ADVERTISEMENT

ಚಿತ್ತಾಪುರ: ಕೆಆರ್‌ಐಡಿಎಲ್ ಮರಳು ದಾಸ್ತಾನು ಅಡ್ಡೆಗೆ ಬೀಗ

ಕಾಗಿಣಾ ನದಿ ಪರಿಸರದಲ್ಲಿ ಸ್ತಬ್ಧಗೊಂಡ ಮರಳು ಗಣಿಗಾರಿಕೆ

ಮಲ್ಲಿಕಾರ್ಜುನ ಎಚ್.ಎಂ
Published 18 ಏಪ್ರಿಲ್ 2025, 6:43 IST
Last Updated 18 ಏಪ್ರಿಲ್ 2025, 6:43 IST
ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಗ್ರಾಮದ ಬಾಂದಾರ ಸೇತುವೆ ಪಕ್ಕದಲ್ಲಿ ಕೆ.ಅರ್.ಐ.ಡಿ.ಎಲ್ ಸ್ಥಾಪಿಸಿರುವ ಮರಳು ದಾಸ್ತಾನು ಅಡ್ಡೆಯಲ್ಲಿ ಸಂಗ್ರಹಿಸಿದ ಮರಳಿನ ಮೇಲೆ ಮಣ್ಣು ಹಾಕಿ ಮರಳು ಗೋಚರಿಸದಂತೆ ಮುಚ್ಚುತ್ತಿರುವುದು
ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಗ್ರಾಮದ ಬಾಂದಾರ ಸೇತುವೆ ಪಕ್ಕದಲ್ಲಿ ಕೆ.ಅರ್.ಐ.ಡಿ.ಎಲ್ ಸ್ಥಾಪಿಸಿರುವ ಮರಳು ದಾಸ್ತಾನು ಅಡ್ಡೆಯಲ್ಲಿ ಸಂಗ್ರಹಿಸಿದ ಮರಳಿನ ಮೇಲೆ ಮಣ್ಣು ಹಾಕಿ ಮರಳು ಗೋಚರಿಸದಂತೆ ಮುಚ್ಚುತ್ತಿರುವುದು   

ಚಿತ್ತಾಪುರ: ತಾಲ್ಲೂಕಿನ ಭಾಗೋಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಬಾಂದಾರ ಸೇತುವೆ ಪಕ್ಕದಲ್ಲಿ ಮರಳು ದಾಸ್ತಾನು ಮಾಡಿಕೊಳ್ಳಲೆಂದು ಕೆಆರ್‌ಐಡಿಎಲ್ ಸ್ಥಾಪಿಸಿರುವ ಮರಳು ದಾಸ್ತಾನು ಅಡ್ಡೆಯ ಗೇಟಿನ ಬಾಗಿಲು ಮುಚ್ಚಿ ಬೀಗ ಜಡಿಯಲಾಗಿದೆ.

ದಾಸ್ತಾನು ಸ್ಥಳದಲ್ಲಿ ಸಂಗ್ರಹ ಮಾಡಿರುವ ಮರಳಿನ ಮೇಲೆ ಮಣ್ಣು ಸುರಿದು ಮರಳು ಮುಚ್ಚುವ ಕೆಲಸ ನಡೆದಿರುವುದು ಬುಧವಾರ ಕಂಡು ಬಂದಿದೆ.

‘ಪ್ರಜಾವಾಣಿ’ಯು ಏ.13ರ ಸಂಚಿಕೆಯಲ್ಲಿ ‘ಮರಳು ವಾಹನ ಓಡಾಟದಿಂದ ಹದಗೆಟ್ಟ ರಸ್ತೆ’ ಹಾಗೂ ಏ.15ರ ಸಂಚಿಕೆಯಲ್ಲಿ ‘ಸರ್ಕಾರಿ ಅಡ್ಡೆಯಲ್ಲಿ ಖಾಸಗಿ ದರ್ಬಾರು’ ಶೀರ್ಷಿಕೆಯಡಿ ವಿಶೇಷ ವರದಿಗಳನ್ನು ಪ್ರಕಟಿಸುವ ಮೂಲಕ ಆಡಳಿತದ ಗಮನ ಸೆಳೆದಿತ್ತು.

