ಹೆಸರು ಬೆಳೆಯ ಹೂ-ಚೆಳ್ಳಿಯ ಚುಲುವು... ಚಿಂಚೋಳಿ ತಾಲ್ಲೂಕಿನ ಚಿಮ್ಮಾಈದಲಾಯಿ ಗ್ರಾಮದ ಬಸವಣಪ್ಪ ತಾಡಪಳ್ಳಿ ಅವರ ಹೊಲದಲ್ಲಿ ಹುಲುಸಾಗಿ ಬೆಳೆದ ಹೆಸರು ಬೆಳೆಯಲ್ಲಿ ಎಲೆ ತಿನ್ನುವ ಹುಳುಗಳನ್ನು ಶೋಧಿಸುತ್ತಿರುವುದು
ಪ್ರಜಾವಾಣಿ ಚಿತ್ರ/ಜಗನ್ನಾಥ ಡಿ. ಶೇರಿಕಾರ
ಚಿಂಚೋಳಿ: ತಾಲ್ಲೂಕಿನಲ್ಲಿ ಹೆಸರು ಬೆಳೆ ಹುಲುಸಾಗಿ ಬೆಳೆದು ಹೂವು-ಚೆಳ್ಳಿಯೊಂದಿಗೆ ನಳನಳಿಸುತ್ತಿದ್ದು ಬಂಪರ್ ಉಳುವರಿಯ ನಿರೀಕ್ಷೆಯಲ್ಲಿ ಬೆಳೆಗಾರರು ಇದ್ದಾರೆ.
ತಾಲ್ಲೂಕಿನಲ್ಲಿ ಮುಂಗಾರು ಆಶಾದಾಯಕವಾಗಿದ್ದು ಬೆಳೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ 10 ದಿನಗಳಿಂದ ನಿತ್ಯ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ಕಳೆ ಹೆಚ್ಚಾಗಿದೆ. 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೆಸರು ಬೆಳೆ ಹೂವಾಡುವ ಮತ್ತು ಚೆಳ್ಳಿ ಕಚ್ಚುವ ಹಂತದಲ್ಲಿದೆ. ಸಧ್ಯ ಮಳೆ ಬಿಡುವು ನೀಡಬೇಕೆಂದು ರೈತರು ಮುಗಿಲಿನತ್ತ ಮುಖ ಮಾಡಿದ್ದಾರೆ.
‘ಮಳೆ ಬಿಡುವು ನೀಡದೇ ಹೋದರೆ ಬೆಳೆಗೆ ಆಪತ್ತು ಎದುರಾಗುವ ಸಾಧ್ಯತೆಯಿದೆ’ ಎಂದು ಚಿಮ್ಮಾಈದಲಾಯಿ ಗ್ರಾಮದ ರೈತ ಬಸವಣಪ್ಪ ತಾಳಪಳ್ಳಿ ತಿಳಿಸಿದರು.
ನಿರಂತರ ಮಳೆಯಿಂದ ಅಲ್ಲಲ್ಲಿ ಹೆಸರು ಬೆಳೆಯಲ್ಲಿ ಎಲೆ ತಿನ್ನುವ ಚರಂತಿ ಹುಳುಗಳು ಕಾಣಿಸುತ್ತಿದ್ದು ಕೃಷಿ ಅಧಿಕಾರಿಗಳ ಸಲಹೆ ಪಡೆದು ಔಷಧ ಸಿಂಪಡಣೆ ಮಾಡಲಾಗುವುದು ಎಂದರು.
ತಾಲ್ಲೂಕಿನಲ್ಲಿ ಜೂನ್‌ನಿಂದ ಇವರೆಗೆ 343.9 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ ಜು 26ವರೆಗೆ 419.2 ಮಿ.ಮೀ ಮಳೆಯಾಗಿದೆ. ಇದು ಶೇ 22ರಷ್ಟು ಅಧಿಕ.
13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಉದ್ದು, 7ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ, 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ.
ಸಧ್ಯ ಉದ್ದು ಹೆಸರು, ತೊಗರಿ ಬೆಳೆಯು ಬೆಳವಣಿಗೆ ಹಂತದಲ್ಲಿದೆ. ರೈತರು ತೊಗರಿ ಬೆಳೆಯ ಚಂಡಿ ಚಿವುಟಿದರೆ ಉತ್ತಮ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್ ತಿಳಿಸಿದರು.
ಬೆಳೆ ವಿಮೆ ಮಾಡಿಸಲು ಸಲಹೆ.
ಮುಂಗಾರು ಹಂಗಾಮಿನ ಬೆಳೆಗಳಾದ ಉದ್ದು, ಹೆಸರು, ತೊಗರಿ, ಸೋಯಾ ಮೊದಲಾದ ಬೆಳೆಗಳಿಗೆ ವಿಮೆ ಮಾಡಿಸಲು ಜು.31 ಕೊನೆಯ ದಿನವಾಗಿದ್ದು ರೈತರು ಕೊನೆಯ ದಿನಕ್ಕಾಗಿ ಕಾಯದೆ ವಿಮೆ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್ ತಿಳಿಸಿದರು.
ಈವರೆಗೆ ತಾಲ್ಲೂಕಿನಲ್ಲಿ 9,500 ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ ಇದು ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದಂತಾಗಿದೆ. ಕಳೆದ ವರ್ಷ 23ಸಾವಿರ ರೈತರು ವಿಮೆ ಮಾಡಿಸಿದ್ದರು. ನೆರೆಯ ಆಳಂದ ತಾಲ್ಲೂಕಿನಲ್ಲಿ ಈವರೆಗೆ 52 ಸಾವಿರ ರೈತರು ವಿಮೆ ನೋಂದಣಿ ಮಾಡಿಸಿದ್ದಾರೆ ಎಂದರು.
ಸೋಂಪೊ ಜನರಲ್ ಇನಸುರೆನ್ಸ್ ಕಂಪನಿಯನ್ನು ಕೈಬಿಟ್ಟು ಇಫ್ಕೊ ಟೊಕಿಯೊ ವಿಮಾ ಕಂಪೆನಿಗೆ ಕಲಬುರಗಿ ಜಿಲ್ಲೆ ಹೊಣೆ ಹೊರಿಸಲಾಗಿದೆ. ಪ್ರಸಕ್ತ ವರ್ಷ ಹೆಚ್ಚು ರೈತರು ವಿಮೆ ಮಾಡಿಸಿದರೆ ಅವರ ಬೆಳೆ ಹಾನಿಯಾದರೆ ಹೆಚ್ಚು ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದರು.
Highlights - 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೇಸಾಯ ವಾಡಿಕೆಗಿಂತಲೂ ಶೇ 22 ಅಧಿಕ ಮಳೆ ಬೆಳೆ ವಿಮಾ ನೋಂದಣಿಗೆ ರೈತರ ನೀಸರ ಪ್ರತಿಕ್ರಿಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.