗಳು ಹಾಗೂ ರಸ್ತೆ, ವಿವಿಧೆಡೆ ರಾಶಿಯಾಗಿ ಹಾಕಿದ್ದ ಕಸದ ಗುಡ್ಡೆ, ಪ್ಲಾಸ್ಟಿಕ್ ಮತ್ತಿತರ ವಸ್ತುಗಳು ತೆರವುಗೊಳಿಸಿ ಗ್ರಾಮ ದೇವಿಯ ಉತ್ಸವಕ್ಕೆ ಕೈಜೋಡಿಸಿದೆ.
ಶನಿವಾರ ಇಡೀದಿನ ಶ್ರಮದಾನ ನಡೆದಿದ್ದು, ಭಾನುವಾರ ಯಂತ್ರೋಪಕರಣಗಳಿಂದ ಅಳಿದುಳಿದ ಸ್ವಚ್ಛತೆ ನಡೆಯಲಿದೆ.
ಗ್ರಾಮದಲ್ಲಿ ಫೆ.20ರಿಂದ ಗ್ರಾಮದೇವತೆಯ ಜಾತ್ರೆ ನಡೆಯಲಿದ್ದು ಇದಕ್ಕೂ ಮೊದಲ್ಲೂ ನೈರ್ಮಲ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಸುಮಾರು 1 ಸಾವಿರ ಮನೆಗಳಿರುವ ಗ್ರಾಮವು ಕರ್ನಾಟಕ ತೆಲಂಗಾಣ ಗಡಿಗೆ ಹೊಂದಿಕೊಂಡಿದ್ದು, ಭಕ್ತಂಪಳ್ಳಿ ಮತ್ತು ಕಲ್ಲೂರು ಮಧ್ಯೆ ಕಂಪನಿ ಸ್ಥಾಪಿಸಲಾಗಿದೆ.
ಸ್ವಚ್ಛತೆ ಅಭಿಯಾನದಲ್ಲಿ ಮ್ಯಾಕಲ್ ಜಗನ್ನಾಥ, ಹಣಮಂತ ಬೋಯಿನ್, ಇಲ್ಯಾಸ್ ಹುಸೇನಿ, ಫಾರುಖ್, ಕಂಪೆನಿಯ ಸಂದೀಪರೆಡ್ಡಿ, ಪರಿಸರ ವಿಭಾಗದ ಎಂಜಿನಿಯರ್ ಸುನೀಲಕುಮಾರ, ಗುಣಮಟ್ಟ ಮುಖ್ಯಸ್ಥರಾದ ಸುಂಧೀಂದ್ರ ಮಿರ್ಜಿಕರ್, ಪ್ರಭಾಕರರೆಡ್ಡಿ, ಭೀಮರೆಡ್ಡಿ, ಸಿವಿಲ್ ವಿಭಾಗದ ಮುಖ್ಯಸ್ಥರಾದ ನಿಖಿಲ ಕುಲಕರ್ಣಿ ಮೊದಲಾದವರು ಇದ್ದರು.
ಕಲ್ಲೂರು ಗ್ರಾಮದಲ್ಲಿ ₹ 30 ಲಕ್ಷ ವೆಚ್ಚ ಮಾಡಿ ಗ್ರಾಮದೇವತೆಯ ದೇವಾಲಯ ನಿರ್ಮಿಸಿಕೊಟ್ಟಿರುವ ಚೆಟ್ಟಿನಾಡ ಸಿಮೆಂಟ ಕಂಪನಿ ಗ್ರಾಮ ದೇವತೆ ಉತ್ಸವ ಪ್ರಯುಕ್ತ ಸ್ವಚ್ಛತಾ ಅಭಿಯಾನ ನಡೆಸಿ ಸಮಗ್ರ ಸ್ವಚ್ಛತೆಗೆ ಮುಂದಾಗಿರುವುದು ಗ್ರಾಮಸ್ಥರಿಗೆ ಸಂತಸ ತಂದಿದೆಜಗನ್ನಾಥ ಈದಲಾಯಿ ಗ್ರಾಮದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.