ADVERTISEMENT

ಮರಳು ದಾಸ್ತಾನು ಅಡ್ಡೆಯಲ್ಲಿ ಸಂಗ್ರಹಿಸಿರುವ ಅಂದಾಜು ಸಾವಿರ ಟಿಪ್ಪರ್‌ನಷ್ಟು ಮರಳಿನ ಮೇಲೆ ಮಣ್ಣು ಸುರಿದು ಮುಚ್ಚಲಾಗುತ್ತಿದೆ. ಕೆಆರ್‌ಐಡಿಎಲ್ ಅಧಿಕಾರಿಗಳು ಮಣ್ಣಿನಿಂದ ಮರಳು ಮುಚ್ಚುವ ತಂತ್ರ ಅನುಸರಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ಮರಳು ಸಾಗಿಸಲೆಂದು ನಿಲ್ಲಿಸುತ್ತಿದ್ದ ಟಿಪ್ಪರ್ ಮಂಗಳವಾರ ರಾತ್ರಿಯೇ ಜಾಗ ಖಾಲಿ ಮಾಡಿವೆ. ನದಿಯಲ್ಲಿ ಮರಳು ಅಗೆದು ತೆಗೆಯುತ್ತಿದ್ದ ಬೃಹತ್ ಗಾತ್ರದ ಹಲವು ಹಿಟಾಚಿ ಯಂತ್ರ, ಜೆಸಿಬಿ ಯಂತ್ರ ನದಿಯಿಂದ ತೆರವು ಮಾಡಲಾಗಿದೆ. ಕೆಲವು ಯಂತ್ರ ಅಲ್ಲಲ್ಲಿ ನಿಲ್ಲಿಸಲಾಗಿದೆ. ನದಿಯ ಪಾತ್ರದಲ್ಲಿನ ಮರಳು ಗಣಿಗಾರಿಕೆ ಸ್ತಬ್ಧಗೊಂಡಿದೆ. ಕೆಲವು ಖಾಸಗಿ ಪಟ್ಟಾ ಜಮೀನುಗಳಲ್ಲಿ ನಡೆಯುತ್ತಿದ್ದ ಮರಳು ಗಣಿಗಾರಿಕೆಯನ್ನೂ ಬಂದ್ ಮಾಡಿಸಲಾಗಿದೆ.

ಮರಳು ತೆಗೆದ ಬೃಹತ್ ಗುಂಡಿ ಮುಚ್ಚಲು ಮಣ್ಣು ಸುರಿಯುವ ಕೆಲಸ ಶುರುವಾಗಿದೆ. ಹಗಲು ರಾತ್ರಿ ಮರಳು ತುಂಬಿಕೊಂಡು ಓಡಾಡುತ್ತಿದ್ದ ಟಿಪ್ಪರ್ ಸಂಚಾರ ಸ್ತಬ್ಧಗೊಂಡಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕೆಆರ್‌ಐಡಿಎಲ್ ಇಲಾಖೆಗೆ ಅಧಿಕೃತ ಮರಳು ಗುತ್ತಿಗೆಯ ಪರವಾನಗಿ ನೀಡಿದ್ದರೆ ಮರಳು ಗಣಿಗಾರಿಕೆ ಬಂದ್ ಮಾಡಿ, ದಾಸ್ತಾನು ಅಡ್ಡೆಯ ಬಾಗಿಲಿಗೆ ಬೀಗ ಹಾಕಿದ್ದು ಏಕೆ? ಮರಳು ಗಣಿಗಾರಿಕೆಗೆ ಪರವಾನಗಿ ನೀಡಿದ್ದ ಖಾಸಗಿ ಪಟ್ಟಾ ಜಮೀನುಗಳಲ್ಲಿ ನಡೆಯುತ್ತಿದ್ದ ಮರಳು ಗಣಿಗಾರಿಕೆ ಬಂದ್ ಮಾಡಿಸಿದ್ದು ಏಕೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.